ಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮ್ಮ ಕ್ಯಾಪ್ಟನ್‌: 2028 ಕ್ಕೂ ಡಿಕೆಶಿ ಸಿಎಂ ಆಗಲಿ; ನನಗಿನ್ನೂ ವಯಸ್ಸಿದೆ ಕಾಯುತ್ತೇನೆ- ಸತೀಶ್

ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮ್ಮ ಕ್ಯಾಪ್ಟನ್‌. ಇದರ ಬಗ್ಗೆ ಯಾರಿಗು ಅನುಮಾನ ಬೇಡ. ನಾನು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ. ನಾವು ಹಿಂದೆಯೂ ಪ್ರತಿ ಬಾರಿ ಭೇಟಿಯಾಗುತ್ತಿರಲಿಲ್ಲ
Siddaramaiah and satish jarkiholi
ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ
Updated on: 

ಮೈಸೂರು: ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮಗೆ ಆರ್ಮಿ ಕ್ಯಾಪ್ಟನ್‌, ನಾನು ವೈಸ್‌ ಕ್ಯಾಪ್ಟನ್‌ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮ್ಮ ಕ್ಯಾಪ್ಟನ್‌. ಇದರ ಬಗ್ಗೆ ಯಾರಿಗು ಅನುಮಾನ ಬೇಡ. ನಾನು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ. ನಾವು ಹಿಂದೆಯೂ ಪ್ರತಿ ಬಾರಿ ಭೇಟಿಯಾಗುತ್ತಿರಲಿಲ್ಲ. ಪದೇ ಪದೇ ಜೊತೆಯಲ್ಲಿ ಇರುತ್ತಿರಲಿಲ್ಲ. ಅವಶ್ಯಕತೆ ಇದ್ದಾಗ ಭೇಟಿಯಾಗುತ್ತೇವೆ ಈಗಲೂ ಅಷ್ಟೇ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಅಂತರ ಅಂತ ಏನೂ ಇಲ್ಲ. ದೂರದ ಬೆಟ್ಟ ನುಣ್ಣಗೆ ಅಂತಾರೆ, ಹಾಗೇ ನಿಮಗೆ ನಾವು ಚೆನ್ನಾಗಿಲ್ಲ ಅನ್ನಿಸುತ್ತೆ. ಆದ್ರೆ ಸಿದ್ದರಾಮಯ್ಯ ನಾನು ಚೆನ್ನಾಗಿಯೇ ಇದ್ದೇವೆ. ಇಡಿ ದಾಳಿಯಾದ ವೇಳೆ ಯತೀಂದ್ರ ಬಂದಿದ್ರು. ಸಿದ್ದರಾಮಯ್ಯ ಆಪ್ತರು ಜೊತೆಯಲ್ಲೇ ಇದ್ದಾರೆ. ಸಿದ್ದರಾಮಯ್ಯ ಜೊತೆ ಆಪ್ತ ಆರ್ಮಿ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಜಾಣ್ಮೆಯ ಉತ್ತರ ನೀಡಿ ನುಣುಚಿಕೊಂಡಿದ್ದಾರೆ. ಯಾರದ್ದಾದ್ರೂ ಮದುವೆಗೆ ಗೃಹ ಪ್ರವೇಶಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ. ಎಲ್ಲರೂ ಬರಬೇಕೆಂದು ನೀರಿಕ್ಷೆ ಮಾಡಿದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ರು.

ಇನ್ನೂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದು ಅಹಿಂದ ಸಮಾವೇಶ ಅಲ್ಲ. ಅದು ಕೇವಲ ಹಿಂದುಳಿದವರ ಸಮಾವೇಶ. ಸಮಾವೇಶ ಆಯೋಜನೆ ಮಾಡಿದವರು ನನ್ನನ್ನ ಕರೆದಿಲ್ಲ. ಯಾಕೆ ನನ್ನನ್ನು ಕರೆದಿಲ್ಲ ಎಂದು ಕೇಳಲು ಆಗುತ್ತಾ? ಆಹಿಂದ ಸಂಘಟನೆ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.

Siddaramaiah and satish jarkiholi
ಸಚಿವ ಸತೀಶ್ ಜಾರಕಿಹೊಳಿ ಹೂಡಿಕೆಗಳ ಜಾಡು; ಆಫ್ರಿಕಾದ ಕಾಂಗೋ ತನಿಖೆಯ ಕೇಂದ್ರಬಿಂದು: ED ಎಕ್ಸ್‌ ಪೋಸ್ಟ್ ನಲ್ಲಿ ಏನಿದೆ?

