

ಹಾಸನ : ಸ್ವರೂಪ್ ಅವರು ಶಾಸಕ ಆದ ತಕ್ಷಣ ಅವರಿಗೆ ಯಾರೂ ಜಿಪಿಎ ಕೊಡಲಿಲ್ಲ. ಗೆದ್ದವರಿಗೆ ಟಿಕೆಟ್ ಕೊಡಬೇಕೆಂದರೆ ಜೆಡಿಎಸ್ ಶಾಸಕರು 18 ಮಂದಿ ಇದ್ದಾರೆ. ಅವರಿಗೆ ಅಷ್ಟೇ ಬಿ.ಫಾರಂ ಸಾಕಾ? ಅವರೇ 70–80 ಸೀಟು ಕೇಳುತ್ತಿದ್ದಾರೆ. ಹಿಂದೆ ಚನ್ನಪಟ್ಟಣದಲ್ಲಿ ಏನಾಯಿತು, ಮುಂದೆ ಹಾಸನ ಕ್ಷೇತ್ರದಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸ್ವರೂಪ್ ಬಿಸಿ ರಕ್ತದಲ್ಲಿ ಮಾತನಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಜನರ ಪರವಾಗಿ ಉತ್ತಮ ಕೆಲಸ ಮಾಡಲಿ. ಅಭಿವೃದ್ಧಿ ಕೆಲಸಗಳ ಮೂಲಕ ಜನರ ವಿಶ್ವಾಸ ಗಳಿಸಲಿ ಎಂದರು. ಮುಂದಿನ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎನ್‌ಡಿಎ ಇದೆ.
ಹಾಲಿ ಶಾಸಕರು ಜನರ ನಿರೀಕ್ಷೆ ಈಡೇರಿಸದೆ ಜನರ ಆಕ್ರೋಶಕ್ಕೆ ಗುರಿಯಾದರೆ ನಾನು ಅಭ್ಯರ್ಥಿಯಾಗುತ್ತೇನೆ. ಆದರೆ ಅವರು ಅಭ್ಯರ್ಥಿಯಾದರೆ ನಾವೆಲ್ಲ ಸೇರಿ ಅವರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮಿಬ್ಬರನ್ನು ಬಿಟ್ಟು ಪಕ್ಷ ಬೇರೆ ಯಾರಿಗಾದರೂ ಟಿಕೆಟ್ ನೀಡಿದರೂ ಅವರ ಗೆಲುವಿಗಾಗಿ ಸಂಪೂರ್ಣ ಶ್ರಮಿಸುತ್ತೇವೆ ಎಂದು ಹೇಳಿದರು.
ಪ್ರೀತಂ ಗೌಡರ ಬಗ್ಗೆ ಆಳ-ಅಗಲ ಗೊತ್ತಿಲ್ಲದವರು ಮಾತನಾಡುತ್ತಾರೆ. ನನ್ನ ಶಕ್ತಿ ಏನು ಎಂಬುದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಚೆನ್ನಾಗಿ ಗೊತ್ತಿದೆ. ಕಾರ್ಯಕರ್ತರ ಅಭಿಮಾನ ಮತ್ತು ಬೆಂಬಲವೇ ನನ್ನ ದೊಡ್ಡ ಶಕ್ತಿ ಎಂದರು. ಪ್ರೀತಂ ಗೌಡ ಬೇಡ ಎಂದು ಪಕ್ಷ ಹೇಳಿದರೆ ನಾನು ರಾಜಕೀಯದಿಂದ ವಿಶ್ರಾಂತಿ ಪಡೆಯಲು ಸಿದ್ಧ. ಪಕ್ಷದ ನಿರ್ಧಾರವೇ ನನಗೆ ಅಂತಿಮ ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕ ಸ್ವರೂಪ್ ಪ್ರಕಾಶ್ ಅವರ ರಾಜಕೀಯ ಹಿನ್ನೆಲೆಯನ್ನು ಉಲ್ಲೇಖಿಸಿದ ಪ್ರೀತಂ ಗೌಡ, "ಅವರು ಹೊಸದಾಗಿ ರಾಜಕೀಯಕ್ಕೆ ಬಂದವರು. ಪ್ರತಿದಿನ ಲಾಟರಿ ಟಿಕೆಟ್ ಹೊಡೆಯುವುದಿಲ್ಲ. ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದರು. ಅನುಕಂಪ ಮತ್ತು ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಪ್ರತಿಯೊಂದು ಚುನಾವಣೆಯೂ ಒಂದೇ ರೀತಿಯಾಗಿರುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.