ಕನ್ನಡ ಮಾಧ್ಯಮಗಳು ಕನ್ನಡ ಪದ ದಾರಿದ್ರ್ಯದಿಂದ ಬಳಲುತ್ತಿವೆಯೇ?

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂಬ ವಾದ ಇಂದು ನಿನ್ನೆಯಲ್ಲದೇ ಹೋದರೂ, ಪ್ರತೀ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಇಂತಹುದೊಂದು ಚರ್ಚೆ ನಿಶ್ಚಿತವಾಗಿರುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರ್ನಾಟಕ ರಾಜ್ಯ 60ನೇ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಕರ್ನಾಟಕದ ಮೂಲೆ ಮೂಲೆಯಲ್ಲೂ ಕನ್ನಡಿಗರ ಸಂಭ್ರಮ ಮುಗಿಲು ಮುಟ್ಟಿದೆ. ಕನ್ನಡಿಗರು ಎಲ್ಲೇ ಸಂಭ್ರಮಿಸಿದರೂ ಅವುಗಳನ್ನು ತಕ್ಷಣವೇ ವರದಿ ಮಾಡುವುದು ನಮ್ಮ ವಿದ್ಯುನ್ಮಾನ ಮಾಧ್ಯಮಗಳು. ಆದರೆ ಇಂತಹ ವಿದ್ಯುನ್ಮಾನ ಮಾಧ್ಯಮಗಳಲ್ಲೇ ಕನ್ನಡವನ್ನು ಕಡೆಗಣಿಸಲಾಗಿದೆ ಎಂಬ ವಾದ ಇಂದು ನಿನ್ನೆಯಲ್ಲದೇ ಹೋದರೂ, ಪ್ರತೀ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಇಂತಹುದೊಂದು ಚರ್ಚೆ ನಿಶ್ಚಿತವಾಗಿರುತ್ತದೆ.

ನಿಜಕ್ಕೂ ವಿದ್ಯುನ್ಮಾನ ಮಾಧ್ಯಮಗಳಿಗೆ ಇಂಗ್ಲಿಷ್ ಹೊರತಾಗಿ ಕಾರ್ಯ ನಿರ್ವಹಿಸುವುದು ಅಸಾಧ್ಯವೇ ಎಂಬಂತಹ ಸ್ಥಿತಿಗೆ ಇಂದಿನ ಮಾಧ್ಯಮಗಳು ಬಂದು ತಲುಪಿವೆ. ಇಂದಿನ ಪರಿಸ್ಥಿತಿಗಳನ್ನು ಅವಲೋಕಿಸಿದರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ನಿಜಕ್ಕೂ ಶೋಚನೀಯ ಎಂದೆನಿಸುತ್ತದೆ. ದಶಕಗಳ ಹಿಂದೆ ಇದ್ದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಚಂದನದಲ್ಲಿ ಒಂದೇ ಒಂದು ಆಂಗ್ಲ ಪದ ಬಳಕೆ ಇಲ್ಲದೆ ವಾರ್ತಾವಾಚನ ನಿರರ್ಗಳವಾಗಿ ಸಾಗಿತ್ತು. ಆದರೆ ಇಂದು ಜಾಗತೀಕರಣದ ಮತ್ತು ಆಧುನೀಕರಣದ ಪರಿಣಾಮವಾಗಿ ತಲೆ ಎತ್ತಿದ ಖಾಸಗಿ ಸುದ್ದಿವಾಹಿನಿಗಳು ಕೇವಲ ಒಂದೇ ಒಂದು ನಿಮಿಷ ಕೂಡ ಆಂಗ್ಲ ಪದ ಬಳಕೆ ಇಲ್ಲದೆ ವಾರ್ತಾವಾಚನ ಸಾಧ್ಯವಿಲ್ಲ ಎಂಬಂತೆ ತಯಾರಾಗಿ ನಿಂತಿವೆ.

