ಬಗೆಬಗೆಯ ನಾಟಕವಾಡುವ ಪ್ರಿಯಾಂಕ್ ಖರ್ಗೆ, ತಾಕತ್ತು ಇದ್ದರೆ ಕಲ್ಯಾಣ ಕರ್ನಾಟಕ ಶಾಲೆಗಳ ದುಸ್ಥಿತಿ ಕುರಿತು ಶೋ ಮ್ಯಾನ್‌ ಡಿಕೆಶಿಗೆ ಪತ್ರ ಬರೆಯಿರಿ!

ಕಲ್ಯಾಣ ಕರ್ನಾಟಕ ಭಾಗದ 18,022 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, 10,535 ಕೊಠಡಿಗಳಿಗೆ ತುರ್ತು ದುರಸ್ತಿ ಅಗತ್ಯವಿದೆ. 8,006 ಕೊಠಡಿಗಳು ಸಂಪೂರ್ಣವಾಗಿ ಕಲಿಕೆಗೆ ಯೋಗ್ಯವಾಗಿಲ್ಲ.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳ ಶಿಥಿಲಾವಸ್ಥೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪಕ್ಷದ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಾವಿರಾರು ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದೆ.

ಹೈಕಮಾಂಡ್‌ ಮೆಚ್ಚಿಸಲು ವಿವಿಧ ರೀತಿಯ ನಾಟಕವಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಿಜವಾಗಿಯೂ ತಾಕತ್ತು ಇದ್ದರೆ, ಕಲ್ಯಾಣ ಕರ್ನಾಟಕದ ಶಾಲೆಗಳ ದುಸ್ಥಿತಿಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆಯಲಿ" ಎಂದೂ ಸವಾಲು ಹಾಕಿದೆ.

ಕಲ್ಯಾಣ ಕರ್ನಾಟಕ ಭಾಗದ 18,022 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, 10,535 ಕೊಠಡಿಗಳಿಗೆ ತುರ್ತು ದುರಸ್ತಿ ಅಗತ್ಯವಿದೆ. 8,006 ಕೊಠಡಿಗಳು ಸಂಪೂರ್ಣವಾಗಿ ಕಲಿಕೆಗೆ ಯೋಗ್ಯವಾಗಿಲ್ಲ ಎಂದು ಸರ್ಕಾರದ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್‌ಗಳ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಶಾಲೆಗಳ ಸ್ಥಿತಿ ಆತಂಕಕಾರಿಯಾಗಿದೆ.

ಕಲ್ಯಾಣ ಕರ್ನಾಟಕದ ಶಾಲೆಗಳ ಗೋಡೆಗಳು ಕುಸಿಯುತ್ತಿದ್ದು, ಸಾವಿರಾರು ಬಡ ಮಕ್ಕಳು ಜೀವ ಭಯದಲ್ಲಿ ಪಾಠ ಕಲಿಯುವಂತಾಗಿದೆ. ಸಿಮೆಂಟ್ ಉದುರಿದ ಮೇಲ್ಚಾವಣಿ, ಬಿರುಕು ಬಿಟ್ಟ ಗೋಡೆಗಳ ನಡುವೆ ಬಡ ಮಕ್ಕಳಿಗೆ ಜೀವಭಯದಲ್ಲೇ ಶಿಕ್ಷಣ ಪಡೆಯುವ ದುಸ್ಥಿತಿ ಬಂದಿದೆ.

ಹೈಕಮಾಂಡ್‌ ಮೆಚ್ಚಿಸಲು ಬಗೆ ಬಗೆಯ ನಾಟಕವಾಡುವ ಮಾನ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮಗೆ ತಾಕತ್ತು ಇದ್ದರೇ ಕಲ್ಯಾಣ ಕರ್ನಾಟಕದ ಶಾಲೆಗಳ ದುಸ್ಥಿತಿ ಕುರಿತು ಶೋ ಮ್ಯಾನ್‌ ಸಿಎಂ ಡಿಕೆ.ಶಿವಕುಮಾರ್ ಅವರಿಗೆ ಪತ್ರ ಬರೆಯಿರಿ ಎಂದು ಸವಾಲು ಹಾಕಿದೆ.

