'ಕುರ್ಚಿಗೆ ಅಂಟಿಕೊಂಡು ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೀರಲ್ಲ, ಇದು ನಿಮ್ಮ ರಾಜಕೀಯ ಜೀವನದ ಅತ್ಯಂತ ದೊಡ್ಡ ದುರಂತ..!'

ಸಾಲ ಮಾಡುವುದು ತಪ್ಪಲ್ಲ. ಆದರೆ, ಆ ಸಾಲವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ಮುಖ್ಯ. ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಲದ ದೊಡ್ಡ ಭಾಗ ಬಂಡವಾಳ ವೆಚ್ಚಕ್ಕೆ (Capital Expenditure) ಹೋಗುತ್ತಿದೆ.
 Siddaramaiah, R Ashoka
ಸಿದ್ದರಾಮಯ್ಯ, ಆರ್.ಅಶೋಕ್
Updated on

ಬೆಂಗಳೂರು: ದಾಖಲೆಯ 17 ಬಜೆಟ್‌ಗಳನ್ನು ಮಂಡಿಸಿರುವ, ಹೈಕಮಾಂಡ್ ಒಪ್ಪಿದರೆ ಇನ್ನೂ 2 ಬಜೆಟ್‌ಗಳನ್ನು ಮಂಡಿಸಲು ಸಿದ್ಧವಿರುವ ಸ್ವಯಂಘೋಷಿತ ಆರ್ಥಿಕ ತಜ್ಞರು, ಬಜೆಟ್ ಬೃಹಸ್ಪತಿಗಳಿಗೆ “ಬಂಡವಾಳ ವೆಚ್ಚ” ಮತ್ತು “ಉತ್ಪಾದಕ ಆಸ್ತಿ ಸೃಜನೆ” ಬಗ್ಗೆ ಪಾಠ ಹೇಳಬೇಕಾದ ಶೋಚನೀಯ ಪರಿಸ್ಥಿತಿ ಬಂದಿರುವುದು ವಿಷಾದಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಸದನದಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಉತ್ತರದ ವಿರುದ್ಧ ಅಶೋಕ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರೇ ಸಾಲ ಮಾಡುವುದು ತಪ್ಪಲ್ಲ. ಆದರೆ, ಆ ಸಾಲವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ಮುಖ್ಯ. ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಲದ ದೊಡ್ಡ ಭಾಗ ಬಂಡವಾಳ ವೆಚ್ಚಕ್ಕೆ (Capital Expenditure) ಹೋಗುತ್ತಿದೆ. ಇಂದು ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ ಸುಮಾರು ರೂ.12.2 ಲಕ್ಷ ಕೋಟಿ, ಅಂದರೆ GDP ಯ ಸುಮಾರು ಶೇ.3.1ರಷ್ಟು, ಮತ್ತು ಒಟ್ಟು ಸರ್ಕಾರಿ ವೆಚ್ಚದ ಸುಮಾರು ಶೇ.22–23ರಷ್ಟು. ಅಂದರೆ ಕೇಂದ್ರ ಸರ್ಕಾರ ತಾನು ಮಾಡಿದ ಸಾಲವನ್ನು ಮುಖ್ಯವಾಗಿ ರಸ್ತೆಗಳು, ರೈಲು ಮಾರ್ಗಗಳು, ಮೂಲಸೌಕರ್ಯ ಹಾಗೂ ದೀರ್ಘಕಾಲಿಕ ಆರ್ಥಿಕ ಸಾಮರ್ಥ್ಯ ನಿರ್ಮಾಣಕ್ಕೆ ಬಳಸಲಾಗುತ್ತಿದೆ.

ಆದರೆ, ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಂಕಿ-ಅಂಶಗಳು ರಾಜ್ಯವನ್ನು ಬೆಚ್ಚಿಬೀಳಿಸುವಂತಿವೆ. ತಾವು ಮಂಡಿಸಿದ 2026–27ರ ಕರ್ನಾಟಕ ರಾಜ್ಯ ಬಜೆಟ್‌ನ ಒಟ್ಟು ಗಾತ್ರ ರೂ.4.48 ಲಕ್ಷ ಕೋಟಿ ಇದ್ದರೂ, ಅದರಲ್ಲಿ ಬಂಡವಾಳ ವೆಚ್ಚ ಕೇವಲ ರೂ.74,682 ಕೋಟಿ ಮಾತ್ರ. ಅಂದರೆ ಇದು ಒಟ್ಟು ವೆಚ್ಚದ ಸುಮಾರು ಶೇ.16–17% ಮಾತ್ರ, ಮತ್ತು GSDP ಯ ಕೇವಲ ಶೇ.2.2–2.5.

