ಮೂಲ ವೆಚ್ಚಕ್ಕಿಂತ 3 ಪಟ್ಟು ಹೆಚ್ಚು ಹಣ ವಸೂಲಿ ಮಾಡಿದ್ದೀರಿ, NICE ಟೋಲ್ ಸಂಗ್ರಹ ತಕ್ಷಣ ನಿಲ್ಲಿಸಿ: HD.ಕುಮಾರಸ್ವಾಮಿ ಆಗ್ರಹ

2000ರ ಸೆಪ್ಟೆಂಬರ್ 4ರಂದು ರಾಜ್ಯ ಲೋಕೋಪಯೋಗಿ ಇಲಾಖೆ ಮತ್ತು NICE ನಡುವೆ ಟೋಲ್ ರಿಯಾಯಿತಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದವು 1997ರ ಏಪ್ರಿಲ್ 3ರಂದು ಮಾಡಿಕೊಂಡ ಮೂಲ ಚೌಕಟ್ಟು ಒಪ್ಪಂದಕ್ಕೆ ಅನುಗುಣವಾಗಿರಬೇಕಿತ್ತು.
Union Minister HD Kumaraswamy
ಹೆಚ್.ಡಿ.ಕುಮಾರಸ್ವಾಮಿ
Updated on: 

ಬೆಂಗಳೂರು: ನೈಸ್ (NICE) ರಸ್ತೆ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ಭಾರಿ ಅಕ್ರಮ ಮತ್ತು ಸಾರ್ವಜನಿಕರ ಲೂಟಿಯನ್ನು ಬಯಲಿಗೆಳೆದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ತಕ್ಷಣವೇ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, NICE ರಸ್ತೆಯ ಮೂಲ ಯೋಜನಾ ವೆಚ್ಚ ರೂ.1,583.76 ಕೋಟಿ ಆಗಿತ್ತು. ಆದರೆ, ಟೋಲ್ ಮೂಲಕ ಸಂಗ್ರಹವಾಗಿರುವ ಮೊತ್ತ ಇದಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 2008-09ರಲ್ಲಿ ರೂ.5.59 ಕೋಟಿ ಇದ್ದ ವಾರ್ಷಿಕ ಟೋಲ್ ಸಂಗ್ರಹ 2024-25ರಲ್ಲಿ ರೂ.734.97 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.

2000ರ ಸೆಪ್ಟೆಂಬರ್ 4ರಂದು ರಾಜ್ಯ ಲೋಕೋಪಯೋಗಿ ಇಲಾಖೆ ಮತ್ತು NICE ನಡುವೆ ಟೋಲ್ ರಿಯಾಯಿತಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದವು 1997ರ ಏಪ್ರಿಲ್ 3ರಂದು ಮಾಡಿಕೊಂಡ ಮೂಲ ಚೌಕಟ್ಟು ಒಪ್ಪಂದಕ್ಕೆ ಅನುಗುಣವಾಗಿರಬೇಕಿತ್ತು. ಎರಡೂ ಒಪ್ಪಂದಗಳ ನಡುವೆ ವ್ಯತ್ಯಾಸ ಉಂಟಾದರೆ ಮೂಲ ಚೌಕಟ್ಟು ಒಪ್ಪಂದವೇ ಅನ್ವಯವಾಗಬೇಕು.

ಟೋಲ್ ಸಂಗ್ರಹ ಆರಂಭಿಸುವ ಮೊದಲು ನಾಲ್ಕು ಪಥದ ಕಾಂಕ್ರೀಟ್ ರಸ್ತೆ, ಸರ್ವಿಸ್ ರಸ್ತೆಗಳು ಹಾಗೂ ನಿರ್ವಹಣಾ ಪ್ರದೇಶಗಳನ್ನು ನಿರ್ಮಿಸಬೇಕೆಂದು ಒಪ್ಪಂದಗಳಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಈ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ, NICE ಸಂಸ್ಥೆ ರೈತರ ಜಮೀನುಗಳನ್ನೂ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

2004ರ ಫೆಬ್ರವರಿ 12ರಂದು ಸಚಿವ ಸಂಪುಟದ ಅನುಮೋದನೆ ಪಡೆಯದೆ ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್ (ODP) ಮೂಲಕ ಯೋಜನೆಯ ಮಾರ್ಗವನ್ನು ಬದಲಾಯಿಸಲಾಗಿದೆ. ತಾವು ಉಲ್ಲೇಖಿಸಿದ ದಾಖಲೆಗಳ ಪ್ರಕಾರ, ಪೆರಿಫೆರಲ್ ರಸ್ತೆಗೆ ಅಗತ್ಯವಿದ್ದ ಭೂಮಿ 2,193 ಎಕರೆಗಳಿಂದ 2,747 ಎಕರೆಗೆ ಹಾಗೂ ಟೋಲ್ ರಸ್ತೆಗೆ 6,999 ಎಕರೆಗಳಿಂದ 9,468 ಎಕರೆಗೆ ಹೆಚ್ಚಾಗಿದೆ.