ವರನಟ, ಹಾಸ್ಯಚಕ್ರವರ್ತಿ, ಅಭಿನಯ ಶಾರದೆ, ಕಲಾ ತಪಸ್ವಿ ಎಂಬ ಪದಪ್ರಯೋಗಗಳು ಕಣ್ಮರೆಯಾಗಿ, ಕ್ರೇಜಿ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಸೂಪರ್‌ಸ್ಟಾರ್ ಕಾಮಿಡಿ ಕಿಂಗ್‌ಗಳೆಂಬ ಆಂಗ್ಲ ಪದಗಳದ್ದೇ ಕಾರುಬಾರು. ಇದಲ್ಲದೆ ಜೈಲು, ಬೇಲು, ಸಿ.ಎಂ.,ಪಿ.ಎಂ. ಟಾರ್ಗೆಟ್, ವಾರೆಂಟ್‌ಗಳಂತಹ ಕಾರ್ಯಕ್ರಮಗಳು ಇದಕ್ಕೆ ಹೆಚ್ಚುವರಿ ಇನಾಮಾಗಿ ಪರಿಣಮಿಸಿವೆ. ಕನ್ನಡ ಕಂಪಲ್ಸರಿ ಕಲೀಬೇಕು, ಕನ್ನಡದಲ್ಲೇ ಸ್ಪೀಕ್ ಮಾಡಬೇಕು, ಕನ್ನಡ ಸೇವ್ ಮಾಡಲು ಏಮ್ ಇರಬೇಕೆನ್ನುವ ಕನ್ನಡಿಗರ ನಡುವೆ ಉಳಿದೀತೆ ಪರಿಶುದ್ಧ ಕನ್ನಡ ಎನ್ನುವ ಭಯ ಕೂಡ ಕಾಡ ತೊಡಗಿದೆ.

 2011ರಲ್ಲಿ ಬೆಂಗಳೂರಿನಲ್ಲಿ ನಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಅಂದಿನ ಸಮ್ಮೇಳನಾಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ತಮ್ಮ ಭಾಷಣದಲ್ಲಿ ಇಂತಹುದೇ ಆತಂಕ ವ್ಯಕ್ತಪಡಿಸಿದ್ದರು.

"ಕನ್ನಡ ಭಾಷೆ ಈಗ ನಿಜವಾಗಿಯೂ ಕಷ್ಟಕ್ಕೆ ಸಿಲುಕಿದೆ. ಅದರ ಮೇಲೆ ಇಂಗ್ಲಿಷಿನಂಥ ಕೊಲೆಗಡುಕ ಭಾಷೆಯ ಕಣ್ಣು ಬಿದ್ದಿದೆ. ಜಾಗತೀಕರಣದ ಪರಿಣಾಮವಾಗಿ ಕನ್ನಡವನ್ನು ಮಾತನಾಡುವ ಎಲ್ಲ ಪ್ರದೇಶಗಳಲ್ಲಿಯೂ ಇಂಗ್ಲಿಷ್ ಪ್ರಾಬಲ್ಯ ಸಾಧಿಸುತ್ತಿದೆ. ನಗರಪ್ರದೇಶಗಳಲ್ಲಿ ಕನ್ನಡದ ಪ್ರಯೋಗ ಕಡಿಮೆಯಾಗುತ್ತಿದ್ದು, ಕನ್ನಡವು ಎರಡನೆಯ ಸ್ಥಾನಕ್ಕೆ ತಳ್ಳಲ್ಪಡುವ ಅಪಾಯವಿದೆ. ಕನ್ನಡ ಸಾಯುವುದಿಲ್ಲ ಎಂಬುದು ನಿಜ. ಆದರೆ ಕರ್ನಾಟಕದಲ್ಲಿ ಅದು ತನ್ನ ಪ್ರಥಮ ಸ್ಥಾನವನ್ನು ಎಂದೂ ಕಳೆದುಕೊಳ್ಳಬಾರದು. ಕನ್ನಡ ನಾಡಿನ ಎಲ್ಲರೂ ಈ ಸ್ಥಿತಿಯನ್ನು ತೀವ್ರವಾಗಿ ಗಮನಿಸಬೇಕು. ಪ್ರಮುಖವಾಗಿ ಪತ್ರಕರ್ತರು, ಸಮೂಹಮಾಧ್ಯಮಗಳು ಮತ್ತು ಮುಖ್ಯವಾಗಿ ಸಿನಿಮಾಲೋಕ ಇದನ್ನು ತಮ್ಮ ಕರ್ತವ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು.