 Siddaramaiah, R Ashoka
ಅಂಬೇಡ್ಕರ್‌ ತತ್ವಕ್ಕೆ ತಿಲಾಂಜಲಿ: ಈಗ ಮಗ, ಇನ್ನಾರು ತಿಂಗಳು ಬಿಟ್ಟು ಮೊಮ್ಮಗನನ್ನು ಬೆಳೆಸಿ ಅಂತಾರೆ; ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ವ್ಯಂಗ್ಯ

ಇದರ ಜೊತೆಗೆ ರಾಜ್ಯದ ಒಟ್ಟು ಸಾಲ ಈಗಾಗಲೇ ರೂ.8.24 ಲಕ್ಷ ಕೋಟಿ (GSDP ಯ ಸರಿಸುಮಾರು 25%) ಮುಟ್ಟಿದೆ. ಈ ವರ್ಷ ಒಂದರಲ್ಲೇ ರೂ.1.32 ಲಕ್ಷ ಕೋಟಿ ಹೊಸ ಸಾಲ ತೆಗೆದುಕೊಳ್ಳಲಾಗುತ್ತಿದೆ. ಇನ್ನೂ ಮುಖ್ಯವಾಗಿ, ರೂ.22,957 ಕೋಟಿ ರಾಜಸ್ವ ಕೊರತೆ ಇದೆ. ರಾಜಸ್ವ ಕೊರತೆ ಎಂದರೆ ರಾಜ್ಯ ಸರ್ಕಾರ ತನ್ನ ದಿನನಿತ್ಯದ ಆಡಳಿತಾತ್ಮಕ ಖರ್ಚುಗಳನ್ನು ಪೂರೈಸಲು ಕೂಡ ಸಾಲ ತೆಗೆದುಕೊಳ್ಳಬೇಕಾಗಿರುವುದು. ಅಂದರೆ ಸಾಲದ ಒಂದು ದೊಡ್ಡ ಭಾಗ ಮೂಲಸೌಕರ್ಯ ನಿರ್ಮಾಣಕ್ಕೆ ಅಲ್ಲ, ದಿನನಿತ್ಯದ ವೆಚ್ಚಗಳಿಗೆ ಹೋಗುತ್ತಿದೆ ಎಂಬುದೇ ಅರ್ಥ.

ಹೀಗಾಗಿ ವ್ಯತ್ಯಾಸ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಸಾಲ ತೆಗೆದುಕೊಂಡು ಉತ್ಪಾದಕ ಆಸ್ತಿಗಳನ್ನು ನಿರ್ಮಿಸುತ್ತದೆ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದರೆ, ನಿಮ್ಮ ಸರ್ಕಾರದ ಬಜೆಟ್ ನೋಡಿದರೆ, ಸಾಲದ ಒಂದು ದೊಡ್ಡ ಭಾಗ ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೆ ಹೋಗುತ್ತಿದೆ. ಹೀಗಾಗಿ ಪ್ರಶ್ನೆ ಇರುವುದು ಸಾಲದ ಪ್ರಮಾಣದ ಬಗ್ಗೆ ಅಲ್ಲ. ಸಾಲದ ಬಳಕೆಯ ಗುಣಮಟ್ಟದ ಬಗ್ಗೆ. ತೆಗೆದುಕೊಂಡ ಸಾಲ ಯಾವುದಕ್ಕೆ ಬಳಸಲಾಗುತ್ತಿದೆ ಎನ್ನುವುದರ ಬಗ್ಗೆ. ಮೂಲಸೌಕರ್ಯ ನಿರ್ಮಿಸಲು ಮಾಡಿದ ಸಾಲವು ಭವಿಷ್ಯದ ಆರ್ಥಿಕ ಶಕ್ತಿಯನ್ನು ನಿರ್ಮಿಸುತ್ತದೆ. ದಿನನಿತ್ಯದ ವೆಚ್ಚಗಳಿಗೆ ತೆಗೆದ ಸಾಲವು ಕನ್ನಡಿಗರ ಸಾಲದ ಭಾರವನ್ನು ಮಾತ್ರ ಹೆಚ್ಚಿಸುತ್ತದೆ.

ಸಿದ್ದರಾಮಯ್ಯನವರೇ, 17 ಬಜೆಟ್ ಮಂಡಿಸಿರುವ ತಮಗೆ ಇವೆಲ್ಲ ತಿಳಿದಿಲ್ಲ ಅಂತೇನೂ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ, ಇದರ ದುಷ್ಪರಿಣಾಮಗಳೇನು ಎನ್ನುವುದು ಎಲ್ಲರಿಗಿಂತ ತಮಗೇ ಚೆನ್ನಾಗಿ ಗೊತ್ತಿದೆ. ಆದರೆ ಕುರ್ಚಿಗೆ ಅಂಟಿಕೊಂಡು ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೀರಲ್ಲ, ಇದು ನಿಮ್ಮ ರಾಜಕೀಯ ಜೀವನದ ಅತ್ಯಂತ ದೊಡ್ಡ ದುರಂತ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com