'ನಾನ್ ಯಾರಿಗಾದ್ರೂ ಅನ್ಯಾಯ ಮಾಡಿದ್ರೆ ಅದು ಅವನಿಗೆ ಮಾತ್ರ': ಸಿದ್ದರಾಮಯ್ಯ ಹಳೇ Video ವೈರಲ್!

ಇದೊಂದ್ ಸಾರಿ ಅವನಿಗೆ ಟಿಕೆಟ್ ಕೊಡೋಣ, ನೀನ್ ಲೋಕಸಭೆ ನಿಂತ್ಕೋ ಅಂದೆ. ಪಾಪಾ ಮಾದೇವ ದೊಡ್ ಮನುಷ್ಯ ಒಪ್ಕೊಂಡ.
Siddaramaiah Criticizes MLC H Vishwanath
ಮಾಜಿ ಸಿಎಂ ಸಿದ್ದರಾಮಯ್ಯ
Updated on

ಮೈಸೂರು: ಹಲ್ಲೆ ಆರೋಪದ ವಿಚಾರವಾಗಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ಎಂಎಲ್‌ಸಿ ಎಚ್.ವಿಶ್ವನಾಥ್ ಅವರು ಮಾಡಿರುವ ಆರೋಪಗಳ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದೇ ಜೂನ್ 3ರಂದು ಲೋಕಭವನದಲ್ಲಿ ಡಿಕೆ ಶಿವಕುಮಾರ್ ನೂತನ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಎಂಎಲ್ ಸಿ ಎಚ್ ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಹಗ್ಗಜಗ್ಗಾಟಗಳ ನಡುವೆಯೇ ಈ ವಿಡಿಯೋ ಇದೀಗ ಕರ್ನಾಟಕ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.

Siddaramaiah Criticizes MLC H Vishwanath
ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಹಿಂದೂ ವಿರೋಧಿ ಸಿಎಂಗಳು ಒಂದೇ ತಿಂಗಳಲ್ಲಿ ಅಧಿಕಾರ ಕಳೆದುಕೊಂಡ್ರು: ಛಲವಾದಿ ವ್ಯಂಗ್ಯ

ಎಚ್ ವಿಶ್ವನಾಥ್ ರಾಜಕೀಯದ ಕುರಿತು ಸಿದ್ದರಾಮಯ್ಯ ಕಿಡಿ

ವೈರಲ್ ಆಗಿರುವ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ಎಚ್ ವಿಶ್ವನಾಥ್ ರಾಜಕೀಯದ ಕುರಿತು ನೇರವಾಗಿಯೇ ಕಿಡಿಕಾರಿದ್ದಾರೆ. ತಮ್ಮ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಿದ್ದರಾಮಯ್ಯ, ನನ್ನ ರಾಜಕೀಯ ಜೀವನದಲ್ಲಿ 'ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಿ ಎಂದರೆ ಅದು ಮಾದೇವನಿಗೆ ಹೊರತು ವಿಶ್ವನಾಥ್ ಗೆ ಅಲ್ಲ' ಎಂದು ಹೇಳಿದ್ದಾರೆ.

'2008ರಲ್ಲಿ ಅಸೆಂಬ್ಲಿ ಚುನಾವಣೆ ಬಂತು. ಯಾರಿಗೆ ಟಿಕೆಟ್ ಕೊಡ್ಬೇಕು. ಮಂಚನಹಳ್ಳಿ ಮಾದೇವನಿಗೆ ಕೊಡಬೇಕಿತ್ತು. ಆತ ಸಿಟ್ಟಿಂಗ್ ಎಂಎಲ್ಎ. ನಮ್ಮ ಜನಾಂಗದಲ್ಲಿ ಪ್ರತಿಭಾವನ್ವಿತ ಶಾಸಕನಾಗಿದ್ದವನು. ಅವನಿಗೇ ಟಿಕೆಟ್ ಕೊಡಬೇಕಿತ್ತು. ಆದ್ರೆ ಆ ಸಂದರ್ಭದಲ್ಲಿ ವಿಶ್ವನಾಥ್ ಬಂದ್ ಹೇಳ್ದ ನಾನು ಹಿರಿಯನಿದ್ದೀನಿ.. ಮಾದೇವ ಲೋಕಸಭೆಗೆ ಸ್ಪರ್ಧಿಸಲಿ. ನಂಗೆ ಇದೊಂದ್ ಸಾರಿ ಅಸೆಂಬ್ಲಿ ಚುನಾವಣೆಗೆ ಟಿಕೆಟ್ ಕೊಡೋಕೆ ಒಪ್ಪಿಕೊಳ್ಳಬೇಕು ನೀವು ಅಂದ'.