2028ಕ್ಕೂ ಡಿ.ಕೆ.ಶಿವಕುಮಾರ್​ರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ, ಅವರೇ ಮುಖ್ಯಮಂತ್ರಿ ಆಗಲಿ. ತನಗೆ ಇನ್ನೂ ವಯಸ್ಸಿದೆ, ಇನ್ನೂ ಕಾಯುತ್ತೇನೆ. ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದಿದ್ದೆ. ಆದರೆ ಡಿಕೆಶಿ ಅವರು ಮುಂದೆಯೂ ನಾನೇ ಸಿಎಂ ಅಂತಿದ್ದಾರೆ. ಸಂತೋಷ ನನಗೆ ಅವರೇ ಸಿಎಂ ಆಗಲಿ, ನಾವು ಕಾಯ್ತೇವೆ ಎಂದು ಸತೀಶ್​​ ಹೇಳಿದ್ದಾರೆ.

ಇನ್ನೂ ಆರ್ಥಿಕ ಇಲಾಖೆಯ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರ್ಥಿಕ ಇಲಾಖೆ ಸರ್ಕಾರ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಿಲ್ಲ. ಬಜೆಟ್ ನಲ್ಲಿ ಏನು ಘೋಷಣೆ ಮಾಡಿದ್ದೇವೆ ಅಷ್ಟಕ್ಕೆ ಮಾತ್ರ ನಮ್ಮ ಬಳಿ ಹಣ ಇದೆ ಎಂದು ಹೇಳಿದ್ದಾರೆ. ಹೊಸ ಘೋಷಣೆಗಳಿಗೆ ಹಣ ಹೊಂದಿಸುವುದು ಕಷ್ಟ ಎಂದು ಹೇಳಿದೆ. ಇದನ್ನ ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತೆ. ಹೊಸ ಘೋಷಣೆ ಮಾಡುವಾಗ ಯೋಚನೆ ಮಾಡಿ ಘೋಷಿಸಿ ಎಂದು ಹೇಳಿದ್ದಾರೆ. ಅದನ್ನು ನಾವು ಗಮನಿಸುತ್ತೇವೆ. ಕೆಲವೊಂದು ಇಲಾಖೆಗಳಲ್ಲಿ ಹಣ ವೆಚ್ಚಾಗುವುದಿಲ್ಲ. ಆ ಹಣವನ್ನ ಹೊಸ ಘೋಷಣೆಗಳಿಗೆ ಬಳಸುತ್ತೇವೆ. ಆರ್ಥಿಕ ಇಲಾಖೆ ಪತ್ರದ ಅರ್ಥ ಸರ್ಕಾರ ದಿವಾಳಿಯಾಗಿದೆ ಎಂಬುದು ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನೂ ತಮ್ಮ ಮೇಲಿನ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕ್ಷಣದಲ್ಲಿ ಇಡಿಯಿಂದ ನನಗೆ ನೋಟಿಸ್ ಬರಬಹುದು. ನೋಟಿಸ್ ಬಂದೇ ಬರುತ್ತದೆ, ಬಂದಾಗ ಹೋಗಿ ಉತ್ತರ ಕೊಡುತ್ತೇನೆ. ವಿದೇಶದಲ್ಲಿ ನಾವು ಹಣ ಹೂಡಿಕೆ ಮಾಡಿದ್ದೇವೊ ಇಲ್ಲವೊ ಎಂಬುದನ್ನ ನಾನು ಇಲ್ಲಿ ಮಾತನಾಡುವುದಿಲ್ಲ, ಇಡಿ ಮುಂದೆ ಉತ್ತರ ಕೊಡುತ್ತೇನೆ. ಯಾವುದೋ ಕಮಿಷನ್ ವಿಚಾರಕ್ಕೆ ದಾಳಿಯಾಗಿದೆಯೋ ಬೇರೆ ವಿಚಾರಕ್ಕೆ ದಾಳಿಯಾಗಿದೆಯೋ ಅದನ್ನ ಇಡಿಗೆ ಹೇಳುತ್ತೇನೆ ಎಂದಿದ್ದಾರೆ. ದೇಶಕ್ಕೆ ನೀಲಿ ಶಾಲಿನ ಅವಶ್ಯಕತೆಯಿದೆ. ಇದರ ಬಗ್ಗೆ ನಮ್ಮ ಸ್ವಾಮೀಜಿ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಹೆಚ್ಚೇನೂ ಹೇಳಲ್ಲ ಎಂದು ಹೆಸರೇಳದೇ ಪ್ರತಾಪ್ ಸಿಂಹಗೆ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com