ಇದಲ್ಲದೆ, ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲದ ಕಾರಣ ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದೂ ಟೀಕಿಸಿದ್ದು, ಕಲ್ಯಾಣ ಕರ್ನಾಟಕದ ಬಡ ಮಕ್ಕಳ ಭವಿಷ್ಯದ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಸರ್ಕಾರ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಖಾಲಿ ಇರುವ 3000 ಬೋಧಕ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ನೆನೆಗುದಿಗೆ ಇಟ್ಟು ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಶಿಕ್ಷಣದಂತಹ ಮೂಲಭೂತ ಕ್ಷೇತ್ರಕ್ಕೆ ಆದ್ಯತೆ ನೀಡದ ಈ ಸರ್ಕಾರದ ಆಡಳಿತ ವೈಫಲ್ಯವು ರಾಜ್ಯದ ಶೈಕ್ಷಣಿಕ ಪ್ರಗತಿಯನ್ನು ದಶಕಗಳಷ್ಟು ಹಿಂದಕ್ಕೆ ತಳ್ಳುತ್ತಿದೆ.

Priyank Kharge
'ದಲಿತರನ್ನು ಅಧಿಕಾರಕ್ಕೆ ಬಳಸಿಕೊಂಡು ಬಳಿಕ ಮೂಲೆಗುಂಪು ಮಾಡೋದು ನಿಮ್ಮ ಸಂಸ್ಕೃತಿ': ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

ಇನ್ನಾದರೂ ಕಾಂಗ್ರೆಸ್ ಸರ್ಕಾರ ತನ್ನ ಬೇಜವಾಬ್ದಾರಿತನವನ್ನು ಬಿಟ್ಟು, ತಕ್ಷಣವೇ 3000 ಬೋಧಕರ ನೇಮಕಾತಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಹಾಗೂ ನಿರುದ್ಯೋಗಿ ಅಭ್ಯರ್ಥಿಗಳ ಹಿತ ಕಾಯಬೇಕು ಎಂದು ಹೇಳಿದೆ.

ಇದೇ ವೇಳೆ ಸಾರಿಗೆ ವ್ಯವಸ್ಥೆ ಕುರಿತಂತೆಯೂ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಕರ್ನಾಟಕದ ಹೆಮ್ಮೆಯ ಸಾರಿಗೆ ಸಂಸ್ಥೆಗಳು ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಇಂದು ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಸೊರಗಿಹೋಗಿವೆ. ಸಮರ್ಪಕ ಬಸ್‌ಗಳಿಲ್ಲದೆ ಗ್ರಾಮೀಣ ಪ್ರದೇಶದ ಜನರು ಪರದಾಡುತ್ತಿದ್ದಾರೆ,

ಇರೋ ಬಸ್‌ಗಳಲ್ಲೋ ಕನಿಷ್ಠ ಸೌಲಭ್ಯಗಳೂ ಇಲ್ಲದ ದುಸ್ಥಿತಿ ಎದುರಾಗಿದೆ. ದಿನನಿತ್ಯ ಲಕ್ಷಾಂತರ ಜನರನ್ನು ಹೊತ್ತು ಸಾಗುವ ಸಾರಿಗೆ ವ್ಯವಸ್ಥೆ ಇಂದು ನಿರ್ಲಕ್ಷ್ಯದ ಪರಾಕಾಷ್ಠೆ ತಲುಪಿದೆ. ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಈ ಕಾಂಗ್ರೆಸ್ ಸರ್ಕಾರದಿಂದ ಜನಪರವಾದ ಯಾವುದೇ ಸುಧಾರಣೆಯನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com