ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ವೇಣುಗೋಪಾಲ್ ಅವರ ನಿವಾಸದಲ್ಲಿ ನಡೆದ ಉಪಾಹಾರ ಸಭೆಯಲ್ಲಿ, ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಸಿದ್ದರಾಮಯ್ಯ ಅವರು ಒತ್ತಡ ಹೇರಿದ್ದಾರೆಂದು ಮೂಲಗಳು ತಿಳಿಸಿವೆ.
Siddaramaiah with AICC General Secretary KC Venugopal
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ
Updated on: 

ನವದೆಹಲಿ: ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯ ಸಿದ್ದರಾಮಯ್ಯ ಅವರು ಬುಧವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ವೇಣುಗೋಪಾಲ್ ಅವರ ನಿವಾಸದಲ್ಲಿ ನಡೆದ ಉಪಾಹಾರ ಸಭೆಯಲ್ಲಿ, ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಸಿದ್ದರಾಮಯ್ಯ ಅವರು ಒತ್ತಡ ಹೇರಿದ್ದಾರೆಂದು ಮೂಲಗಳು ತಿಳಿಸಿವೆ.

ತಮ್ಮ ಆಪ್ತ ಹಾಗೂ ಬಾದಾಮಿ ಶಾಸಕ ಬಸವರಾಜ ಶಿವಣ್ಣನವರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಕುರುಬ ಸಮುದಾಯದ ನಾಯಕರಾಗಿರುವ ಶಿವಣ್ಣನವರ್ ಅವರನ್ನು ಸಚಿವರನ್ನಾಗಿ ಮಾಡುವಂತೆ ಸಿದ್ದರಾಮಯ್ಯ ಈ ಹಿಂದೆ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದರು. ಆದರೆ, ಅವರ ಶಿಫಾರಸನ್ನು ಹೈಕಮಾಂಡ್ ಒಪ್ಪದೆ, ಇದೇ ಸಮುದಾಯದ ಚಿಕ್ಕಮಗಳೂರು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಸಚಿವರನ್ನಾಗಿ ಮಾಡಲು ಮುಂದಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಸೇರ್ಪಡೆ ಕೈಬಿಡಲಾಗಿತ್ತು.

ಮೂಲಗಳ ಪ್ರಕಾರ, ಶಿವಣ್ಣನವರ್ ಅವರ ಹೆಸರನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದೆ ಎನ್ನಲಾಗಿದ್ದು, ಮಹಿಳಾ ಕೋಟಾದಡಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ.

ಬಳ್ಳಾರಿ ಸಂಸದ ಈ. ತುಕಾರಾಂ ಅವರ ಪತ್ನಿ, ಪರಿಶಿಷ್ಟ ಪಂಗಡದ ನಾಯಕಿ ಹಾಗೂ ಮೊದಲ ಬಾರಿಗೆ ಶಾಸಕರಾಗಿರುವ ಅನ್ನಪೂರ್ಣ ಮತ್ತು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರುಗಳು ಚರ್ಚೆಯಲ್ಲಿವೆ.

ಈ ಹಿಂದೆ ಪರಿಶಿಷ್ಟ ಪಂಗಡದ ನಾಯಕರಾಗಿದ್ದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನವೂ ಇದೀಗ ಸಚಿವರ ಆಯ್ಕೆಗೆ ಮತ್ತೊಂದು ಆಯಾಮ ನೀಡಿದೆ.

ಸಿದ್ದರಾಮಯ್ಯ ಅವರು ನಿಗಮ-ಮಂಡಳಿಗಳ ನೇಮಕಾತಿ ಬಗ್ಗೆಯೂ ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ತಮ್ಮ ಅಭಿಪ್ರಾಯಗಳನ್ನು ಪರಿಗಣಿಸುವುದಾಗಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ನಿಗಮ-ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.

ಸಚಿವ ಸಂಪುಟದ ಎರಡು ಖಾಲಿ ಸ್ಥಾನಗಳನ್ನು ಭರ್ತಿ ಮಾಡುವುದು ಹಾಗೂ ನಿಗಮ-ಮಂಡಳಿಗಳಿಗೆ ನೇಮಕಾತಿ ಮಾಡುವುದು ಹೈಕಮಾಂಡ್‌ನ ತಕ್ಷಣದ ಆದ್ಯತೆಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಐವರು ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನವನ್ನು ನವೆಂಬರ್‌ವರೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com