

ದಾವಣಗೆರೆ: ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮುನ್ನ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಗುರುವಾರ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ರಾಜೀನಾಮೆ ವಿಷಯ ಪ್ರಕಟಿಸಿದ್ದನ್ನು ನೆನೆದು ಮಾಜಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಶುಕ್ರವಾರ ಭಾವುಕರಾದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಸಿ.ಸುಧಾಕರ್ ಅವರು, ಸಿದ್ದರಾಮಯ್ಯ ಅವರನ್ನು ಕಳೆದ ಎರಡ್ಮೂರು ದಿನಗಳಿಂದ ನೋಡಲು ಆಗುತ್ತಿಲ್ಲ. ಅವರು ಎಲ್ಲಾ ವರ್ಗಗಳನ್ನು ಸಮಾನವಾಗಿ ತೆಗೆದುಕೊಂಡು ಹೋದ ನಾಯಕರಾಗಿದ್ದು, ಎಲ್ಲಾ ಸಮುದಾಯಕ್ಕೆ ಸಮಾನತೆ ನೀಡಿದ ವ್ಯಕ್ತಿ. ಆದರೆ ಅಂತಹ ವ್ಯಕ್ತಿಯನ್ನು ನೋಡಲಾಗುತ್ತಿಲ್ಲ ಎಂದು ಕಣ್ಣೀರಿಟ್ಟರು.
ಇದೇ ವೇಳೆ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಸಂಪುಟ ವಿಸರ್ಜನೆಗೊಂಡಿದ್ದು, ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸುಧಾಕರ್ ತಿಳಿಸಿದರು.
ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಮೇಲ್ಫಂಥಿಯನ್ನು ಹಾಕಿಕೊಟ್ಟಿದ್ದರು. ಒಬ್ಬ ರಾಜಕಾರಣಿಯ ವ್ಯಕ್ತಿತ್ವ ಹೇಗೆ ಇರುತ್ತೆ ಎನ್ನುವುದನ್ನು ತಿಳಿಸಿಕೊಟ್ಟಿದ್ದರು. ಅಲ್ಲದೇ ಇದರಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕೂಡ ಸಾಕಷ್ಟು ವೃದ್ಧಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಅವರ ಅನುಭವ ನಮಗೆಲ್ಲ ಪಾಠ ಹೇಳಿದೆ. ನಾಳೆ ಸಭೆ ನಡೆಯಲಿದೆ, ಸಮಯ ಹಾಗೂ ಸ್ಥಳ ನಿಗದಿಯಾಗಿಲ್ಲ. ಶಾಸಕಾಂಗದ ಸಭೆಯಾದ ಬಳಿಕ ಅಧಿಕೃತವಾಗಿ ಡಿಕೆಶಿ ಸಿಎಂ ಆಗುತ್ತಾರೆ. ಅವರು ಸಿಎಂ ಆಗುವುದಕ್ಕೆ ಯಾವುದೇ ಅಡ್ಡಿ ಅತಂಕವಿಲ್ಲ ಎಂದರು.
ಇದೇ ವೇಳೆ ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕ್ಕಾಗಿ ಡಿಕೆಶಿಯವರು ಸಾಕಷ್ಟು ದುಡಿದಿದ್ದಾರೆ. ಅದ್ದರಿಂದ ಹೈಕಮಾಂಡ್ ಈ ಬಾರಿ ಅವರಿಗೆ ಸಿಎಂ ಆಗಲು ಅವಕಾಶ ನೀಡಿದೆ. ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ. ಡಿಕೆಶಿಯವರು ಸಿಎಂ ಆಗಲು ಯಾರ ವಿರೋಧ ಇಲ್ಲ. ಸ್ವತಃ ಸಿದ್ದರಾಮಯ್ಯನವರೇ ಬೆಂಬಲವನ್ನು ಸೂಚಿಸಿದ್ದಾರೆ ಎಂದರು.
Advertisement