

ಬೆಂಗಳೂರು: ವಯಸ್ಸಿನ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸ್ಥಾನ ಸ್ವೀಕರಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಖರ್ಗೆ ಅವರೊಂದಿಗೆ ನಡೆದ ಮಾತುಕತೆಯ ವಿವರಗಳನ್ನು ಹಂಚಿಕೊಂಡರು.
ರಾಜ್ಯದ ಆಡಳಿತ ಹಾಗೂ ಇತ್ತೀಚಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ನಾನು ಖರ್ಗೆ ಅವರಿಗೆ ಮಾಹಿತಿ ನೀಡಿದ್ದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಉತ್ತಮ ಆಡಳಿತ ಅತ್ಯಗತ್ಯ ಎಂದು ತಿಳಿಸಿದೆ. ಇದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಬಾರದು ಎಂದೂ ಮನವಿ ಮಾಡಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಅನಿವಾರ್ಯವಾದರೆ ಹಿರಿಯ ನಾಯಕತ್ವ ಹಾಗೂ ಅನುಭವದ ಆಧಾರದಲ್ಲಿ ಖರ್ಗೆ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ತಾವು ಸಲಹೆ ನೀಡಿದ್ದಾಗಿ ರಾಯರೆಡ್ಡಿ ತಿಳಿಸಿದರು.
ಆದರೆ, ಅದಕ್ಕೆ ಪ್ರತಿಕ್ರಿಯಿಸಿದ ಖರ್ಗೆ ಅವರು “ನನ್ನ ವಯಸ್ಸಿನ ಕಾರಣದಿಂದ ನಾನು ಮುಖ್ಯಮಂತ್ರಿ ಸ್ಥಾನ ಬಯಸುವುದಿಲ್ಲ. ಈ ವಿಷಯದಲ್ಲಿ ನಾನು ಮತ್ತು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾಗಿ ರಾಯರೆಡ್ಡಿ ವಿವರಿಸಿದರು.
ಸಿದ್ದರಾಮಯ್ಯ ಅವರು ಪೂರ್ಣಾವಧಿಗೂ ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿಯಬೇಕು ಎಂಬ ಅಭಿಪ್ರಾಯವನ್ನು ಕೂಡ ಅವರು ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮುಂದುವರಿದರೆ ರಾಜ್ಯದ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಾನು ಡಿ.ಕೆ. ಶಿವಕುಮಾರ್ ವಿರುದ್ಧ ಹೇಳಿಲ್ಲ. ಆದರೆ. ಬದಲಾವಣೆ ಆಗಬೇಕಾದರೆ ಖರ್ಗೆ ಅವರಂತಹ ಅನುಭವಿಗಳೇ ಬರಬೇಕು. ಆಗ ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಸಿಗುವ ಅವಕಾಶವೂ ಇರುತ್ತದೆ ಎಂದರು.
ರಾಜ್ಯ ಸಚಿವ ಸಂಪುಟ ಪುನರಾಚನೆ ಕುರಿತು ಮಾತನಾಡಿದ ರಾಯರೆಡ್ಡಿ, ಹಲವಾರು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕಿದೆ. “ನಾನು ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಂಪುಟ ಪುನರಾಚನೆ ಮಾಡಿದರೆ ಅಧಿಕಾರ ಹಂಚಿಕೆ ಸಮತೋಲನವಾಗುತ್ತದೆ. ಹೊಸ ಉತ್ಸಾಹ ಹಾಗೂ ವಿಭಿನ್ನ ಆಡಳಿತ ಶೈಲಿ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಸಮರ್ಥಿಸಿಕೊಂಡ ಅವರು, ಕರ್ನಾಟಕ ಸಬ್ಸಿಡಿ ನೀಡುವಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಸುಮಾರು ರೂ.2 ಲಕ್ಷ ಕೋಟಿ ಹಣವನ್ನು ಭ್ರಷ್ಟಾಚಾರವಿಲ್ಲದೆ ನೇರ ಲಾಭ ವರ್ಗಾವಣೆ ಮೂಲಕ ಜನರಿಗೆ ತಲುಪಿಸಲಾಗಿದೆ. ಸುಮಾರು 1.25 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ರೂ.2,000 ನೀಡಲಾಗುತ್ತಿದೆ. ಜೊತೆಗೆ 4.4 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ ನಡೆಯುತ್ತಿದೆ ಎಂದು ವಿವರಿಸಿದರು.
Advertisement