ಕಾಂಗ್ರೆಸ್ ಧ್ವಜ-ಬ್ಯಾನರ್ ಹರಿದ ಆರೋಪ: ‘ನಿಮ್ಮ ಒಂದು ಧ್ವಜವೂ ಉಳಿಸಲ್ಲ’; ವಿಜಯೇಂದ್ರ ವಿರುದ್ಧ ಹರಿಪ್ರಸಾದ್ ಗುಡುಗು, ‘ನಾವೂ ತಕ್ಕ ಉತ್ತರ ನೀಡಬಲ್ಲೆವು’- BJP ತಿರುಗೇಟು

ಬುಧವಾರ ಕಿಟ್ಟದಹಳ್ಳಿಯಿಂದ ಶಿಕಾರಿಪುರದವರೆಗೆ ನಡೆದ ಭಾರತ್ ಜೋಡೋ 2.0 ಪಾದಯಾತ್ರೆಯ ಮಾರ್ಗದಲ್ಲಿ ಕಾಂಗ್ರೆಸ್ ಧ್ವಜ ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Congress flags
ಕಾಂಗ್ರೆಸ್ ಧ್ವಜ
Updated on: 

ಶಿವಮೊಗ್ಗ: ಕಾಂಗ್ರೆಸ್ ಧ್ವಜ ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ನಡುವೆ ವಾಕ್ಸಮರ ಆರಂಭವಾಗಿದೆ.

ಬುಧವಾರ ಕಿಟ್ಟದಹಳ್ಳಿಯಿಂದ ಶಿಕಾರಿಪುರದವರೆಗೆ ನಡೆದ ಭಾರತ್ ಜೋಡೋ 2.0 ಪಾದಯಾತ್ರೆಯ ಮಾರ್ಗದಲ್ಲಿ ಕಾಂಗ್ರೆಸ್ ಧ್ವಜ ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್ ಅವರು, ಕಾಂಗ್ರೆಸ್ ಧ್ವಜ-ಬ್ಯಾನರ್‌ಗಳನ್ನು ಹರಿದರೆ ಅದೇ ರೀತಿಯಲ್ಲಿ ಬಿಜೆಪಿಯ ಧ್ವಜ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುವ ಸಾಮರ್ಥ್ಯ ತಮ್ಮ ಪಕ್ಷಕ್ಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಕೃತ್ಯಗಳಲ್ಲಿ ವಿಜಯೇಂದ್ರ ಇನ್ನೂ “ಎಲ್‌ಕೆಜಿ ಹಂತದಲ್ಲಿದ್ದಾರೆ”, ಆದರೆ, ತಾವು ಇಂತಹ ವಿಚಾರಗಳಲ್ಲಿ “ಪಿಎಚ್‌ಡಿ ಮಾಡಿದ್ದೇನೆ” ಎಂದು ವ್ಯಂಗ್ಯವಾಡಿದ್ದಾರೆ.

ನಾನು ನಿರ್ಧರಿಸಿದರೆ ಒಂದೇ ಒಂದು ಸ್ಥಳದಲ್ಲೂ ಬಿಜೆಪಿಯ ಒಂದು ಧ್ವಜ ಅಥವಾ ಒಂದು ಬ್ಯಾನರ್‌ನ್ನೂ ಹಾಕಲು ಬಿಡುವುದಿಲ್ಲ. ನಮಗೆ ಅಷ್ಟು ಸಂಘಟನಾ ಶಕ್ತಿ ಇದೆ ಎಂದು ಹೇಳಿದರು.

ಇದೇ ವೇಳೆ ಇಂತಹ ಕೃತ್ಯಗಳನ್ನು ಕಿಡಿಗೇಡಿತನ ಎಂದು ಬಣ್ಣಿಸಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಇಂತಹ ಕೃತ್ಯಗಳಲ್ಲಿ ತೊಡಗಬಾರದು ಎಂದು ಎಚ್ಚರಿಸಿದರು.

ರಾಜಕೀಯ ಪಕ್ಷಗಳಿಗೆ ತಮ್ಮ ಎದುರಾಳಿಗಳ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ, ಪಕ್ಷದ ಧ್ವಜ, ಚಿಹ್ನೆ ಅಥವಾ ಬ್ಯಾನರ್‌ಗಳನ್ನು ಹರಿದು ಹಾಕುವುದು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಈ ನಡುವೆ ಹರಿಪ್ರಸಾದ್ ಅವರ ಆರೋಪಗಳನ್ನು ತಳ್ಳಿಹಾಕಿದ ವಿಜಯೇಂದ್ರ ಅವರು, ತಾವು ಇಂತಹ ಕ್ಷುಲ್ಲಕ ರಾಜಕೀಯದಲ್ಲಿ ತೊಡಗುವುದಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳ ಗಮನ ಸೆಳೆಯಲು ಹರಿಪ್ರಸಾದ್ ಅವರೇ ತಮ್ಮ ಪಕ್ಷದ ಕಾರ್ಯಕರ್ತರಿಗೆ ಧ್ವಜ ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕುವಂತೆ ಸೂಚಿಸಿದ್ದಾರೆ. ಅಂತಹ 420 ರಾಜಕೀಯ ನಮಗೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com