ಕನ್ನಡದಲ್ಲಿ ಸೊಗಸಾದ ಶಬ್ದಗಳಿರುವಾಗ ಅವುಗಳನ್ನೇ ತಳ್ಳಿಹಾಕಿ ಚಿಲ್ಲೀಸ್, ರಾಡಿಶ್, ಬೀನ್ಸ್, ಕುಕುಂಬರ್ರು, ಕ್ಯಾಪ್ಸಿಕಮ್ಮು, ನೈಫು, ಆಯಿಲ್ಲು, ಬಟ್ಟರ್ರು, ಪೌಡರ್ರು, ಗ್ರೈಂಡು ಎಂಬ ಪದಗಳು ಅಡುಗೆ ಮನೆಗೇ ನುಗ್ಗಿಬಿಟ್ಟಿವೆ. ಇದಕ್ಕೆ ಕಾರಣ ವಾಹಿನಿಗಳಲ್ಲಿ ‘ಹೊಸರುಚಿ’ಯ ಪ್ರದರ್ಶನ ಮಾಡುವ ಕನ್ನಡ ಮಹಿಳಾಮಣಿಗಳ ಸಂಭಾಷಣೆ ಮತ್ತು ಅವರ ಆಂಗ್ಲ ಪ್ರೇಮ. ಎಫ್.ಎಂ. ರೇಡಿಯೋ, ದೂರದರ್ಶನದ ಅನೇಕ ವಾಹಿನಿಗಳ ಪ್ರಭಾವ. ವರ್ತಮಾನ ಪತ್ರಿಕೆಗಳಲ್ಲಿಯೂ ದೂರದರ್ಶನದಲ್ಲಿಯೂ ಆಕಾಶವಾಣಿಯಲ್ಲಿಯೂ ಪ್ರಚಾರವಾಗುವ ಇಂಥ ಪ್ರಯೋಗಗಳನ್ನು ನಿಲ್ಲಿಸಿ ನಮ್ಮಲ್ಲಿ ಪ್ರಚಾರದಲ್ಲಿರುವ ಕನ್ನಡ ಶಬ್ದಗಳನ್ನು ಉಪಯೋಗಿಸುವಂತೆ ಆಯಾ ಕೇಂದ್ರಗಳ ಅಧಿಕಾರಿಗಳು ನಿರ್ದೇಶಿಸಬೇಕು. ಇಲ್ಲವಾದರೆ ನಮ್ಮ ಸ್ವಂತ ಶಬ್ದಸಂಪತ್ತು ಮಾಯವಾಗಿಬಿಡುತ್ತದೆ. ನಾವು ಅವುಗಳಿಲ್ಲದೆ ಕನ್ನಡ ಶಬ್ದದರಿದ್ರರಾಗಿಬಿಡುತ್ತೇವೆ! ಎಂದು ಎಚ್ಚರಿಸಿದ್ದರು.

ವಿಪರ್ಯಾಸವೆಂದರೆ ಅಂದಿನ ಸಮ್ಮೇಳನಾಧ್ಯಕ್ಷ ಭಾಷಣವನ್ನು ನೇರಪ್ರಸಾರದಲ್ಲಿ ಬಿತ್ತರಿಸದ ಮಾಧ್ಯಮಗಳು ಮಾತ್ರ ಇಂದಿಗೂ ಅದೇ ಭಾಷೆಯನ್ನು ಮುಂದುವರಿಸಿಕೊಂಡು ಬಂದಿವೆ. ಪರಿಣಾಮ ಇಂದಿನ ಯುವ ಜನರು ಕೂಡ ಅರ್ಧ ಕನ್ನಡ ಅರ್ಧ ಇಂಗ್ಲಿಷ್ ಸೇರಿಸಿ ಬೆರಕೆ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಇಂಗ್ಲಿಷ್ ಮಾತನಾಡಲು ಬಾರದ ವ್ಯಕ್ತಿಕೂಡ ತನ್ನ ಭಾಷೆಯಲ್ಲಿ ಆಂಗ್ಲ ಪದಗಳ ಬಳಕೆ ಮಾಡುತ್ತಿದ್ದಾನೆ ಎಂದರೆ ಆತನ ಮೇಲೆ ಆಂಗ್ಲ ಭಾಷೆಯ ಪರಿಣಾಮ ಎಷ್ಟಿರಬಹುದು ಎಂಬುದನ್ನು ಊಹಿಸಬಹುದು.

