

ಬೆಂಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಬಳಿಕ ಉಂಟಾದ ರಾಜಕೀಯ ಗದ್ದಲ ತಾರಕ್ಕೇರಿದ್ದು, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಬಿಜೆಪಿ ವಿಳಂಬ ಆರೋಪ ಮಾಡಿದೆ.
ಬಿಜೆಪಿ ಪ್ರತಿನಿಧಿ ಮಂಡಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸ್ಪೀಕರ್ ಲಭ್ಯವಿಲ್ಲದಿದ್ದರೆ ತಾವೇ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಮನವಿ ಮಾಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಜೀವರಾಜ್, ಮರುಎಣಿಕೆಯಲ್ಲಿ 52 ಮತಗಳ ಅಂತರದಿಂದ ಗೆದ್ದು ಶಾಸಕರಾಗಿ ಘೋಷಿಸಲ್ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ “ಮತ ದರೋಡೆ” ಆರೋಪ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಚುನಾವಣಾ ಆಯೋಗದಿಂದ ಗೆಲುವಿನ ಪ್ರಮಾಣಪತ್ರ ಹಾಗೂ ಸರ್ಕಾರದಿಂದ ಗಜೆಟ್ ಅಧಿಸೂಚನೆ ಹೊರಬಂದಿದ್ದರೂ, ಸ್ಪೀಕರ್ ಪ್ರಮಾಣವಚನಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆದರೆ, ಸ್ಪೀಕರ್ ಯುಟಿ. ಖಾದರ್ ಅವರು ಈ ಆರೋಪಗಳನ್ನು ತಳ್ಳಿ ಹಾಕಿ, ಯಾವುದೇ ವಿಳಂಬವಾಗಿಲ್ಲ ಎಂದು ಸ್ಪಷ್ಟಪಡಿಸಿದರು. “ಇಂದು ಮಾತ್ರ ಪತ್ರ ಬಂದಿದೆ. ವೇಳಾಪಟ್ಟಿ ಪರಿಶೀಲಿಸಿ ಪ್ರಮಾಣವಚನ ಮಾಡಲಾಗುತ್ತದೆ,” ಎಂದರು.
ಇದಲ್ಲದೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಸಮರ್ಥ್ ಶಾಮನೂರು ಮತ್ತು ಉಮೇಶ್ ಮೇಟಿ ಗೆದ್ದಿದ್ದಾರೆ. ಎಲ್ಲರೂ ಒಪ್ಪಿದರೆ, ಮೂವರಿಗೂ ಏಕಕಾಲದಲ್ಲಿ ಪ್ರಮಾಣವಚನ ಬೋಧಿಸುವ ಆಯ್ಕೆಗಳನ್ನು ಅನ್ವೇಷಿಸುತ್ತಿರುವುದಾಗಿಯೂ ಸ್ಪೀಕರ್ ತಿಳಿಸಿದರು.
“ನಾನು ಅಶೋಕ್ ಮತ್ತು ಜೀವರಾಜ್ ಇಬ್ಬರೊಂದಿಗೂ ಮಾತನಾಡಿದ್ದೇನೆ. ಯಾವಾಗ ಪ್ರಮಾಣವಚನ ಬೋಧಿಸಬೇಕೆಂದು ಅವರು ನನ್ನನ್ನು ಕೇಳಬಹುದು. ನನಗೆ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ರಾಜ್ಯಪಾಲರಿಗೆ ದೂರು ನೀಡುವುದು ತಪ್ಪು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಅಭ್ಯಾಸವಲ್ಲ ಎಂದು ಹೇಳಿದರು,
Advertisement