

ಬೆಂಗಳೂರು: ತಮ್ಮ ಪತ್ನಿಯ ಆರೋಗ್ಯದಲ್ಲಿ ಏರಪೇರು ಉಂಟಾಗಿರುವ ಕಾರಣ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ನಿನ್ನೆ ಬುಧವಾರ ತಡರಾತ್ರಿ ದಿಢೀರ್ ಆಗಿ ಇಂದೋರ್ ಪ್ರಯಾಣ ಬೆಳೆಸಿದ್ದು ಇಂದು ಬೆಳಗ್ಗೆ ತಲುಪಿದ್ದಾರೆ. ಅವರ ಮರಳಿ ಬರುವ ಸಮಯ ನಿಗದಿ ಆಗಿಲ್ಲ ಎಂದು ಲೋಕಭವನದ ಮೂಲಗಳು ತಿಳಿಸಿದ್ದು, ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಸಲ್ಲಿಕೆ ಮುಂದೂಡಲ್ಪಡುತ್ತದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಲು ನಿರ್ಧರಿಸಿದ್ದಾರೆ. ಖುದ್ದು ಭೇಟಿಗೆ ರಾಜ್ಯಪಾಲರು ಲಭ್ಯ ಇಲ್ಲದೇ ಇರುವುದರಿಂದ ಅವರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆಯಿದೆ.
‘ರಾಜ್ಯಪಾಲರ ಪತ್ನಿ ಅನಾರೋಗ್ಯಗೊಂಡಿರುವ ಮಾಹಿತಿ ಕಳೆದ ರಾತ್ರಿ ಬಂತು. ತಕ್ಷಣವೆ ರಾಜ್ಯಪಾಲರು ಇಂದೋರ್ ಗೆ ತೆರಳಿದ್ದಾರೆ. ಪತ್ನಿಯ ಆರೋಗ್ಯ ಸುಧಾರಿಸಿದ ನಂತರವೇ ಅವರ ವಾಪಸ್ ಆಗಬಹುದು. ಈ ಬಗ್ಗೆ ಖಚಿತ ಮಾಹಿತಿ ಇಲ್ಲ’ ಎಂದು ಲೋಕಭವನದ ಮೂಲಗಳು ಹೇಳಿವೆ.
ಹಾಗಾದರೆ ರಾಜೀನಾಮೆ ಸಲ್ಲಿಕೆಗೆ ಬೇರೆ ಆಯ್ಕೆಗಳಿಲ್ಲವೇ?
‘ಸಿದ್ದರಾಮಯ್ಯ ಅವರು ಲೋಕಭವನಕ್ಕೆ ಬಂದು ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು. ಅದನ್ನು ಲೋಕಭವನದಿಂದ ರಾಜ್ಯಪಾಲರಿಗೆ ಕಳುಹಿಸಲಾಗುವುದು. ಅವರ ಅಲ್ಲಿಂದಲೇ ಈ ಬಗ್ಗೆ ಮುಂದಿನ ಕ್ರಮವನ್ನು ಸೂಚಿಸಬಹುದು. ಇಂದೋರ್ ನಿಂದ ವಾಪಸ್ ಬಂ ದ ಬಳಿಕ ಸಿದ್ದರಾಮಯ್ಯ
ಅವರನ್ನು ಲೋಕಭವನಕ್ಕೆ ಕರೆಸಿಕೊಂಡು ರಾಜ್ಯಪಾಲರು ಮಾತುಕತೆ ನಡೆಸಬಹುದು’ ಎಂದೂ ಮೂಲಗಳು ಹೇಳಿವೆ. ರಾಜ್ಯಪಾಲರು ಇಂದೋರ್ ನಿಂದ ಯಾವಾಗ ವಾಪಸ್ಸಾಗುತ್ತಾರೆ ಎಂಬ ಬಗ್ಗೆ ಮಾಹಿತಿಯಿಲ್ಲ.
Advertisement