

ಬೆಂಗಳೂರು: ವಿಧಾನಪರಿಷತ್ ಪರಿಷತ್ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಶುಕ್ರವಾರ ಬೆಳಗ್ಗೆಯಿಂದ ಮತದಾನ ಆರಂಭಗೊಂಡಿದೆ. ನಾಲ್ಕು ಕ್ಷೇತ್ರಗಳಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ. ಮತದಾನದ ಹಿನ್ನೆಲೆಯಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಗಳ ಚುನಾವಣೆಗೆ ಮತದಾನ ಬಿರುಸಿನಿಂದ ಆರಂಭವಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮತದಾರರಯ ಮತಗಟ್ಟೆಗಳತ್ತ ತೆರಳಿ ಮತದಾನ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಒಟ್ಟು 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 5,402 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಇವರಲ್ಲಿ 3,178 ಪುರುಷರು ಹಾಗೂ 2,224 ಮಹಿಳಾ ಮತದಾರರಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಸ್ಪರ್ಧಿಸಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ರಾಯಚೂರಿನ ಎಪಿಎಂಸಿ ಕಟ್ಟಡದಲ್ಲಿರುವ ಮತಗಟ್ಟೆಗೆ ಸಹಾಯಕ ಚುನಾವಣಾಧಿಕಾರಿ ಪೂವಿತಾ ಎಸ್. ಭೇಟಿ ನೀಡಿ, ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದ್ದಾರೆ.
ಬಳಿಕ ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ವ್ಯವಸ್ಥೆ ಹಾಗೂ ಪ್ರಕ್ರಿಯೆಯನ್ನು ಪರಿಶೀಲಿಸಿದ್ದಾರು. ಶಾಂತಿಯುತ ಹಾಗೂ ಸುಸೂತ್ರ ಮತದಾನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾದ್ಯಂತ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ ಬೆಳಗ್ಗೆ 10 ಗಂಟೆಯವರೆಗೆ 9 ಮತಗಟ್ಟೆಗಳಲ್ಲಿ ಶೇ.12.05 ರಷ್ಟು ಮತದಾನವಾಗಿದೆ. ಬಳ್ಳಾರಿ ತಾಲೂಕು ಕಚೇರಿ ಮತಗಟ್ಟೆಯಲ್ಲಿ ಒಟ್ಟು 939 ಮತದಾರರಲ್ಲಿ 125 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಇಂದು 8 ಗಂಟೆಯಿಂದ ಮತದಾನ ಆರಂಭವಾಗಿದೆ. ವಿಧಾನಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೂ ಮತದಾನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಗರದ ನಾಗರಬಾವಿ ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ ಎಂಬ ಮಾಹಿತಿಯೂ ಇದೆ. ಮಾಜಿ ಕಾರ್ಪೊರೇಟರ್ ಮೋಹನ್ ಕುಮಾರ್ ವಿರುದ್ಧ ನಿಂದನೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಬ್ಯಾರಿಕೇಡ್ ಹಾಕಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.