

ಹಾಸನ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಳಿಕ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಎಂಎಲ್‌ಸಿ ರಾಜೇಂದ್ರ ರಾಜಣ್ಣ, ನಾನಾಗಲಿ ಅಥವಾ ನನ್ನ ತಂದೆ ಕೆಎನ್ ರಾಜಣ್ಣ ಅವರಾಗಲಿ ಜೆಡಿಎಸ್ ಸೇರುತ್ತೇವೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನಾಂಬ ದೇಗುಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು, ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದೇನೆ. ನಮ್ಮ ಜಿಲ್ಲೆಗೆ, ನಮ್ಮ ತಾಲೂಕಿಗೆ ಕಾರ್ಖಾನೆಗಳನ್ನು ತರುವಂತೆ ಚರ್ಚಿಸಿದ್ದೇನೆ. ಸದ್ಯದ ರಾಜಕೀಯದ ಬಗ್ಗೆಯೂ ನಾನು ಅವರ ಬಳಿ ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದೇನೆ. ಇದನ್ನು ಹೊರತುಪಡಿ ಬೇರೆ ಯಾವುದೇ ವಿಚಾರ ಚರ್ಚೆಯಾಗಿಲ್ಲ. ಇನ್ನೂ ನನಗೆ ಹದಿನೆಂಟು ತಿಂಗಳು ಅಧಿಕಾರ ಇದೆ. ಪಕ್ಷ ಬದಲಾಯಿಸುವಂತದ್ದು ಸದ್ಯಕ್ಕೇನಿಲ್ಲ, ಕಾಂಗ್ರೆಸ್‌ನಲ್ಲೇ ಇದ್ದೇನೆ ಎಂದರು.
ಬಾಲಕೃಷ್ಣ ಅವರಿಗೆ ಒಂದು ಮಾತು ಹೇಳುತ್ತೇನೆ. ರಾಜಣ್ಣ ಅವರ ಬಗ್ಗೆ ಮಾತನಾಡಿದವರಿಗೆ ಮುಖ್ಯಮಂತ್ರಿಯಿಂದ ಬಹುಮಾನ ಇಟ್ಟಿರಬೇಕು. ಅವರ ಬಗ್ಗೆ ಮಾತನಾಡಿದರೆ ಅನುಕೂಲ ಆಗುತ್ತೆ ಎಂದು ಬಾಲಕೃಷ್ಣ ಅಂದುಕೊಂಡಿರಬಹುದು. ಅವರು ಸಚಿವರು. ಅವರ ಬಗ್ಗೆ ನಾನು ಹೆಚ್ಚು ಅಗೌರವವಾಗಿ ಮಾತನಾಡುವುದಿಲ್ಲ. ಸಚಿವ ಸ್ಥಾನ ಸಿಕ್ಕಿದ ಮೇಲೆ ಅವರು ರಾಜಣ್ಣ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ಪುಟ್ಟಣ್ಣ ಅವರು ಏಕೆ ಸೋತರು? ಪುಟ್ಟಣ್ಣ ಅವರು ಸೋಲಲ್ಲ ಅಂತ ಇತ್ತು, ಏಕೆ ಸೋತರು? ರಾಜಣ್ಣ ಅವರು ವೋಟು ಹಾಕ್ಸೋದು ಬರೀ ಮಧುಗಿರಿಯಲ್ಲಿ. 36 ಜನ ಶಾಸಕರಿದ್ದರಲ್ಲ, ಅವರೆಲ್ಲಾ ಏನು ಮಾಡುತ್ತಿದ್ದರು? ಸೋತರೆ ರಾಜಣ್ಣ ಸೋಲಿಸಿ ಬಿಟ್ಟರು, ಗೆದ್ದರೆ ರಾಜಣ್ಣ ಏನು ಇಲ್ಲ ಎಂದು ಕಿಡಿಕಾರಿದರು.