ಇನ್ನು ಕನ್ನಡ ಸುದ್ದಿವಾಹಿನಿಗಳು ನಿರೂಪಕರನ್ನು ತಯಾರಿ ಮಾಡುವುದೇ ಹೀಗೆ ಎಂದೆನ್ನಬಹುದು. ವಾರ್ತಾ ವಾಚನದಲ್ಲಿ, ಸಂದರ್ಶನ ಆಧಾರಿತ ಕಾರ್ಯಕ್ರಮಗಳಲ್ಲಂತೂ ಒಂದು ಕನ್ನಡ ಪದಕ್ಕೆ ಮತ್ತೊಂದು ಇಂಗ್ಲಿಷ್ ಪದ ಸೇರಿಸಿ ವಾಕ್ಯ ರಚಿಸುವ ಪ್ರವೃತ್ತಿ ಬೆಳೆದಿದೆ. ವೀಕ್ಷಕರನ್ನು ಸೆಳೆಯುವ ಉದ್ದೇಶದಿಂದ ಸುದ್ದಿ ಬರೆಯುವವರು ಉದ್ದೇಶಪೂರ್ವಕವಾಗಿಯೇ ಹೀಗೆ ಬರೆಯುತ್ತಿದ್ದಾರೆ. ಇದು ಕನ್ನಡ ಭಾಷೆಯಲ್ಲಿ ಪದ ಇಲ್ಲ ಎಂದಲ್ಲ, ಅದೊಂದು ಫ್ಯಾಷನ್ ಎನ್ನುತ್ತಾರೆ ಅವರು. ಜನ ಸಾಮಾನ್ಯರು ಬಳಸುವ ಪದ ಹಾಗೂ ಜನಸಾಮಾನ್ಯರು ಮಾತನಾಡುವ ರೀತಿ ಸುದ್ದಿ ಇದ್ದರೆ ಜನ ಮೆಚ್ಚುತ್ತಾರೆ ಎಂಬುದು ಅವರ ವಾದ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಖಾಸಗಿ ಸುದ್ದಿವಾಹಿನಿಯೊಂದು ರಾಜ್ಯೋತ್ಸವದ ಅಂಗವಾಗಿ ತನ್ನ ಇಡೀ ದಿನದ ವಾರ್ತಾವಾಚನವನ್ನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಮಾಡುವ ಪ್ರಯತ್ನಕ್ಕೆ ಕೈಹಾಕಿತ್ತು. ವಾಹಿನಿಯ ಎಲ್ಲ ಸುದ್ದಿ ನಿರೂಪಕರೂ ಕಷ್ಟಪಟ್ಟು ಕನ್ನಡದಲ್ಲೇ ವಾರ್ತೆ ಓದುವ ಪ್ರಯತ್ನ ಮಾಡಿದರು. ಕೆಲವರು ಬಹುತೇಕ ಯಶಸ್ವಿಯಾದರೂ, ಬಹುತೇಕರು ಸೋತರು. ಮಾರನೆ ದಿನ ಅವರೇ ಆತ್ಮಾವಲೋಕನ ಮಾಡಿಕೊಂಡು, ತಾವು ಎಷ್ಟು ಬಾರಿ ಎಷ್ಟು ಆಂಗ್ಲಪದ ಬಳಸಿದೆವೆಂಬುದನ್ನೂ ತಾವೇ ಹೇಳಿಕೊಂಡರು. ಅಲ್ಲದೆ ತಮ್ಮಿಂದ ಸಂಪೂರ್ಣ ಕನ್ನಡದಲ್ಲಿ ಸುದ್ದಿ ವಾಚನ ಸಾಧ್ಯವೇ ಇಲ್ಲ ಎಂಬುದನ್ನು ಒಪ್ಪಿಕೊಂಡೇ ಬಿಟ್ಟರು. ಕನಿಷ್ಠ ತಮ್ಮ ತಪ್ಪನ್ನು ಅರಿತು ಇಂಥ ಒಂದು ಪ್ರಯತ್ನವಾದರೂ ನಡೆಯಿತು. ಜೊತೆಗೆ ಈಗ ಹಲವು ಇಂಗ್ಲಿಷ್ ಶೀರ್ಷಿಕೆಯ ಕಾರ್ಯಕ್ರಮಗಳಿಗೆ ಕನ್ನಡದ ಹೆಸರು ಇಡುವ ಪ್ರಯತ್ನ ನಡೆಯುತ್ತಿದೆ. ಇದು ನಿಜಕ್ಕೂ ಸ್ವಾಗತಾರ್ಹ. ಆದರೆ ಎಲ್ಲ ವಾಹಿನಿಗಳಲ್ಲೂ ಇಂಥ ಬದಲಾವಣೆಯ ಅಗತ್ಯ ಇದೆ. ಇತ್ತೀಚಿನ ಕೆಲವು ಉದಾಹರಣೆಗಳು ಇಲ್ಲಿವೆ.

