ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ, ಏಕವಚನದಲ್ಲಿ "ಈ ನನ್ನ ಮಕ್ಕಳು ಕಾಂಗ್ರೆಸ್‌ನವರು ಇದ್ದಾರಲ್ಲಾ..." ಎಂದು ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರೊಂದಿಗೆ, ಕಾಂಗ್ರೆಸ್ ಕಾರ್ಯಕರ್ತರು ಕೂಡ ವಿಜಯೇಂದ್ರ ವಿರುದ್ಧ ಪೋಸ್ಟರ್ ಸಮರ ಪ್ರಾರಂಭಿಸಿದ್ದರು. ಈ ಬೆನ್ನಲ್ಲೇ, ನಾನು ಯಾವುದೇ ಉದ್ದೇಶಪೂರ್ವಕವಾಗಿ ಆ ಪದಗಳನ್ನು ಬಳಸಲಿಲ್ಲ ಎಂದು ಸ್ಪಷ್ಟನೆ ನೀಡಿರುವ ವಿಜಯೇಂದ್ರ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ.
BYV ಹೇಳಿದ್ದೇನು?
ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಈ ನನ್ ಮಕ್ಕಳು ಕಾಂಗ್ರೆಸ್ ನವರು ಇದ್ದಾರಲ್ಲಾ..." ಎಂದು ಏಕವಚನದಲ್ಲೇ ಲೇವಡಿ ಮಾಡಿದ್ದರು. ಅವರ ಈ ಆಕ್ರೋಶಭರಿತ ಹೇಳಿಕೆಯ ವಿಡಿಯೋ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಬೆನ್ನಲ್ಲೇ, ವಿಜಯೇಂದ್ರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, "ವಿಜಯೇಂದ್ರ ಅವರು ಮುಂದಿನ 3 ದಿನಗಳ ಒಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ.
ಮುಂದುವರೆದು ವಿವಾದ ಜೋರಾಗುತ್ತಿದ್ದಂತೆ, ತಾವು ನೀಡಿದ್ದ ಈ ನನ್ನ ಮಕ್ಕಳು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ನಾನು ದಾವಣಗೆರೆಯಲ್ಲಿ ಮಾತನಾಡುವಾಗ ಕೆಲವು ಪದಗಳನ್ನು ಬಳಸಿರುವುದು ನಿಜ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್‌ನವರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ನಾನು ಉದ್ದೇಶಪೂರ್ವಕವಾಗಿ ಅಥವಾ ಯಾರನ್ನಾದರೂ ಅವಮಾನಿಸಬೇಕು ಎಂಬ ಆಲೋಚನೆಯಿಂದ ಆ ಪದಗಳನ್ನು ಬಳಸಿಲ್ಲ. ಮೀಸಲಾತಿ, ಕೆಪಿಎಸ್‌ಸಿ ವಿಚಾರವಾಗಿ ಮಾತನಾಡುವಾಗ ಆಡುಭಾಷೆಯಲ್ಲಿ ಆ ಶಬ್ದ ಬಂದಿದೆಯೇ ವಿನಃ ಬೇರೆ ಯಾವುದೇ ದುರುದ್ದೇಶ ಇರಲಿಲ್ಲ" ಎಂದು ಹೇಳಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ನಿವಾಸದ ಸುತ್ತಮುತ್ತ “RTGS ಚೋರ್ ಬಿ.ವೈ. ವಿಜಯೇಂದ್ರ” ಹಾಗೂ "ನೀನು ಹೇಡಿ, RTGS ಕೇಡಿ" ಎಂದು ಬರೆದ ಪೋಸ್ಟರ್‌ಗಳನ್ನು ಅಂಟಿಸಿ ತೀವ್ರ ಆಕ್ರೋಶ ಹೊರಹಾಕಿದ್ದರು.