ಸೋನಿಯಾ ಗಾಂಧಿಗೆ ಮಾಡಿದ ಅವಮಾನ ಮರೆತಿಲ್ಲ, ಖರ್ಗೆ ಮೇಲಿನ ‘ಅಸ್ಪೃಶ್ಯತೆ’ ಕಣ್ಣಿಗೆ ಬಿದ್ದಿಲ್ಲವೇ? ಮೋದಿ ಟೀಕೆ ವಿಚಾರಕ್ಕೆ BJPಗೆ ಹರಿಪ್ರಸಾದ್ ತಿರುಗೇಟು..!

ಬಿಜೆಪಿ ನಾಯಕರು ಈ ಹಿಂದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಾಡಿದ್ದ ಅವಹೇಳನಕಾರಿ ಹೇಳಿಕೆಗಳು ಹಾಗೂ ವೈಯಕ್ತಿಕ ದಾಳಿಗಳನ್ನು ಮರೆಯಲು ಸಾಧ್ಯವಿಲ್ಲ.
B K Hariprasad
ಬಿ ಕೆ ಹರಿಪ್ರಸಾದ್
Updated on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ವಿಚಾರವಾಗಿ ತಮ್ಮ ವಿರುದ್ಧ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಮಾಡಿರುವ ಟೀಕೆಗೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ತಿರುಗೇಟು ನೀಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿಯನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಹೇಳಿರುವ ಅವರು, ಸುರೇಶ್ ಕುಮಾರ್ ವಿರುದ್ಧ ವೈಯಕ್ತಿಕ ಟೀಕೆಗಳೊಂದಿಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸುವುದು ಸಜ್ಜನ ಮುಖವಾಡದ ದುರ್ಜನ ಶಾಸಕ ಸುರೇಶ್ ಕುಮಾರ್ ಅವರಿಗೆ ಸಹಿಸಲಾಗುತ್ತಿಲ್ಲ” ಎಂದು ಟೀಕಿಸಿದ್ದಾರೆ.

ಬಿಜೆಪಿ ನಾಯಕರು ಈ ಹಿಂದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಾಡಿದ್ದ ಅವಹೇಳನಕಾರಿ ಹೇಳಿಕೆಗಳು ಹಾಗೂ ವೈಯಕ್ತಿಕ ದಾಳಿಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿಗಳನ್ನೂ ಉಲ್ಲೇಖಿಸಿದ್ದಾರೆ.

ಮೋದಿಯ ವಿರುದ್ಧ ಮಾತಾಡಿದ ತಕ್ಷಣ ‘ಬಿ.ಕೆ. ಹರಿಪ್ರಸಾದ್ ಅವರದ್ದು ಹೊಲಸು ಬಾಯಿ’ ಎಂದು ಸುರೇಶ್ ಕುಮಾರ್ ಟೀಕಿಸುತ್ತಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಕೈ, ಬಾಯಿ ಹೊಲಸು ಮಾಡಿಕೊಂಡಿಲ್ಲ. ಆದರೆ, ಸುರೇಶ್ ಕುಮಾರ್ ಮಾತ್ರ ಹೊಲಸಲ್ಲೇ ಹೊರಳಾಡಿ ‘ಸಜ್ಜನ’ ಎಂದು ಬೋರ್ಡ್ ಹಾಕಿಕೊಂಡಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿದೆ ಎನ್ನಲಾದ ದೂರಿನ ಬಗ್ಗೆಯೂ ಹರಿಪ್ರಸಾದ್ ಪ್ರಸ್ತಾಪಿಸಿದ್ದಾರೆ.

B K Hariprasad
ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: ‘ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ’; ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಪಾಲಿಕೆ ವತಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟು ರೂ.300 ಕೋಟಿ ಮೊತ್ತದ ಟೆಂಡರ್ ಅಕ್ರಮ ಎಸಗಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ.

2020ರಲ್ಲಿ ರೂ.72.25 ಕೋಟಿ ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ಬಿಡ್ ಸಲ್ಲಿಸಿದ್ದ ಅರ್ಹ ಗುತ್ತಿಗೆದಾರರನ್ನು ತಪ್ಪಿಸಲು ಶಾಸಕರು ಅಧಿಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ ಎಂಬ ಆರೋಪವನ್ನೂ ಹರಿಪ್ರಸಾದ್ ಮಾಡಿದ್ದಾರೆ. ಪಾಲಿಕೆಯ ಟಿವಿಸಿಸಿ ಮುಖ್ಯ ಎಂಜಿನಿಯರ್ ಕಚೇರಿಯ ಟಿಪ್ಪಣಿಯಲ್ಲೇ ಶಾಸಕರ ಒತ್ತಡದ ಬಗ್ಗೆ ದಾಖಲಾಗಿದೆ ಎಂದು ಹೇಳಿದ್ದಾರೆ.

ಇದು ಹೊಲಸು ರಾಜಕೀಯವೋ? ಅಥವಾ ಲಂಚದ ಹಣದ ಆಸೆಗಾಗಿ ಮಾಡಿರುವ ‘ಸಲೀಸು’ ರಾಜಕಾರಣವೋ?” ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ಆರೋಪಗಳನ್ನು ಮಾಡಿರುವ ಹರಿಪ್ರಸಾದ್, ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಜ್ಜನ ಎಂಬ ಬೋರ್ಡ್ ಹಾಕಿಕೊಂಡ ಮಾತ್ರಕ್ಕೆ ಯಾವ ದುರ್ಜನರೂ ಸಜ್ಜನರಾಗುವುದಿಲ್ಲ. ಜನರ ಹಣ, ಜನರ ಹಕ್ಕು ಮತ್ತು ಪ್ರಜಾಪ್ರಭುತ್ವದ ಪ್ರಶ್ನೆ ಬಂದಾಗ ಮುಖವಾಡ ಕಳಚುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com