

ಬೆಂಗಳೂರು: ದಲಿತರು, ಶೂದ್ರರು ಹಾಗೂ ಶೋಷಿತರ ಧ್ವನಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರು ಸಂಸತ್ತಿಗೆ ಬರದಂತೆ ತಡೆದ ಕರಾಳ ಇತಿಹಾಸ ಇರುವುದು ನಿಮ್ಮದೇ ಕಾಂಗ್ರೆಸ್ ಪಕ್ಷಕ್ಕೆ ಅಲ್ಲವೇ? ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದ್ದು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಪಕ್ಷದ ಅಧಿಕೃತ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಅಹಿಂದ ಚಾಂಪಿಯನ್ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸಿದ್ದರಾಮಯ್ಯ ಅವರೇ, ದಲಿತರು, ಶೂದ್ರರು ಹಾಗೂ ಶೋಷಿತರ ಧ್ವನಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರು ಸಂಸತ್ತಿಗೆ ಬರದಂತೆ ತಡೆದ ಕರಾಳ ಇತಿಹಾಸ ಇರುವುದು ನಿಮ್ಮದೇ ಕಾಂಗ್ರೆಸ್ ಪಕ್ಷಕ್ಕೆ ಅಲ್ಲವೇ? ಎಂದು ಪ್ರಶ್ನಿಸಿದೆ.
ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ದಶಕಗಳ ಕಾಲ ಸತಾಯಿಸಿದ ನಿಮ್ಮ ಪಕ್ಷದ ಇತಿಹಾಸ ನಿಮಗೆ ನೆನಪಿಲ್ಲವೇ? ಮರೆತುಹೋಗಿದ್ದರೆ, ನಿಮ್ಮದೇ ಪಕ್ಷದ ನಾಯಕ ರಮೇಶ್ ಕುಮಾರ್ ಅವರು ಅಂದು ಸದನದಲ್ಲೇ ನಿಂತು 'ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಮಹಾ ದ್ರೋಹ ಮಾಡಿತು' ಎಂದು ಬಿಚ್ಚಿಟ್ಟ ಕಟು ಸತ್ಯದ ಮಾತುಗಳನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ.
ಅಂದು ಬಾಬಾಸಾಹೇಬರ ಹಕ್ಕುಗಳನ್ನು ತುಳಿದು ಅನ್ಯಾಯ ಮಾಡಿದವರ ಮಡಿಲಲ್ಲೇ ಆಶ್ರಯ ಪಡೆದ ನೀವೆಲ್ಲಾ ಇಂದು ಸಾಮಾಜಿಕ ನ್ಯಾಯದ ಸೋಗು ಹಾಕುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದೆ.
ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತೇ ಹೊರತು, ಶೋಷಿತ ಸಮುದಾಯಗಳ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹಿಂದುಳಿದವರನ್ನು ಕೇವಲ ಮತಪೆಟ್ಟಿಗೆಯಾಗಿ ಬಳಸಿಕೊಳ್ಳುತ್ತಿದೆ ಅಷ್ಟೆ. ಕಾಂಗ್ರೆಸ್ಸಿನ ಇಂತಹ ಸರ್ವಾಧಿಕಾರಿ ಸಂಸ್ಕೃತಿಗೆ ನೀವು ಗುಲಾಮರಾಗಿದ್ದೀರಿಯೇ ಹೊರತು, ರಾಷ್ಟ್ರೀಯತೆಯ ಉಳಿವಿಗೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷವಲ್ಲ.
ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆಯೇ ನಿಮ್ಮನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಮೂಲೆಗುಂಪು ಮಾಡಿದೆ. ಕನಿಷ್ಠ ಪಕ್ಷ ಪಕ್ಷದ ವೇದಿಕೆಗಳಲ್ಲಾಗಲಿ, ಪೋಸ್ಟರ್‌ಗಳಲ್ಲಾಗಲಿ ಭಾವಚಿತ್ರವನ್ನೂ ಬಳಸದಷ್ಟು ನಿಮ್ಮನ್ನು ಕಡೆಗಣಿಸಲಾಗುತ್ತಿದೆ. ಮತ್ತೊಂದೆಡೆ, ಹಿರಿಯ ದಲಿತ ನಾಯಕರಾದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರವನ್ನು ಸರ್ಕಾರದ ಅಧಿಕೃತ ಜಾಹಿರಾತುಗಳಲ್ಲೇ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ. ಹಿಂದುಳಿದ ಮತ್ತು ದಲಿತ ಸಮುದಾಯದ ನಾಯಕರನ್ನು ಕೇವಲ ಅಧಿಕಾರ ಹಿಡಿಯಲು ದಾಳವಾಗಿ ಬಳಸಿ, ನಂತರ ಮೂಲೆಗುಂಪು ಮಾಡುವುದು ಕಾಂಗ್ರೆಸ್‌ನ ರಕ್ತದಲ್ಲೇ ಬಂದಿದೆ ಎಂದು ವಾಗ್ದಾಳಿ ನಡೆಸಿದೆ.