

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಬಳ್ಳಾರಿ ಚಲೋ' ಪಾದಯಾತ್ರೆಗೆ (Ballari Chalo Padayatra) ಸಂಬಂಧಿಸಿದಂತೆ ನಿಯಮಗಳ ಉಲ್ಲಂಘನೆಗಾಗಿ ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಒಟ್ಟು 22 ಬಿಜೆಪಿ ನಾಯಕರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಎಫ್‌ಐಆರ್ ದಾಖಲಾಗಲು ಕಾರಣವೇನು?
ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10 ರವರೆಗೆ ನಡೆದ ಬಿಜೆಪಿಯ ರಾಯಚೂರು ಟು ಬಳ್ಳಾರಿಯ 10 ದಿನಗಳ ಪಾದಯಾತ್ರೆಯ ಸಮಾರೋಪ ಸಮಾವೇಶದ ಸಂದರ್ಭದಲ್ಲಿ ಕೋಳಗಲ್ಲು ಪಂಚಾಯತ್ ವ್ಯಾಪ್ತಿಯ ಬಿಐಟಿಎಂ ಕಾಲೇಜಿನವರೆಗೆ ಮಾತ್ರ ಪಕ್ಷದ ಧ್ವಜಗಳನ್ನು ಅಳವಡಿಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಜೊತೆಗೆ, ಪಾಲಿಕೆ ಸಿಬ್ಬಂದಿ ಬ್ಯಾನರ್ ತೆರವುಗೊಳಿಸಿದ್ದನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಸೆಪ್ಟೆಂಬರ್ 9 ರಂದು ಬಳ್ಳಾರಿ ಮತ್ತು ಹೊಸಪೇಟೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ರಸ್ತೆ ತಡೆ ನಡೆಸಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದರು. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು. ಅನುಮತಿಯಿಲ್ಲದೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಈಗ 22 ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಯಾರ ಯಾರ ಮೇಲೆ ಎಫ್‌ಐಆರ್?
ಮಾಜಿ ಸಚಿವರೂ ಆಗಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಜಿ. ಸೋಮಶೇಖರ್ ರೆಡ್ಡಿ ಅವರನ್ನು ಮುಖ್ಯ ಆರೋಪಿಗಳನ್ನಾಗಿ ಮಾಡಲಾಗಿದ್ದು, ಇವರೊಂದಿಗೆ ಇತರ 20 ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.