ಹಾಸನ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದು ಎಷ್ಟು ವರ್ಷ ಆಗಿತ್ತು? ಶ್ರೇಯಸ್ ಪಟೇಲ್‌ಗೆ ಟಿಕೆಟ್ ಕೊಡಿಸುವುದರಿಂದ ಹಿಡಿದು ಜವಾಬ್ದಾರಿ ತೆಗೆದುಕೊಂಡು ಇಲ್ಲಿ ಕಾಂಗ್ರೆಸ್ ಗೆದ್ದಿರುವುದು ಯಾರಿಂದ? ಒಬ್ಬರೇ ಮಾಡಿದ್ದಾರೆ ಎಂದು ಹೇಳಲ್ಲ. ಆದರೆ, ರಾಜಣ್ಣ ಅವರ ಪಾತ್ರ ಹೆಚ್ಚಿದೆ. ಸುಮ್ಮನೆ ರಾಜಣ್ಣ ಅವರ ಮೇಲೆ ಆಪಾದನೆ ಮಾಡಿದರೆ ಒಪ್ಪಲ್ಲ ಎಂದರು. ರಾಜಣ್ಣ ಅವರು ಹಾಸನ ಜಿಲ್ಲಾ ಸಚಿವರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಸಂದರ್ಭ ಬಂದಾಗ ಇವರದ್ದೆಲ್ಲಾ ಏನೇನಿದೆ, ಏನೇನು ಮಾತನಾಡಿದ್ದಾರೆ ಎಂಬುದನ್ನು ಮಾತನಾಡುತ್ತೇನೆ. ರಾಜಣ್ಣ ಅವರು ನೇರವಾಗಿ ಮಾತನಾಡುತ್ತಾರೆಂದೇ ಮಂತ್ರಿಗಿರಿಯಿಂದ ತೆಗೆದು ಹಾಕಿದ್ದು. ರಾಜಣ್ಣ ಅವರು ಇರೋದು ಅದೇ ಥರ, ಅದರಲ್ಲೇನು ತಪ್ಪಿಲ್ಲ. ಅದನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಹೇಳಲು ಆಗಲ್ಲ. ನಡೆಯುತ್ತಿದೆ ಹಾಗೇ ಇರಲಿ ತೊಂದರೆ ಇಲ್ಲ. ರಾಜಣ್ಣ ಅವರ ಬಗ್ಗೆ ಭಯ ಇರಬಹುದು, ಅದರಿಂದ ಇವೆಲ್ಲಾ ನಡಿತಿವೆ. ಬೇರೆ ಯಾರಾದರೂ ಮಾತನಾಡಿಲ್ವಾ, ಅವರ ಮೇಲೆ ಏಕೆ ಕ್ರಮ ಇಲ್ಲ? ರಾಜಣ್ಣ ಮೇಲೆ ಭಯ ಇರುವುದರಿಂದ ಇವೆಲ್ಲ ನಡೆಯುತ್ತಿದೆ ಎಂದು ಕಿಡಿಕಾರಿದರು.
ಎಂಎಲ್‌ಸಿ ಚುನಾವಣೆ ಫಲಿತಾಂಶ ಸಹಜವಾಗಿ ಸರ್ಕಾರಕ್ಕೆ ಒತ್ತಡ, ಹಿನ್ನಡೆ ಇರುತ್ತದೆ. ಕಳೆದ ಬಾರಿ ಪುಟ್ಟಣ್ಣ ಅವರು ಒಬ್ಬರೇ ಕಾಂಗ್ರೆಸ್‌ನಿಂದ ಗೆದ್ದಿದ್ದು ಮೂರು ಬಿಜೆಪಿನೇ ಇತ್ತು. ಈ ಬಾರಿ ಇರುವ ಒಂದು ಸೀಟ್ ಕಳೆದುಕೊಂಡಿದ್ದೇವೆ. ಸರ್ಕಾರ ಇದ್ದಾಗ ಪುಟ್ಟಣ್ಣ ಅವರಾಗಲಿ, ಬೇರೆ ಎಲ್ಲಾದರೂ ಎರಡು ಕಡೆ ಗೆಲ್ಲಬಹುದಿತ್ತು. ಕಾಲಾವಕಾಶ ಮುಗಿದಿಲ್ಲ, ಜಿಪಂ, ತಾಪಂ, ಪಪಂ, ಪುರಸಭೆ, ಎಲೆಕ್ಷನ್ ಬರುತ್ತೆ, ಖಂಡಿತವಾಗಿಯೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದರಿಂದ ಹಿಡಿದು ಇವತ್ತು ಅವರನ್ನು ನಡೆಸಿಕೊಳ್ಳುತ್ತಿರುವುದು ಇರಬಹುದು. ಇದರಿಂದಲೇ ಅಹಿಂದ ಮತಗಳು ಹೋಗಿವೆ. ಸಿದ್ದರಾಮಯ್ಯ ಅವರು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ, ಮುಖ್ಯಮಂತ್ರಿಗಳು ಭೇಟಿ ಮಾಡಿದ್ದಾರೆ. ಸದ್ಯ ಇನ್ನೂ ಏನೆಲ್ಲ ಬೆಳವಣಿಗೆ ಆಗುತ್ತೆ ಕಾದು ನೋಡೋಣ ಎಂದರು.