ಸಿದ್ದಾರ್ಥ ವಿಹಾರ್ ಟ್ರಸ್ಟ್ ವಿರುದ್ಧದ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಲು ಸಿದ್ಧ: BJP-JDSಗೆ ಪ್ರಿಯಾಂಕ್ ಖರ್ಗೆ ಸವಾಲು..!

ಅವರನ್ನು ಎದುರಿಸಲು ನಾನೊಬ್ಬನೇ ಸಾಕು. ನಾನು ನನ್ನ ದಾಖಲೆಗಳನ್ನು ತರುತ್ತೇನೆ, ಅವರು ತಮ್ಮ ದಾಖಲೆಗಳನ್ನು ತರಲಿ. ಸಿದ್ದಾರ್ಥ ವಿಹಾರ ಟ್ರಸ್ಟ್ ಆಗಿರಲಿ, ವೈಯಕ್ತಿಕ ಖಾತೆಗಳಾಗಿರಲಿ ಅಥವಾ ಬ್ಯಾಂಕ್ ವಿವರಗಳಾಗಿರಲಿ, ಎಲ್ಲವನ್ನೂ ಬಹಿರಂಗಪಡಿಸಲು ಸಿದ್ಧನಿದ್ದೇನೆ.
HD Kumaraswamy, Priyank Kharge
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ
Updated on: 

ಬೆಂಗಳೂರು: ಸಿದ್ದಾರ್ಥ ವಿಹಾರ್ ಟ್ರಸ್ಟ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ಆರೋಪಗಳಿಗೆ ದಾಖಲೆ ಸಮೇತ ಉತ್ತರಿಸಲು ಸಿದ್ಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ತಮ್ಮ ಹಾಗೂ ಕುಟುಂಬದ ಹಣಕಾಸು ವ್ಯವಹಾರಗಳ ವಿವರಗಳನ್ನು ಬಹಿರಂಗಪಡಿಸಲು ಯಾವುದೇ ಹಿಂಜರಿಕೆಯಿಲ್ಲ ಎಂದಿರುವ ಅವರು, ಆರೋಪ ಮಾಡುವವರು ಮೊದಲು ತಮ್ಮ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಟ್ರಸ್ಟ್‌ನ ಉದ್ದೇಶ ಮತ್ತು ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ರಾಜಕೀಯ ಕಾರಣಕ್ಕೆ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಖರ್ಗೆ ಕುಟುಂಬ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರನ್ನು ಎದುರಿಸಲು ನಾನೊಬ್ಬನೇ ಸಾಕು. ನಾನು ನನ್ನ ದಾಖಲೆಗಳನ್ನು ತರುತ್ತೇನೆ, ಅವರು ತಮ್ಮ ದಾಖಲೆಗಳನ್ನು ತರಲಿ. ಸಿದ್ದಾರ್ಥ ವಿಹಾರ ಟ್ರಸ್ಟ್ ಆಗಿರಲಿ, ವೈಯಕ್ತಿಕ ಖಾತೆಗಳಾಗಿರಲಿ ಅಥವಾ ಬ್ಯಾಂಕ್ ವಿವರಗಳಾಗಿರಲಿ, ಎಲ್ಲವನ್ನೂ ಬಹಿರಂಗಪಡಿಸಲು ಸಿದ್ಧನಿದ್ದೇನೆ. ನನ್ನ ಕುಟುಂಬದ ಎಲ್ಲ ದಾಖಲೆಗಳನ್ನೂ ತರುತ್ತೇನೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಸೇರಿದಂತೆ ಎಲ್ಲ ನಾಯಕರು ತಮ್ಮ ದಾಖಲೆಗಳನ್ನು ಸಾರ್ವಜನಿಕವಾಗಿ ಪರಿಶೀಲನೆಗೆ ಒಳಪಡಿಸುವ ಸ್ಥಳವನ್ನು ನಿರ್ಧರಿಸಲಿ ಎಂದು ಸವಾಲು ಹಾಕಿದರು. ಆರೋಪ ಮಾಡಿ ಓಡಿಹೋಗುವ ರಾಜಕಾರಣ ಇನ್ನು ನಡೆಯುವುದಿಲ್ಲ ಎಂದು ಹೇಳಿದರು.

HD Kumaraswamy, Priyank Kharge
ಎಥೆನಾಲ್ ವಿಷಯದಲ್ಲಿ ಕೇಂದ್ರ ಸರ್ಕಾರ ಜನರನ್ನು ದಾರಿತಪ್ಪಿಸುತ್ತಿದೆ, ಸಚಿವರ ಕಂಪನಿಗಳಿಗೆ ಲಾಭ: ಪ್ರಿಯಾಂಕ್ ಖರ್ಗೆ

ಟ್ರಸ್ಟ್ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುವ ಚಟುವಟಿಕೆಯಲ್ಲಿ ತೊಡಗಿದೆ ಎಂಬ ಆರೋಪಗಳನ್ನೂ ಅವರು ತಳ್ಳಿಹಾಕಿದರು. ಈ ಯೋಜನೆಯನ್ನು ಬುದ್ಧ ಮಂದಿರ ನಿರ್ಮಿಸುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಟ್ರಸ್ಟ್‌ನಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಗಳಿದ್ದರೆ ಕೇಂದ್ರ ತನಿಖಾ ಸಂಸ್ಥೆಗಳು ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳು ಅದರ ಅಧೀನದಲ್ಲಿವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರೊಂದಿಗಿನ ವಾಗ್ವಾದದ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸಚಿವರು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ವೈಯಕ್ತಿಕ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ತಾವು ಪ್ರತಿಕ್ರಿಯಿಸುತ್ತಿದ್ದೇನೆ ಹೊರತು ವೈಯಕ್ತಿಕ ದಾಳಿ ಆರಂಭಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಪಕ್ಷ ನಾಯಕರೊಂದಿಗಿನ ಮಾತಿನ ಚಕಮಕಿಯಲ್ಲಿ ತಾವು ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂಬ ಟೀಕೆಗಳನ್ನೂ ತಳ್ಳಿಹಾಕಿದ ಅವರು, ತಾವು ತಪ್ಪು ಎಂದು ಭಾವಿಸಿದ್ದನ್ನು ನೇರವಾಗಿ ಪ್ರಶ್ನಿಸುತ್ತಿದ್ದೇನೆ ಎಂದರು.

ತಪ್ಪನ್ನು ತಪ್ಪು ಎಂದೇ ಕರೆಯುತ್ತೇನೆ. ವಂಚಕರನ್ನು ವಂಚಕರು ಎಂದೇ ಕರೆಯಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X