

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾದರಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಸಾಧ್ಯ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದ ನಿವಾಸಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು, ನಂತರ ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲಿ ಮುಂದೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್ಸಿನವರಿಗೂ ಅರಿವಾಗುತ್ತಿದೆ. ನನಗೂ ಹಾಗೇ ಅನಿಸಿದೆ ಎಂದರು.
ದೇವೇಗೌಡ ಅವರಿಗೆ ದೀಪಾವಳಿಯ ಶುಭಾಶಯ ತಿಳಿಸಲು ಬಂದಿದ್ದೆ. ಜತೆಗೆ ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನೂ ಚರ್ಚಿಸಿದ್ದೇವೆ. ಈ ಸಭೆಗೆ ಕುಮಾರಸ್ವಾಮಿ ಅವರೂ ಬರಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರು ಬಂದಿಲ್ಲ. ಆದರೆ, ಅವರೊಂದಿಗೂ ಸುದೀರ್ಘವಾಗಿ ಮಾತನಾಡಿದ್ದೇನೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಮಾಜಿ ಸಿಎಂ ಬಿಎಸ್‌ವೈ, ಮೈತ್ರಿ ಮುಂದುವರೆಸುವ ಬಗ್ಗೆ ಅಮಿತ್ ಶಾ, ಮೋದಿ, ದೇವೇಗೌಡರೆಲ್ಲ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ ಹೈಕಮಾಂಡ್ ನಾಯಕರ ತೀರ್ಮಾನಕ್ಕೆ ನಾವು ಬದ್ಧವಾಗಿರ್ತೀವಿ. ಈಗ ಉತ್ತಮ ಮೈತ್ರಿ ಇದೆ. ಇದೇ ರೀತಿ ಮುಂದುವರೆಯುತ್ತೆ. ಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ಹೋಗೋದು ಬರೋದು ಆಗಿದೆ. ಕಾಂಗ್ರೆಸ್ ಕಚ್ಚಾಟ ನೋಡಿದ್ರೆ, ಯಾವ ಸಮಯದಲ್ಲಿ ಏನ್ ಬೇಕಾದ್ರು ಆಗಬಹುದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇವತ್ತಿನ ಸಭೆಯಲ್ಲಿ ಸಣ್ಣಪುಟ್ಟ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ. ಪ್ರಮುಖ ವಿಷಯಗಳನ್ನೇ ಚರ್ಚಿಸಿದ್ದೇವೆ. ಮೈತ್ರಿ ಮತ್ತಿತರ ವಿಚಾರದಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರದ ಹಂತದ ನಾಯಕರ ಜತೆ ಆನಂತರ ಮಾತನಾಡಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುತ್ತದೆಯೇ ಎಂದು ಪ್ರಶ್ನಿಸಿದಾಗ, ಕಾಂಗ್ರೆಸ್‌ನಲ್ಲಿ ಗೊಂದಲ, ಬಡಿದಾಟ ಜೋರಾಗಿ ನಡೆಯುತ್ತಿದೆ. ಅವರೆಲ್ಲಾ ಪದೇ–ಪದೇ ದೆಹಲಿಗೆ ಹೋಗಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಇದೆಲ್ಲವನ್ನೂ ನೋಡಿದರೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡಬೇಕಷ್ಟೇ ಎಂದರು.
ರಾಜ್ಯದಲ್ಲಿ ಆಡಳಿತಯಂತ್ರ ಕುಸಿದಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ. ಬಸ್ಸುಗಳಿಗೆ ಡೀಸೆಲ್ ತುಂಬಿಸಲು ಸರ್ಕಾರದ ಬಳಿ ಹಣವಿಲ್ಲ. ಜನರು ಕೊಟ್ಟ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.