

ಬೆಂಗಳೂರು: ನಾಲಿಗೆಯಿಲ್ಲದ ಮೂಳೆ ಎಂದು ಏನೇನೋ ಮಾತನಾಡುತ್ತಿರುತ್ತಾರೆ, ಏನು ಮಾಡೋದಕ್ಕಾಗುತ್ತೆ, ಅವರಿಗೆ ನಮ್ಮನ್ನು ನೆನಪಿಸಿಕೊಳ್ಳದಿದ್ದರೇ ಊಟಸೇರಲ್ಲ, ನಿದ್ದೆ ಬರಲ್ಲ , ಇನ್ನೊಂದು ಆಗಲ್ವಂತೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಡಿಕೆ ಸುರೇಶ್ ಹರಿಹಾಯ್ದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, "ನೋಡ್ರಿ, ನಾಲಿಗೆಯಲ್ಲಿ ಮೂಳೆ ಇಲ್ಲ ಅಂತ ಏನೇನೋ ಮಾತಾಡ್ತಾ ಇರ್ತಾರೆ. ಅವರಿಗೆಲ್ಲಾ ಏನು ಮಾತಾಡೋಕಾಗುತ್ತೆ ರೀ, ಏನು ಮಾಡೋಕಾಗುತ್ತೆ? ನಮ್ಮನ್ನು ನೆನೆಸಿಕೊಳ್ಳಲಿಲ್ಲ ಅಂದ್ರೆ ಅವರಿಗೆ ಊಟ, ನಿದ್ದೆ ಎರಡೂ ಸೇರಲ್ಲ" ಎಂದು ಹೇಳಿದ್ದಾರೆ.
ಈ ವೇಳೆ ಪಕ್ಕದಲ್ಲಿದ್ದವರು 'ಮೂರನೆಯದೂ ಸೇರಲ್ಲ' ಎಂದಾಗ ಮಾತು ಮುಂದುವರಿಸಿದ ಅವರು, "ಮೂರೂ ಸೇರದೇ ಇರೋರಿಗೆ ಏನು ಮಾಡೋಕಾಗುತ್ತೆ? ನೀವಾದ್ರೂ ಅಟ್ಲೀಸ್ಟ್ ಊಟನಾದ್ರೂ ಮಾಡಿಸಿ!" ಎಂದು ವ್ಯಂಗ್ಯವಾಡಿದ್ದಾರೆ.
ಅವರು ದೊಡ್ಡವರು ಇದ್ದಾರೆ, ಬಾಯಿಗೆ ಬಂದಿದ್ದು ಮಾತಾಡ್ತಾ ಇರ್ತಾರೆ. ‘ಚಪಲ ಚನ್ನಿಗರಾಯ’ ಅಂತಾರಲ್ಲ, ಅಂತವರನ್ನು ಏನು ಮಾಡೋಕಾಗಲ್ಲ" ಎನ್ನುವ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆ ಹಾಗೂ ಕರಾವಳಿ ಭಾಗದ ಸಭೆಗಳು ಕೇವಲ ವ್ಯವಹಾರ ವಿಸ್ತರಣೆಗಾಗಿ ನಡೆದಿವೆ ಎಚ್ ಡಿಕೆ ಆರೋಪಕ್ಕೆಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕರಾವಳಿ ಸಭೆ ಹಾಗೂ ‘ಬಿಸಿನೆಸ್’ ಆರೋಪದ ಹಿನ್ನೆಲೆ ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಿಂದ ಯಾವುದೇ ಪ್ರಯೋಜನವಿಲ್ಲ ಹಾಗೂ ಕರಾವಳಿ ಭಾಗದಲ್ಲೂ ವ್ಯವಹಾರ ವಿಸ್ತರಿಸುವ ಉದ್ದೇಶದಿಂದಲೇ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.