ಬಿಗ್ ನ್ಯೂಸ್  (ಅಗ್ರ ವಾರ್ತೆ) ಎಂದು ಸುದ್ದಿವಾಚವನ್ನು ಪ್ರಾರಂಭಿಸಿ ನಂತರ ಎಂದು ಇಂಗ್ಲಿಷ್‌ಗೆ ಶರಣಾಗುತ್ತದೆ. ಇನ್ನು ಮುಖ್ಯಾಂಶಗಳಲ್ಲಂತೂ ಸಿ.ಎಂ., ಪಿ.ಎಂ., ಡಿ.ಸಿ., ವಾರೆಂಟ್, ಪಿ.ಐ.ಎಲ್. ಜಾರ್ಜ್‌ಶೀಟ್ ಎಫ್.ಐ.ಆರ್. ಪದಗಳ ನಿರಂತರ ಬಳಕೆ ಆಗುತ್ತದೆ. ಹೀಗಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ, ದೋಷಾರೋಪ ಪಟ್ಟಿ, ಪ್ರಥಮ ಮಾಹಿತಿ ವರದಿ ಇತ್ಯಾದಿ ಪದಗಳು ಮರೆತೇ ಹೋಗುತ್ತವೆ. ಇನ್ನು ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೂಪರ್, ಸಿಟಿ ಪ್ಲಸ್, ಫುಲ್ ಹೌಸ್ ಇತ್ಯಾದಿ ಸೇರಿವೆ.

ಆಂಗ್ಲಭಾಷೆಯ ವ್ಯಾಮೋಹದಿಂದ ಅಗ್ರವಾರ್ತೆ ಇಲ್ಲಿ ಬಿಗ್ ನ್ಯೂಸ್ ಆಗುತ್ತದೆ. ಬೆಂಗಳೂರು ಸುದ್ದಿ ಜಸ್ಟ್ ಬೆಂಗಳೂರು ಆಗುತ್ತದೆ. ಜೊತೆಗೆ ಸುದ್ದಿ ವಾಚನದ ವೇಳೆ ಹಿಂದಿ ಹಾಗೂ ಇಂಗ್ಲಿಷ್ ಪದಗಳು ಯಥೇಚ್ಛವಾಗಿ ಬಳಕೆ ಆಗುತ್ತವೆ. ಓನ್ಲಿ ಜಾನ್, ನೋ ಬಿಪ್ಸ್, ಬೆಂಗಾಳಿ ಬೆಡಗಿ ಇಲ್ಲದಿದ್ರೂ ನೋ ಪ್ರಾಬ್ಲಂ, ಲಾಂಗ್ ಹೇರ್ ಮಹಿ, ವರದಿ ಮತ್ತು ಸ್ಕ್ರಿಪ್ಟ್, ಟೀಂ ಇಂಡಿಯಾಗೆ ವಾರ್ನಿಂಗ್, ದಗಲ್ ಬಾಜಿ ಕಾಲೇಜ್, ಗೋಲ್ ಮಾಲ್, ದರ್ಶನ್ ಪ್ಯಾರಾಡೈಸ್, ದುನಿಯಾ, ಅವರಿಗೆ ಇವರ ಸಾಥ್, ಇತ್ಯಾದಿ ಪದಗಳು ಟಿವಿ ಪರದೆಯಲ್ಲಿ ರಾರಾಜಿಸುತ್ತವೆ. ಯಾವುದೇ ಒಂದು ಪದವನ್ನು ಕನಿಷ್ಠ ೬ ಬಾರಿ ಕೇಳಿದರೆ ಅದು ನಮ್ಮ ನೆನಪಿನಲ್ಲಿ ಉಳಿಯುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಹೀಗೆ ನಾವು ನಿರಂತರವಾಗಿ ಅನ್ಯ ಭಾಷಾ ಪದಗಳನ್ನು ಕೇಳುತ್ತಿದ್ದರೆ ಕನ್ನಡದಲ್ಲಿ ಮಾತನಾಡುವವರು ಕೂಡ ಅವರಿಗರಿವಿಲ್ಲದೆಯೇ ಅನ್ಯಭಾಷೆ ಪದವನ್ನು ಬಳಸುವಂಥ ಸ್ಥಿತಿ ನಿರ್ಮಾಣವಾಗುತ್ತದೆ.

