

ದಾವಣಗೆರೆ: ಚುನಾವಣಾ ವ್ಯವಸ್ಥೆ ಈಗ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಜನ ಕಾರಣರಲ್ಲ. ರಾಜಕಾರಣಿಗಳೇ ವ್ಯವಸ್ಥೆಯನ್ನು ಹಾಳು ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಸಿ ಮಹದೇವಪ್ಪ. ಈಗಾಗಲೇ ನಾವು ಇಂತಹ ವ್ಯವಸ್ಥೆಯಲ್ಲಿ ತುಂಬಾ ಮುಂದೆ ಬಂದು ಬಿಟ್ಟಿದ್ದೇವೆ. ಈ ರೀತಿ ಹೇಳುವರು ಮೊದಲೇ ಚುನಾವಣೆ ವ್ಯವಸ್ಥೆಯಿಂದ ದೂರ ಇರಬೇಕಿತ್ತು. ಸಂವಿಧಾನ ಜಾರಿ ಬಂದಾಗಲೇ ಕೃಪಲಾನಿಯಂತವರು ಅಂಬೇಡ್ಕರ್ ಗೆ ಪ್ರಶ್ನೆ ಮಾಡಿದ್ದರು. ಹಣ ಕೊಟ್ಟು ಮತ ಖರೀದಿಸುತ್ತೇವೆ ಎಂದಿದ್ದರು. ಇಂತಹ ಚಿಂತನೆಗಳು ಮೊದಲಿನಿಂದಲೂ ನಡೆದುಕೊಂಡು ಬಂದಿವೆ. ಇದು ಸುಧಾರಣೆ ಆಗಬೇಕಿದ್ದರೆ, ಚುನಾವಣಾ ಆಯೋಗ ಮಹತ್ವದ ಹೆಜ್ಜೆ ಇಡಬೇಕು. ತನಿಖಾ ಸಂಸ್ಥೆಗಳು ರಾಜಕೀಯ ದಾಳವಾಗಿ ಬಳಕೆ ಆದರೆ ಪ್ರಜಾಪ್ರಭುತ್ವ ಕತ್ತು ಹಿಚುಕಿದಂತಾಗುತ್ತದೆ ಎಂದರು.
ನಮ್ಮ ಸಿದ್ಧಾಂತಕ್ಕೆ ನಾವು ಬದ್ಧರಾಗಿರಬೇಕು. ಅಂಬೇಡ್ಕರ್ ನಮಗೆ ಪ್ರಜಾಪ್ರಭುತ್ವ ಕೊಟ್ಟಿದ್ದು. ಇಂತಹ ಪ್ರಜಾಪ್ರಭುತ್ವ ಯಶಸ್ವಿಯಾಗಲು ಎಸ್ಸಿ ಎಸ್ಟಿ, ಹತ್ತಾರು ಜಾತಿಗಳು, ಅಲ್ಪಸಂಖ್ಯಾತ ಹಿಂದುಳಿದವರು ಒಂದಾಗಬೇಕು ಎಂದು ಕರೆ ನೀಡಿದರು.