ನಾನು ಮಾದೇವನ ಕರೆದು 'ವಿಶ್ವನಾಥ್ ಕೇಳ್ತಾ ಇದಾರೆ. ಸೀನಿಯರ್ ಅಂತಾ ಹೇಳ್ತಾ ಇದಾನೆ. ಇದೊಂದ್ ಸಾರಿ ಅವನಿಗೆ ಟಿಕೆಟ್ ಕೊಡೋಣ, ನೀನ್ ಲೋಕಸಭೆ ನಿಂತ್ಕೋ ಅಂದೆ. ಪಾಪಾ ಮಾದೇವ ದೊಡ್ ಮನುಷ್ಯ ಒಪ್ಕೊಂಡ. 2008ರಲ್ಲಿ ಚುನಾವಣೆ ಆಯ್ತು. ವಿಶ್ವನಾಥ್ ಸೋತ. 2009ರಲ್ಲಿ ಪಾರ್ಲಿಮೆಂಟ್ ಎಲೆಕ್ಷನ್ ಬಂತು. ನಾವು ಟಿಕೆಟ್ ಮಾದವೇನಿಗೆ ಕೊಡಬೇಕಿತ್ತು.

ಆದ್ರೆ ವಿಶ್ವನಾಥ ಪುನಃ ಬಂದ. ನಾನು ಇನ್ ಮುಂದೆ ಅಸೆಂಬ್ಲಿ ಚುನಾವಣೆಗೆ ನಿಲ್ಲಲ್ಲ. ಇದೊಂದ್ ಸಾರಿ ಪಾರ್ಲಿಮೆಂಟ್ ಟಿಕೆಟ್ ಕೊಡಿ ಅಂತ ಕೇಳ್ದ. ನಾನು ಆಗ ಕೂಡ ಮಾದೇವನ ಕರೆದು ನೀನು ಕೆಆರ್ ನಗರದಲ್ಲೇ ಸ್ಪರ್ಧೆ ಮಾಡು. ಪಾರ್ಲಿಮೆಂಟ್ ಚುನಾವಣೆ ಬಿಟ್ ಬಿಡು. ವಿಶ್ವನಾಥ್ ರಾಜಕೀಯದಿಂದ ನಿವೃತ್ತಿ ಆಗ್ತೀನಿ. ವಯಸ್ಸಾಯ್ತು ಅಂತಾ ಹೇಳ್ತಾ ಇದಾನೆ. ಇದೊಂದ್ ಸಾರಿ ಅವನಿಗೆ ಕೊಡೋಣ. ನೀನ್ ಬಿಟ್ ಬಿಡಯ್ಯ ಅಂತ ಹೇಳ್ದೆ. ಪಾಪ ಅದಕ್ಕೂ ಮಾದೇವ ಒಪ್ಕೊಂಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಲ್ಲದೆ, ಮಾದವೇ ಆಗಿದ್ದಕ್ಕೆ ಒಪ್ಕೊಂಡ.. ಬೇರೇ ಅವ್ರು ಒಪ್ಕೊಂತಾರೇನ್ರಿ. 2008ರಲ್ಲಿ ಅಸೆಂಬ್ಲಿ ಸೀಟ್ ಬಿಟ್ಕೊಟ್ಟ. 2009ರಲ್ಲಿ ಪಾರ್ಲಿಮೆಂಟ್ ಸೀಟನ್ನೂ ಬಿಟ್ಕೊಟ್ಟ. 2009ರಲ್ಲಿ ವಿಶ್ವನಾಥ್ ಪರ ನಾವೆಲ್ಲ ಕೆಲಸ ಮಾಡಿ ಗೆಲ್ಲಿಸಿದ್ವಿ., ಎಂಪಿ ಆದ. ಈ ಮಧ್ಯೆ ಪಾಪ ಮಾದೇವ ಸತ್ತೋದ. ನಾನ್ ಯಾರಿಗಾದ್ರೂ ಅನ್ಯಾಯ ಮಾಡಿದ್ದೀನಿ ಅಂದ್ರೆ ಅದು ಆ ಮಾದೇವನಿಗೆ ಮಾತ್ರವೇ ಹೊರತು ವಿಶ್ವನಾಥನಿಗೆ ಅಲ್ಲ ಎಂದು ಸಿದ್ದರಾಮಯ್ಯ ವಿಡಿಯೋದಲ್ಲಿ ಹೇಳಿದ್ದಾರೆ.

Siddaramaiah Criticizes MLC H Vishwanath
'ಸಿದ್ದರಾಮಯ್ಯ ಓದಿದ ಬಜೆಟ್ ನಲ್ಲಿ ಏನಿತ್ತು? ನಾನು-ಸಿಎಂ ಒಟ್ಟಿಗೆ ಓದುತ್ತಿದ್ದಾಗ ಒಂದು ರೂಪಾಯಿ ಹಾಕಿ ಬಿಯರ್ ತರುತ್ತಿದ್ದೆವು': ಹೆಚ್ ವಿಶ್ವನಾಥ್

ಸಿದ್ದು ಕುಟುಂಬದ ವಿರುದ್ಧ ಕಿಡಿಕಾರಿದ್ದ ವಿಶ್ವನಾಥ್

ಇನ್ನು ಇತ್ತೀಚೆಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಂಎಲ್ ಸಿ ವಿಶ್ವನಾಥ್ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ವಿರುದ್ಧ ಕಿಡಿಕಾರಿದ್ದರು. ನನ್ನ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿರುವುದರ ಹಿಂದೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ಆರೋಪಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಸಿದ್ದರಾಮಯ್ಯ ಅಭಿಮಾನಿಗಳು ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com