ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಮಂಗಳವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕತ್ವದೊಂದಿಗೆ ನಡೆದ ಸರಣಿ ಸಭೆಗಳು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ನವದೆಹಲಿ/ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳು ತಾರಕಕ್ಕೇರಿರುವ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಬೆಂಬಲಿಗ ಶಾಸಕರ ಸಭೆಯನ್ನು ಬುಧವಾರ ಬೆಂಗಳೂರಿನಲ್ಲಿ ಕರೆದಿದ್ದಾರೆ.

ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ನಿವಾಸದಲ್ಲಿ ಈ ಮಹತ್ವದ ಸಭೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದೆ.

ಮಂಗಳವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕತ್ವದೊಂದಿಗೆ ನಡೆದ ಸರಣಿ ಸಭೆಗಳು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲಾಗಿದ್ದು, ಸಭೆಗಳ ಬಳಿಕ ರಾಹುಲ್ ಗಾಂಧಿ ಹಾಗೂ ವೆಣುಗೋಪಾಲ್ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.

CM Siddaramaiah
ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ರಾಷ್ಟ್ರಮಟ್ಟದ ಪಾತ್ರದ ಪ್ರಸ್ತಾಪ?

ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಜವಾಬ್ದಾರಿ ವಹಿಸುವ ಅವಕಾಶದ ಕುರಿತು ಚರ್ಚೆ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಮಾಹಿತಿಯನ್ನು ಕಾಂಗ್ರೆಸ್ ನಾಯಕರು ಅಧಿಕೃತವಾಗಿ ದೃಢಪಡಿಸಿಲ್ಲ.

ನಾಯಕತ್ವ ಬದಲಾವಣೆ ಚರ್ಚೆ ತಳ್ಳಿಹಾಕಿದ ಕಾಂಗ್ರೆಸ್

ಸಭೆಗಳ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸಿ. ವೆಣುಗೋಪಾಲ್, ನಾಯಕತ್ವ ಬದಲಾವಣೆ ಕುರಿತ ಎಲ್ಲಾ ಸುದ್ದಿಗಳನ್ನು ಊಹಾಪೋಹ ಎಂದು ತಳ್ಳಿಹಾಕಿದರು.

“ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಎಲ್ಲ ಚರ್ಚೆಗಳು ಕೇವಲ ಊಹಾಪೋಹಗಳಷ್ಟೇ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ,” ಎಂದು ಸ್ಪಷ್ಟಪಡಿಸಿದರು.

ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮಾತ್ರ ಸಭೆಯಲ್ಲಿ ಚರ್ಚೆ ನಡೆದಿದ್ದು, ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗಿಲ್ಲ ಎಂದು ವೆಣುಗೋಪಾಲ್ ಹೇಳಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ, “ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದು ಕೇವಲ ಊಹಾಪೋಹ,” ಎಂದು ಪ್ರತಿಕ್ರಿಯಿಸಿದರು. ಸಚಿವ ಸಂಪುಟ ಪುನರ್‌ರಚನೆ ಕುರಿತು ಕೇಳಿದ ಪ್ರಶ್ನೆಗೆ, “ಅದು ಚರ್ಚೆಗೆ ಬಂದಿಲ್ಲ,” ಎಂದರು.

CM Siddaramaiah
ಪಟ್ಟದಾಟಕ್ಕೆ ಕೊನೆಗೂ ತೆರೆ: ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ವಾಪಸ್, ನಾಳೆ ಬೆಳಗ್ಗೆ ಡಿ ಕೆ ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್-Video

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ

ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳು ಖಾಲಿಯಾಗುತ್ತಿದ್ದು, ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಕ್ತಾಯವಾಗುತ್ತಿದ್ದು, ಅವರು ಮತ್ತೊಮ್ಮೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ಇದೆ.

ಇದರ ಜೊತೆಗೆ, ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿಕೆ.ಸುರೇಶ್ ಅವರ ಹೆಸರೂ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಮಹಿಳಾ ಅಭ್ಯರ್ಥಿ ಅಥವಾ ಹಿಂದುಳಿದ ವರ್ಗದ (OBC) ಅಭ್ಯರ್ಥಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.

ಸಿಎಂ ಪಟ್ಟಕ್ಕೆ ಡಿಕೆಶಿ ಅಲ್ಲದಿದ್ದರೆ ಯಾರಿದ್ದಾರೆ?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಡೆದರೆ ಕಾಂಗ್ರೆಸ್ ಸಂಪೂರ್ಣ ಹೊಸ ಮುಖವನ್ನು ಮುಂದಿರಿಸಬಹುದು ಎಂಬ ಚರ್ಚೆಯೂ ಜೋರಾಗಿದೆ.

ಮೂಲಗಳ ಪ್ರಕಾರ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೈಗಾರಿಕಾ ಸಚಿವ ಎಂಬಿಪಾಟೀಲ್ ಹೆಸರುಗಳು ಮುಂಚೂಣಿಯಲ್ಲಿವೆ. ಇಬ್ಬರೂ ಸ್ವಚ್ಛ ಇಮೇಜ್ ಮತ್ತು ಆಡಳಿತಾತ್ಮಕ ಸಾಮರ್ಥ್ಯ ಹೊಂದಿರುವ ನಾಯಕರಾಗಿದ್ದಾರೆ.

ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೆಸರೂ ಚರ್ಚೆಯಲ್ಲಿದೆ. ಆದರೆ, ದೇಶದ ಪ್ರಮುಖ ದಲಿತ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಡೆಗಣಿಸಿ ಪರಮೇಶ್ವರ್ ಅವರಿಗೆ ಅವಕಾಶ ನೀಡುವುದು ಕಾಂಗ್ರೆಸ್‌ಗೆ ರಾಜಕೀಯವಾಗಿ ಸವಾಲಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಂದು ಶಾಸಕರ ಸಭೆ: ಹೆಚ್ಚಿದ ಕುತೂಹಲ

ಈ ನಡುವೆ ಸಿದ್ದರಾಮಯ್ಯ ಅವರು ಬೆಂಬಲಿಗ ಶಾಸಕರ ಸಭೆ ಕರೆದಿರುವುದು ಹಾಗೂ ದೆಹಲಿಯಲ್ಲಿ ನಡೆದ ಸರಣಿ ಸಭೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳಿಗೆ ಮುನ್ನುಡಿ ಬರೆಯುತ್ತಿವೆ.

ನಾಯಕತ್ವ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ನಿರಾಕರಿಸುತ್ತಿದ್ದರೂ, ಮುಂದಿನ ಕೆಲವು ದಿನಗಳು ಕರ್ನಾಟಕ ರಾಜಕೀಯದ ದಿಕ್ಕು ನಿರ್ಧರಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com