ನನ್ನ ಕ್ಷೇತ್ರದ ಜನರ ಹಿತಕ್ಕಾಗಿ ರಾಜೀನಾಮೆ ನೀಡಿದ್ದೇನೆ, ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ

ನನ್ನ ಕ್ಷೇತ್ರದ ಜನರ ಹಿತಕ್ಕಾಗಿ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಶೇ.100ರಷ್ಟು ಬದ್ಧನಾಗಿದ್ದೇನೆ. ಇಂಡಿ ಹಾಗೂ ಚಡಚಣ ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ನನ್ನ ಮನವಿಗೆ ಸೂಕ್ತ ಮಹತ್ವ ನೀಡಲಾಗಿಲ್ಲ.
MLA Yashwantrayagouda Patil
ಶಾಸಕ ಯಶವಂತರಾಯಗೌಡ ಪಾಟೀಲ್
Updated on

ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದನ್ನು ವಿರೋಧಿಸಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿದ್ದು, ತಮ್ಮ ಕ್ಷೇತ್ರದ ಜನರ ಹಿತಕ್ಕಾಗಿ ತೆಗೆದುಕೊಂಡಿರುವ ಈ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಹಲವು ನಾಯಕರು ಮನವೊಲಿಸಲು ಪ್ರಯತ್ನಿಸಿದರೂ, ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ನನ್ನ ಕ್ಷೇತ್ರದ ಜನರ ಹಿತಕ್ಕಾಗಿ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಶೇ.100ರಷ್ಟು ಬದ್ಧನಾಗಿದ್ದೇನೆ. ಇಂಡಿ ಹಾಗೂ ಚಡಚಣ ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ನನ್ನ ಮನವಿಗೆ ಸೂಕ್ತ ಮಹತ್ವ ನೀಡಲಾಗಿಲ್ಲ.

ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಾಲ್ಕು ಹಂತಗಳ ಬರ ಸಮೀಕ್ಷೆ ನಡೆದ ನಂತರವೂ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದು ನಮ್ಮ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಡಿ.ಕೆ. ಶಿವಕುಮಾರ್ ಅವರೊಂದಿಗೆ ತಾವು ಮಾತನಾಡಿದ್ದು, ಈ ವಿಚಾರವನ್ನು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಆದರೆ, ರಾಜೀನಾಮೆಯನ್ನು ಹಿಂಪಡೆಯುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಪ್ರಭಾವಿ ವ್ಯಕ್ತಿಗಳು ಮತ್ತು ಒತ್ತಡದ ತಂತ್ರಗಳನ್ನು ಬಳಸುವವರಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ ಎಂದು ಆರೋಪಿಸಿದ ಪಾಟೀಲ್, ವಿನಮ್ರ ರೀತಿಯಲ್ಲಿ ನಡೆದುಕೊಳ್ಳುವ ನಾಯಕರಿಗೆ ಸೂಕ್ತ ಮನ್ನಣೆ ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ.

MLA Yashwantrayagouda Patil
ಬರ ವಿಚಾರಕ್ಕೆ 'ಕೈ' ಶಾಸಕನ ರಾಜೀನಾಮೆ: ಸರ್ಕಾರಕ್ಕೆ ಮುಜುಗರ ತಂದ ಯಶವಂತರಾಯಗೌಡ ಪಾಟೀಲ್ ನಡೆ; ಸದನದಲ್ಲಿ ಆಡಳಿತ-ಪ್ರತಿಪಕ್ಷಗಳ ಜಟಾಪಟಿ..!

ನನ್ನ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ನನಗೆ ಸಾಧ್ಯವಾಗದ ಕಾರಣ, ನನ್ನ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲೂ ಪಾಟೀಲ್ ಅವರಿಗೆ ಸಚಿವ ಸ್ಥಾನ ದೊರೆತಿರಲಿಲ್ಲ. ಸಚಿವ ಸ್ಥಾನಕ್ಕೆ ಪರಿಗಣಿಸಲ್ಪಟ್ಟ ಶಾಸಕರಲ್ಲಿ ಅವರ ಹೆಸರೂ ಇತ್ತು. ಆದರೆ, ತಮ್ಮ ರಾಜೀನಾಮೆ ಪತ್ರದಲ್ಲಿ ಸಚಿವ ಸ್ಥಾನ ಸಿಗದಿರುವುದನ್ನು ಕಾರಣವಾಗಿ ಉಲ್ಲೇಖಿಸದೆ, ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಹಾಗೂ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದಿರುವುದನ್ನೇ ರಾಜೀನಾಮೆಗೆ ಕಾರಣವೆಂದು ತಿಳಿಸಿದ್ದಾರೆ.

ಸೋಮವಾರ ಆರಂಭವಾದ ಮೂರು ದಿನಗಳ ವಿಧಾನಸಭೆ ಅಧಿವೇಶನದ ಮೊದಲ ಎರಡು ದಿನಗಳಿಗೆ ಅನಾರೋಗ್ಯದ ಕಾರಣ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಸ್ಪೀಕರ್ ಅವರಿಂದ ಪಾಟೀಲ್ ಅನುಮತಿ ಪಡೆದಿದ್ದರು. ಆದರೆ, ಬುಧವಾರ ಅವರು ಅಧಿವೇಶನಕ್ಕೆ ಹಾಜರಾದರು.

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದ ಹಿನ್ನೆಲೆಯಲ್ಲಿ ಪಾಟೀಲ್ ಮಂಗಳವಾರ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು.

ನಮ್ಮ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಹಲವು ಬಾರಿ ನೇರವಾಗಿ ಹೇಳದೆ, ವಿನಮ್ರ ರೀತಿಯಲ್ಲಿ ಮನವಿ ಮಾಡಿದ್ದೇನೆ. ಆದರೆ, ನಮ್ಮ ಮಾತುಗಳಿಗೆ ಅಥವಾ ಭಾವನೆಗಳಿಗೆ ಯಾವುದೇ ಮೌಲ್ಯ ನೀಡಲಾಗುತ್ತಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಪಾಟೀಲ್ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com