

ಬೆಂಗಳೂರು: ಸ್ಥಾನಗಳು ಮತ್ತು ಅಧಿಕಾರಗಳು ಕಾಲಕ್ಕೆ ತಕ್ಕಂತೆ ಬದಲಾಗಬಹುದು. ಆದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುವ ನಾಯಕನಿಗೆ ಎಂದಿಗೂ ವಿದಾಯ ಇರುವುದಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು ಅಧಿಕಾರದಿಂದ ಕೆಳಗಿಳಿಯುವುದು ಎಂದರೆ ಜನರ ಹೃದಯದಿಂದ ಇಳಿಯುವುದು ಎಂದರ್ಥವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಕರ್ನಾಟಕದ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರೂ, ತಮ್ಮ ತಳಮಟ್ಟದ ಗುಣವನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಅಧಿಕಾರದ ಕೊನೆಯ ಕ್ಷಣದವರೆಗೂ ಬಡವರು, ಹಿಂದುಳಿದವರು, ಶೋಷಿತರು ಹಾಗೂ ದುರ್ಬಲ ವರ್ಗದವರ ಧ್ವನಿಯಾಗಿಯೇ ಅವರು ಕೆಲಸ ಮಾಡಿದರು.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಜನಪರ ಆಡಳಿತದ ಹೆಸರಿನಲ್ಲಿ ಸಿದ್ದರಾಮಯ್ಯನವರು ಬರೆದ ಅಧ್ಯಾಯ ಎಂದೆಂದಿಗೂ ಅಳಿಸಲಾಗದಂತಹದ್ದು ಎಂದು ಹೆಬ್ಬಾಳ್ಕರ್ ಬಣ್ಣಿಸಿದ್ದಾರೆ. ಸಿದ್ದರಾಮಯ್ಯ ಕೇವಲ ಒಬ್ಬ ಮುಖ್ಯಮಂತ್ರಿಯಾಗಿರದೆ, ಕೋಟ್ಯಂತರ ಕನ್ನಡಿಗರ ಆತ್ಮವಿಶ್ವಾಸ ಹಾಗೂ ಅಸಂಖ್ಯಾತ ಯುವಕರ ಕನಸಾಗಿದ್ದರು ಎಂದು ಅವರು ನೆನೆದಿದ್ದಾರೆ.
ತಮ್ಮ ವೈಯಕ್ತಿಕ ಜೀವನ ಮತ್ತು ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯನವರ ಪಾತ್ರವನ್ನು ಸ್ಮರಿಸಿರುವ ಸಚಿವೆ, "ನನ್ನ ವೈಯಕ್ತಿಕ ಜೀವನದಲ್ಲಿ ಸಿದ್ದರಾಮಯ್ಯನವರು ಕೇವಲ ಒಬ್ಬ ರಾಜಕೀಯ ನಾಯಕರಾಗಿ ಕಾಣಲಿಲ್ಲ.
ನಾನು ಸಂಕಷ್ಟದಲ್ಲಿದ್ದಾಗಲೆಲ್ಲಾ ಅವರು ತಂದೆಯ ಸ್ಥಾನದಲ್ಲಿ ನಿಂತು ಬೆನ್ನು ತಟ್ಟಿ ಧೈರ್ಯ ತುಂಬಿದ್ದಾರೆ. ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ರಾಜಕೀಯವಾಗಿ ಮುನ್ನಡೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಅವರ ಸಂಪುಟದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ರಾಜಕೀಯ ಬದುಕಿನ ಅತ್ಯಂತ ಅಮೂಲ್ಯ ಮತ್ತು ಹೆಮ್ಮೆಯ ಅಧ್ಯಾಯ. ಅವರ ರಾಜಕೀಯ ದೂರದೃಷ್ಟಿ, ಕಠಿಣ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಬಡವರ ನೋವಿಗೆ ತಕ್ಷಣ ಸ್ಪಂದಿಸುವ ಗುಣವನ್ನು ನಾನು ಹತ್ತಿರದಿಂದ ಕಂಡು ಕಲಿತಿದ್ದೇನೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ರಾಜಕೀಯದಲ್ಲಿ ಅಧಿಕಾರ ಮತ್ತು ಕುರ್ಚಿಗಳು ಶಾಶ್ವತವಲ್ಲ ಎಂಬ ಕಟು ಸತ್ಯವನ್ನು ಪ್ರಸ್ತಾಪಿಸಿರುವ ಅವರು, ಜನರಿಗಾಗಿ ಬದುಕುವ ನಾಯಕರ ಆದರ್ಶಗಳು ಮಾತ್ರ ಇತಿಹಾಸದಲ್ಲಿ ಸದಾ ಜೀವಂತವಾಗಿರುತ್ತವೆ ಎಂದಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದಿರಬಹುದು, ಆದರೆ ಅವರು ಬಿತ್ತಿದ ಸಾಮಾಜಿಕ ನ್ಯಾಯದ ಚಿಂತನೆಗಳು ಮತ್ತು ಬಡವರ ಪರವಾದ ನಿಲುವುಗಳು ಮುಂದಿನ ದಿನಗಳಲ್ಲೂ ನಮ್ಮನ್ನು ಮುನ್ನಡೆಸಲಿವೆ.
ಮುಂದಿನ ದಿನಗಳಲ್ಲೂ ಸಿದ್ದರಾಮಯ್ಯನವರ ಅಪಾರ ರಾಜಕೀಯ ಅನುಭವ, ಮಾರ್ಗದರ್ಶನ ಮತ್ತು ಆಶೀರ್ವಾದ ರಾಜ್ಯದ ಜನತೆಗೆ ಶಕ್ತಿಯಾಗಲಿದೆ. ಅವರು ಕಂಡ ಸಮಾನತೆ ಹಾಗೂ ಸೌಹಾರ್ದತೆಯ ಕರ್ನಾಟಕದ ಕನಸನ್ನು ನನಸು ಮಾಡಲು ನಾವೆಲ್ಲರೂ ಒಟ್ಟಾಗಿ ಸಾಗಬೇಕಿದೆ. ನಾಯಕತ್ವ ಎಂದರೆ ಕೇವಲ ಅಧಿಕಾರ ಚಲಾಯಿಸುವುದಲ್ಲ, ಜನರ ಹೃದಯದಲ್ಲಿ ಅಚ್ಚಳಿಯದ ಗುರುತು ಮೂಡಿಸುವುದು ಎಂಬುದನ್ನು ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Advertisement