2021ರಲ್ಲಿ ಎಂಜಿನಿಯರ್ ಕಪಿಲ್ ಶರ್ಮಾ ಅವರು ದಿಶಾಂಕ್ ಆ್ಯಪ್ ಬಳಸಿ ಕೆರೆ ಪ್ರದೇಶಗಳ ಮೇಲೆ ನಿರ್ಮಿಸಲಾಗಿದೆ ಎನ್ನಲಾದ ರಸ್ತೆಗಳನ್ನು ಗುರುತಿಸಿದ್ದರು. ಈ ಸಂಬಂಧದ ಅತಿಕ್ರಮಣಗಳ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.

Union Minister HD Kumaraswamy
CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಇದೇ ವೇಳೆ ಕರ್ನಾಟಕ ಹೈಕೋರ್ಟ್ ಜುಲೈ 29ರಂದು ನೀಡಿದ ತೀರ್ಪನ್ನು ಉಲ್ಲೇಖಿಸಿದ ಕುಮಾರಸ್ವಾಮಿ ಅವರು, ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲ್ಯಾನ್ ಮೂಲಕ ಒಪ್ಪಂದವನ್ನು ಬದಲಾಯಿಸಿರುವುದು ‘ಕಾನೂನು ಮತ್ತು ಸಂವಿಧಾನದ ಮೇಲಿನ ವಂಚನೆ’ ಎಂದು ನ್ಯಾಯಾಲಯ ಹೇಳಿದೆ. ರಾಜ್ಯದ ಅಧಿಕಾರಿಗಳನ್ನೂ ನ್ಯಾಯಾಲಯ ಟೀಕಿಸಿದೆ ಎಂದು ಹೇಳಿದರು.

ಹೈಕೋರ್ಟ್ ತೀರ್ಪನ್ನು NICE ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಆದರೆ,ಸುಪ್ರೀಂ ಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿಲ್ಲ. ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಲಾಗಿದೆ. ಹೀಗಾಗಿ ಯಾವುದೇ ತಡೆಯಾಜ್ಞೆ ಇಲ್ಲದಿರುವುದರಿಂದ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದರು.

ನಾಲ್ಕು ಪಥದ ಕಾಂಕ್ರೀಟ್ ರಸ್ತೆ ಆರು ವರ್ಷಗಳಲ್ಲಿ ಪೂರ್ಣಗೊಳ್ಳದಿದ್ದರೆ ಟೋಲ್ ಸಂಗ್ರಹವನ್ನು ಹಿಂಪಡೆಯಬೇಕು ಎಂಬ ಎಸ್‌.ಎಂ. ಕೃಷ್ಣ ನೇತೃತ್ವದ ಸರ್ಕಾರದ ಅವಧಿಯ 2002ರ ನವೆಂಬರ್ 4ರ ಸಚಿವ ಸಂಪುಟದ ನಿರ್ಧಾರವನ್ನೂ ಅವರು ಉಲ್ಲೇಖಿಸಿದರು.

ಮೂಲ ಚೌಕಟ್ಟು ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿ NICE ಸಂಸ್ಥೆ ಟೋಲ್ ಹೊರತಾಗಿಯೂ ಇತರ ಮೂಲಗಳಿಂದ ಆದಾಯ ಗಳಿಸಿದೆ. ಭೂ ಮಾರಾಟದಿಂದ ರೂ.384 ಕೋಟಿ, ಜಂಟಿ ಅಭಿವೃದ್ಧಿಗಾಗಿ ಮುಂಗಡವಾಗಿ ರೂ.108 ಕೋಟಿ ಹಾಗೂ ಕನ್ವೆನ್ಷನ್ ಸೆಂಟರ್‌ಗಳಿಂದ ರೂ.338 ಕೋಟಿ ಆದಾಯ ಗಳಿಸಲಾಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ 2016ರ ವಿಧಾನಮಂಡಲ ಸಮಿತಿಯ ಶಿಫಾರಸನ್ನೂ ಕುಮಾರಸ್ವಾಮಿ ಪ್ರಸ್ತಾಪಿಸಿದರು.

ಯೋಜನೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಹಾಗೂ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು ಎಂದು ಹೇಳಿದರು. ಇದೇ ವೇಳೆ ಜಯಚಂದ್ರ ಅವರ ನಿಲುವು ಬದಲಾಗಿರುವುದನ್ನೂ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

2023ರ ಆಗಸ್ಟ್‌ನಲ್ಲಿ NICE ರಸ್ತೆ ಅಗತ್ಯವಿಲ್ಲ ಎಂದು ಹೇಳಿದ್ದ ಜಯಚಂದ್ರ, 2025ರ ಮೇನಲ್ಲಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು. ‘ಇದರ ಹಿಂದೆ ಏನು ನಡೆಯುತ್ತಿದೆ ಎಂಬ ಬಗ್ಗೆ ಪ್ರಶ್ನೆಗಳು ಮೂಡುತ್ತವೆ’ ಎಂದು ಅನುಮಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com