

ಬೆಂಗಳೂರು: ರಾಜ್ಯ ವಿಧಾನಸಭೆ ಕಲಾಪದ ವೇಳೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ಬುಧವಾರ ಮಾತಿನ ಚಕಮಕಿ ನಡೆದಿದ್ದು, ಆಡಳಿತ ಪಕ್ಷದ ಶಾಸಕರ ನಡುವಿನ ಆಂತರಿಕ ಅಸಮಾಧಾನ ಮತ್ತು ಬಣ ರಾಜಕೀಯ ಸದನದಲ್ಲೇ ಬಹಿರಂಗವಾಗಿ ಸ್ಫೋಟಗೊಂಡಿದೆ.
ಇಂದು ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಬರ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಚರ್ಚೆ, ಗದ್ದಲದ ನಡುವೆಯೇ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ಜಟಾಪಟಿ ನಡೆದಿದೆ.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಮಧ್ಯೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಈ ವೇಳೆ ರೂಪಾ ಶಶಿಧರ್ ಅವರು ತಮ್ಮದೇ ಪಕ್ಷದ ಶಾಸಕರ ಎದುರು ಮೇಜು ಕುಟ್ಟಿ ಸಿಟ್ಟು ಹೊರಹಾಕಿದ ಘಟನೆ ನಡೆದಿದೆ.
ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಮ್ಮ ಆಸನಗಳಲ್ಲಿ ಕುಳಿತು ನಗುನಗುತ್ತಾ ಪರಸ್ಪರ ಮಾತನಾಡುತ್ತಿದ್ದರು.
ಇದನ್ನು ಗಮನಿಸಿದ ರೂಪಾ ಶಶಿಧರ್ ಅವರು ನೇರವಾಗಿ ಇಬ್ಬರು ಶಾಸಕರು ಕುಳಿತಿದ್ದ ಆಸನದ ಬಳಿ ಧಾವಿಸಿದರು. ತನ್ನ ಬಗ್ಗೆಯೇ ಮಾತನಾಡುತ್ತಾ ಅಪಹಾಸ್ಯ ಮಾಡುತ್ತಿದ್ದಾರೆ, ಹೀಯಾಳಿಸಿ ನಗುತ್ತಿದ್ದಾರೆ ಎಂದು ತೀವ್ರ ಆಕ್ರೋಶಗೊಂಡ ರೂಪಾ ಶಶಿಧರ್, ಶಾಸಕ ನಾರಾಯಣಸ್ವಾಮಿ ವಿರುದ್ಧ ಏಕಾಏಕಿ ಏರುದನಿಯಲ್ಲಿ ವಾಗ್ದಾಳಿ ನಡೆಸಿದರು.
“ನನ್ನನ್ನ ಅಪಮಾನ ಮಾಡ್ತಾ ಇದ್ದೀರಿ. ನೀವು ಎಲ್ಲ ಒಂದಾಗಿದ್ದೀರಿ. ಆದ್ರೂ ಏನು ಮಾಡೋದಕ್ಕೆ ಆಗುತ್ತೆ ಎಂದು ರೂಪಾ ಕೂಗಾಡಿದರು. ಅಲ್ಲದೆ, ಟೇಬಲ್ ಬಡಿದು ಆಕ್ರೋಶ ಹೊರಹಾಕಿದರು.
ಆಡಳಿತ ಪಕ್ಷದ ಶಾಸಕರ ನಡುವಿನ ಈ ಜಟಾಪಟಿಯನ್ನು ದೂರದಿಂದಲೇ ಗಮನಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ತಕ್ಷಣವೇ ಮಧ್ಯಪ್ರವೇಶಿಸಿ ಕಾಲೆಳೆದರು. “ಇಲ್ಲೊಂದು ದೊಡ್ಡ ಗಲಾಟೆ ನಡೀತಾ ಇದೆ ನೋಡಿ… ಸುಮ್ನಿರಮ್ಮಾ, ಹೊಡಿಬೇಡ ಅವನಿಗೆ!” ಎಂದು ತಮಾಷೆಯಾಗಿ ವ್ಯಂಗ್ಯವಾಡಿದರು.