ಇನ್ನು ನೇರ ಸಂದರ್ಶನ ಮಾಡುವವರು, ದೂರವಾಣಿ ಮೂಲಕ ಸಂಪರ್ಕಿಸುವ ಸಂದರ್ಭದಲ್ಲಿ ಇತ್ತ ಇಂಗ್ಲೀಷೂ ಅಲ್ಲದ, ಅತ್ತ ಕನ್ನಡವೂ ಅಲ್ಲದ ವಾಕ್ಯ ರಚನೆ ಮತ್ತು ಪದ ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಇಂಗ್ಲಿಷ್ ವಾಕ್ಯ ರಚನೆಯೂ ತಪ್ಪಾಗಿರುತ್ತದೆ. ಸುದ್ದಿ ವಾಚನದ ವೇಳೆ  ಪೆನ್ಷನ್ ಪ್ರಾಬ್ಲಂ, ಅಜ್ಮಲ್ ಕಮಾಲ್, ಎಚ್.ಐ.ವಿ. ಪಾಸಿಟೀವ್ ಲೈಫ್, ಆರೆಂಜ್ ಬಾಯ್ ಎಂಗೇಜ್‌ಮೆಂಟ್, ರಿಲೀಫ್, ರಿಲ್ಯಾಕ್ಸ್, ಎಫ್.ಡಿ.ಐ ಚಿಲ್ಲರೆ ಪ್ರಾಬ್ಲಂ, ಯಮನ ಏಜೆಂಟ್, ಕಿಲ್ಲರ್ ಬಿಎಂಟಿಸಿ, ಸಿಲ್ಕ್ ಡರ್ಟಿ ಲೈಫ್, ಸೂಪರ್ ಫಾಸ್ಟ್, ಫಾರೆಸ್ಟ್ ಮಿನಿಸ್ಟರ್, ಕೋಕೋನಟ್ ಬಾತ್, ಫುಡ್, ಇತ್ಯಾದಿ ಪದ ಪ್ರಯೋಗಗಳು ಹೇರಳವಾಗಿವೆ.

