

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಇದೀಗ ಅಂತಿಮ ರೂಪ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಸ್ಥಾನ ತ್ಯಾಗಕ್ಕೆ ಸಮ್ಮತಿಸಿದ್ದು, ಮೇ 29 ಅಥವಾ ಮೇ 31ರಂದು ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
ಹೈಕಮಾಂಡ್ ಮಹತ್ವದ ನಿರ್ಧಾರ
ಮಂಗಳವಾರ ರಾತ್ರಿ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ತೀರ್ಮಾನಕ್ಕೆ ಬಂದಿದ್ದು, ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಲಾಗಿತ್ತಾದರೂ, ವಯಸ್ಸು ಹಾಗೂ ಆರೋಗ್ಯದ ಕಾರಣ ನೀಡಿ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯ ಬಳಿಕ ಡಿಕೆ ಶಿವಕುಮಾರ್ ಅವರ ಹೆಸರಿಗೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಕಾಂಗ್ರೆಸ್ ನಾಯಕತ್ವ ರಾಜ್ಯದಲ್ಲಿ ಅಧಿಕಾರ ವರ್ಗಾವಣೆಯನ್ನು ಯಾವುದೇ ಗೊಂದಲವಿಲ್ಲದೆ, ಶಾಂತಿಯುತವಾಗಿ ಮತ್ತು ವೇಗವಾಗಿ ಮುಗಿಸಲು ತಯಾರಿ ನಡೆಸುತ್ತಿದೆ.
ಇಂದು ಸಿದ್ದರಾಮಯ್ಯ ರಾಜೀನಾಮೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಿಗ್ಗೆ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಾಹಾರ ಸಭೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅದರ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷ (CLP) ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಹೊಸ CLP ನಾಯಕನ ಆಯ್ಕೆ ನಡೆಯಲಿದ್ದು, ಆಯ್ಕೆಯಾದ ನಾಯಕನೇ ರಾಜ್ಯದ ಹೊಸ ಮುಖ್ಯಮಂತ್ರಿಯಾಗಲಿದ್ದಾರೆ.
ಡಿಕೆಶಿ ನಿವಾಸದಲ್ಲಿ ಹಬ್ಬದ ವಾತಾವರಣ
ದೆಹಲಿ ಪ್ರವಾಸ ಮುಗಿಸಿ ಬುಧವಾರ ಸಂಜೆ ಬೆಂಗಳೂರಿಗೆ ಮರಳಿದ ಡಿಕೆ ಶಿವಕುಮಾರ್, ತಮ್ಮ ಆಧ್ಯಾತ್ಮಿಕ ಗುರು ಹಾಗೂ ಜ್ಯೋತಿಷಿ ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ್ ಅವರನ್ನು ಸಂಪರ್ಕಿಸಿ ಆಶೀರ್ವಾದ ಪಡೆದಿದ್ದಾರೆ. “ಡಿಕೆಶಿ ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ” ಎಂದು ಗುರುಜಿ ತಿಳಿಸಿದ್ದಾರೆ.
ಇದೇ ವೇಳೆ ಡಿಕೆ ಶಿವಕುಮಾರ್ ಅವರ ನಿವಾಸ ಹಾಗೂ ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ, “ಮುಂದಿನ ಸಿಎಂ ಡಿಕೆಶಿ” ಎಂಬ ಘೋಷಣೆಗಳು ಕೂಗಿದ್ದಾರೆ.
ಪ್ರಿಯಾಂಕಾ ಗಾಂಧಿ ಬೆಂಬಲ ನಿರ್ಣಾಯಕ?
ಕಾಂಗ್ರೆಸ್ ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಡಿಕೆ ಶಿವಕುಮಾರ್ ಪರ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆದಿದ್ದ ಎನ್ನಲಾದ “ಅರ್ಧಾವಧಿ ಅಧಿಕಾರ ಹಂಚಿಕೆ” ಒಪ್ಪಂದವನ್ನು ಪಾಲಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಲೇ “ಮೊದಲ ಅರ್ಧಾವಧಿ ಸಿದ್ದರಾಮಯ್ಯ, ನಂತರ ಡಿಕೆ ಶಿವಕುಮಾರ್” ಎಂಬ ಒಪ್ಪಂದ ಚರ್ಚೆಯಾಗಿದ್ದು, ಈಗ ಅದನ್ನು ಜಾರಿಗೆ ತರಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.
2028 ಚುನಾವಣೆಗೆ ಡಿಕೆಶಿಗೆ ದೊಡ್ಡ ಜವಾಬ್ದಾರಿ
ಈ ನಡುವೆ ಸಿದ್ದರಾಮಯ್ಯ-ಡಿಕೆಶಿ ಬೆಂಬಲಿಗರ ನಡುವಿನ ಸಂಘರ್ಷದಿಂದ ಕಾಂಗ್ರೆಸ್ ಇಮೇಜ್‌ಗೆ ಹಾನಿಯಾಗಿದೆ ಎಂಬ ಅಸಮಾಧಾನ ಹೈಕಮಾಂಡ್ ನಲ್ಲಿದ್ದು, ಈ ಹಿನ್ನೆಲೆ, ಪಕ್ಷವನ್ನು ಪುನರ್‌ಸಂಘಟಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ತರುವ ಹೊಣೆಗಾರಿಕೆಯನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಸಿದ್ದರಾಮಯ್ಯ ಬೆಂಬಲಿಗರ ಅಸಮಾಧಾನ
ಇನ್ನೊಂದೆಡೆ, ನಾಯಕತ್ವ ಬದಲಾವಣೆ ವಿರೋಧಿಸಿ ಸಿದ್ದರಾಮಯ್ಯ ಬೆಂಬಲಿಗರು ಮುಖ್ಯಮಂತ್ರಿ ನಿವಾಸ ‘ಕಾವೇರಿ’ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಸುಗಮ ಅಧಿಕಾರ ಹಸ್ತಾಂತರಕ್ಕೆ ಸಹಕಾರ ಕೋರಿ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಸಚಿವರಾದ ಕೆಜೆ.ಜಾರ್ಜ್ ಮತ್ತು ಸತೀಶ್ ಜಾರಕಿಹೊಳಿ ಕೂಡ ಭಾಗವಹಿಸಿದ್ದರು ಎಂದು ತಿಳಿದುಬಂದಿದ.
ಬಕ್ರೀದ್ ಆಹ್ವಾನ ತಿರಸ್ಕರಿಸಿದ ಸಿದ್ದರಾಮಯ್ಯ
ಸಾಮಾನ್ಯವಾಗಿ ಈದ್ ಹಾಗೂ ಬಕ್ರೀದ್ ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಿದ್ದರಾಮಯ್ಯ ಅವರು, ಈ ಬಾರಿ ಪಕ್ಷದ ಮುಖಂಡರು ಮತ್ತು ಸ್ನೇಹಿತರು ನೀಡಿದ್ದ ಬಕ್ರೀದ್ ಊಟದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. “ನಾನು ಗುರುವಾರ ರಾಜೀನಾಮೆ ನೀಡಲಿದ್ದೇನೆ” ಎಂದು ಅವರು ಆತ್ಮೀಯರಿಗೆ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.
Advertisement