

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯನ್ನು ಪರಿಷ್ಕರಣೆ ಮಾಡುತ್ತಿದ್ದು, ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮನೆಯ ಯಜಮಾನಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕು ಎಂದರೆ ತನ್ನ ಆಧಾರ್ ಮಾತ್ರವಲ್ಲದೆ, ಗಂಡನ ಆಧಾರ್ ಲಿಂಕ್ ಮಾಡುವದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅಷ್ಟೇ ಅಲ್ಲದೇ ಯಾವುದೇ ಸಾಲ ಇಲ್ಲದಿರೋ ಬ್ಯಾಂಕ್ ಖಾತೆಯನ್ನೇ ಹೊಂದಿರಬೇಕು. ಆಧಾರ್ ಕಾರ್ಡ್‌ನಲ್ಲಿರುವಂತೆಯೇ ಫಲಾನುಭವಿಗಳ ಹೆಸರು ಮತ್ತು ವಿಳಾಸ ಇರ್ಬೇಕು. ಇಲ್ಲವಾದಲ್ಲಿ 2000 ಕಟ್ ಆಗಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಕೇವಲ ಯಜಮಾನಿಯಷ್ಟೇ ಅಲ್ಲದೆ ಪತಿಯ ಆಧಾರ್ ಕಾರ್ಡ್ ಕೂಡ ಕಡ್ಡಾಯವಾಗಿ ಲಿಂಕ್ ಮಾಡಬೇಕಾಗಿದೆ.
ರಾಜ್ಯ ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಜೆಡಿಎಸ್, ಗಂಡನಿಗೆ ಗೊತ್ತಾಗದಂತೆ ಹೆಂಡತಿ ಅಕೌಂಟ್‌ಗೆ 2 ಸಾವಿರ ಹಾಕ್ತೀವಿ ಅಂದಿದ್ದ ಸರ್ಕಾರಕ್ಕೆ ಈಗ ಯಜಮಾನನ ಆಧಾರ್ ಯಾಕೆ ಬೇಕು? ಎಂದು ಪ್ರಶ್ನಿಸಿದೆ.
ಗಂಡನಿಗೆ ಗೊತ್ತಾಗದಂತೆ ಹೆಂಡತಿ ಅಕೌಂಟ್‌ಗೆ 2000 ಹಾಕ್ತೀವಿ" ಅಂದಿದ್ದ ಕಾಂಗ್ರೆಸ್ ಸರ್ಕಾರಕ್ಕೆ, ಈಗ ಗಂಡನ ಆಧಾರ್ ಕಾರ್ಡ್ ಬೇಕಂತೆ!
ಚುನಾವಣೆಗೆ ಮುನ್ನ ಮಹಿಳೆಯರ ಖಾತೆಗೆ ನೇರ ಹಣ ಅಂದವರು, ಈಗ ಪತಿಯ ಆಧಾರ್, ಮುಖದ ದೃಢೀಕರಣ ಅಂತ ಷರತ್ತುಗಳ ಸರಮಾಲೆ ಹಾಕುತ್ತಿರುವುದು ಯಾಕೆ? ಎಂದು ಜೆಡಿಎಸ್ ಎಕ್ಸ್ ನಲ್ಲಿ ಪ್ರಶ್ನಿಸಿದೆ.
ಮನೆಯ ಯಜಮಾನಿಗೆ ಹಣ ಕೊಡುವಾಗ ಯಜಮಾನನ ಆಧಾರ್ ಯಾಕೆ ಬೇಕು? ಇದು ಗೃಹಲಕ್ಷ್ಮಿ ಯೋಜನೆಯೋ ಅಥವಾ ಷರತ್ತುಗಳ ಗೃಹಬಂಧನವೋ? ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.