

ನವದೆಹಲಿ: ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ನಾಲ್ಕೂ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ರಾಜ್ಯದ ಜನತೆ ಕಾಂಗ್ರೆಸ್‌ನ ದುರಾಡಳಿತಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ದುರಹಂಕಾರ ಹಾಗೂ ವಿವಾದಾತ್ಮಕ ಸ್ಟಿಂಗ್ ಕಾರ್ಯಾಚರಣೆಯ ಕುರಿತು ತೀವ್ರ ಆಕ್ರೋಶ ಹೊರಹಾಕಿದರು.
ಇದು ಜನವಿರೋಧಿ ಸರ್ಕಾರದ ವಿರುದ್ಧ ವ್ಯಕ್ತವಾಗಿರುವ ಸ್ಪಷ್ಟ ಜನಾದೇಶ. ‘2028ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂಬ ಅಹಂನಲ್ಲಿ ತೇಲುತ್ತಿದ್ದವರಿಗೆ ಜನತೆ ಕಪಾಳಮೋಕ್ಷ ಮಾಡಿದ್ದಾರೆ. ಮುಖ್ಯಮಂತ್ರಿಯವರ ಜನವಿರೋಧಿ ನೀತಿಗಳು ಮತ್ತು ಭ್ರಷ್ಟಾಚಾರ ರಹಿತ ಆಡಳಿತದ ಬಯಕೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ದೇವೇಗೌಡರ ಮೇಲಿನ ಜನರ ಪ್ರೀತಿ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ಸಮನ್ವಯತೆಯಿಂದ ಈ ಜಯ ಸಾಧ್ಯವಾಗಿದೆ. ಮೈತ್ರಿಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಜವಾಬ್ದಾರಿ ನಿಭಾಯಿಸಿದ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರಿಗೆ ಅಭಿನಂದನೆಗಳು ಎಂದರು.
ನಕಲಿ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ಸ್ಟಿಂಗ್ ಕಾರ್ಯಾಚರಣೆ ಮಾಡಿಸಿದ್ದು ಕಾಂಗ್ರೆಸ್‌ನ ಮಹಿಳಾ ನಾಯಕಿ. ಅವರಿಗೆ 2015ರ ಜೂನ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದರಲ್ಲಿ ಮೂರನೇ ಮಹಿಳೆ ಹಾಗೂ ಖಾಸಗಿ ಚಾನೆಲ್‌ನ ವ್ಯಕ್ತಿಯ ಪಾತ್ರವೇನು? ತಾನೇ ಸ್ಟಿಂಗ್ ಮಾಡಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವ ವ್ಯಕ್ತಿಯ ವಿರುದ್ಧ ಸರ್ಕಾರ ಇದುವರೆಗೆ ಯಾವ ಕ್ರಮ ಕೈಗೊಂಡಿದೆ? ಅವನಿಗೆ ಪೊಲೀಸ್ ಭದ್ರತೆ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.
ಈ ಷಡ್ಯಂತ್ರ ನಡೆದಿರುವುದು ನನ್ನ ವಿರುದ್ಧವಲ್ಲ, ಬದಲಾಗಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ನಾಶಪಡಿಸಲು. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವುದನ್ನು ಸಿದ್ದರಾಮಯ್ಯ ತಪ್ಪಿಸಿದ್ದರು ಎಂಬ ಆಕ್ರೋಶದಿಂದಲೇ ಅವರ ಆಪ್ತರೇ ಈ ಕೃತ್ಯ ಎಸಗಿದ್ದಾರೆ. 2023ರಲ್ಲೇ ಸಿದ್ಧಪಡಿಸಿದ ವಿಡಿಯೋವನ್ನು ಈಗ ಯಾಕೆ ತರಲಾಯಿತು? ಈ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವರು ಪೊಲೀಸ್ ಇಲಾಖೆಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ನಮ್ಮ ವಾರ್ ರೂಮ್‌ನ ಕಾರ್ಯಕರ್ತ ಮೋಹನ್ ಗೌಡ ಮನೆಗೆ ಸರ್ಚ್ ವಾರಂಟ್ ಹೆಸರಿನಲ್ಲಿ ನುಗ್ಗಿ ಅವರ ಪತ್ನಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಫೋನ್ ಕಸಿದುಕೊಳ್ಳಲು ಪೊಲೀಸರು ಒತ್ತಡ ಹೇರಿದ್ದಾರೆ. ಚೈನ್ ಕಳ್ಳತನದ ನಕಲಿ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ನಮ್ಮ ಕಾರ್ಯಕರ್ತರು ಆ ಸರವನ್ನು ಬ್ಯಾಡರಹಳ್ಳಿ ಠಾಣೆಗೆ ಹಿಂದಿರುಗಿಸಿದ್ದಾರೆ. ಆ ಸರ ತಂದಿಟ್ಟವರು ಯಾರು ಎಂಬುದು ಬಯಲಾಗಲಿ ಎಂದು ಕಿಡಿಕಾರಿದರು.