ಒಟ್ಟಾರೆ ಇಂದಿನ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಅವಸ್ಥೆ ವರ್ಣಿಸಲಸದಳವಾಗಿದ್ದು, ಕನ್ನಡ ಭಾಷೆಯ ಪದಪುಂಜದ ಜ್ಞಾನದ ಕೊರತೆ ಇದ್ದವರಿಂದ ಮಾತ್ರ ಇಂತಹ ಪದ ಪ್ರಯೋಗಗಳು ಸಾಧ್ಯ. ಹೀಗಾಗಿ ಪ್ರತಿಯೊಂದು ಮಾಧ್ಯಮವೂ ತನ್ನ ಕೆಲಸಗಾರರಿಗೆ ಕನ್ನಡ ಭಾಷೆಯ ಅರಿವು ಮೂಡಿಸುವುದು ಅತ್ಯಗತ್ಯ. ಕನ್ನಡ ಚೆನ್ನಾಗಿ ಬಲ್ಲವರನ್ನು ನೇಮಕ ಮಾಡಿಕೊಳ್ಳುವುದು ಉತ್ತಮ ಅಥವಾ ತಮ್ಮದೇ ಕೆಲಸಗಾರರಿಗೆ ಕನ್ನಡ ಸುದ್ದಿ ವಾಚನದ ಬಗ್ಗೆ ತರಬೇತಿ ನೀಡುವುದು ಉತ್ತಮ. ತಮ್ಮ ವಾರ್ತಾ ವಾಚಕರಿಗೆ ಅಲ್ಪಪ್ರಾಣ, ಮಹಾಪ್ರಾಣಗಳ ದೋಷವಿಲ್ಲದೆ, ಅಲ್ಪವಿರಾಮ, ಪೂರ್ಣ ವಿರಾಮವಿದ್ದಾಗ ಹೇಗೆ ವಾರ್ತಾವಾಚನ ಮಾಡಬೇಕು ಎಂಬ ಬಗ್ಗೆ ಹಾಗೂ ನೇರವಾಗಿ ಕರೆ ಮಾಡಿ ಮಾತನಾಡುವ ಸಂದರ್ಭದಲ್ಲಿ ಸುಂದರ ಕನ್ನಡವನ್ನು ಬಳಸುವ ಬಗ್ಗೆ ತರಬೇತಿ ಕೊಡಿಸುವುದೂ ಅಗತ್ಯವಾಗಿದೆ. ಹೀಗೆ ಮಾಡಿದರೆ ಕನ್ನಡ ಉಳಿಯುತ್ತದೆ. ವಿದ್ಯುನ್ಮಾನ ಮಾಧ್ಯಮಗಳು ಇಂಥ ಒಂದು ಉತ್ತಮ ಪ್ರಯತ್ನ ಮಾಡಿದರೆ ಜನರೂ ಸುಂದರ ಕನ್ನಡ ಬಳಸುತ್ತಾರೆ, ಕನ್ನಡ ಉಳಿಯುತ್ತದೆ.

ಪದ ದಾರಿದ್ರ್ಯದಿಂದ ಹೊರತಾಗಿರದ ಕನ್ನಡ ಪತ್ರಿಕೆಗಳು..!

ಕೇವಲ ವಾಹಿನಿಗಳಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ದಿನ ಪತ್ರಿಕೆಗಳು ಪದ ದಾರಿದ್ರ್ಯದಿಂದ ಬಳಲುತ್ತಿವೆಯೇ ಎಂಬಂತಹ ಅನುಮಾನ ಮೂಡುತ್ತಿವೆ. ಏಕೆಂದರೆ ಬದಲಾದ ಪರಿಸ್ಥಿತಿಗನುಗುಣವಾಗಿ ಪತ್ರಿಕೆಗಳೂ ತಮ್ಮ ಸುದ್ದಿ ಬರವಣಿಗೆಯ ಶೈಲಿಯನ್ನು ಬದಲಿಸಿಕೊಳ್ಳುತ್ತಾ ಬಂದಿದ್ದು, ಪ್ರಮುಖವಾಗಿ ಶೀರ್ಷಿಕೆ ಬರವಣಿಗೆಯಲ್ಲಿ ಪತ್ರಿಕೆಗಳು ಈ ಸಮಸ್ಯೆ ಎದುರಿಸುತ್ತಿರಬಹುದೇನೋ. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಪ್ರಮುಖವಾಗಿ ಓದುಗನನ್ನು ಸೆಳೆಯುವುದು ಸುದ್ದಿಯ ಶೀರ್ಷಿಕೆ. ಹೀಗಾಗಿ ಪ್ರತಿಯೊಂದು ಸುದ್ದಿಗೂ ಆಕರ್ಷಕ ಮತ್ತು ಸೂಕ್ತ ಶೀರ್ಷಿಕೆ ನೀಡಲು ಉಪಸಂಪಾದಕ ಶ್ರಮಿಸುತ್ತಾನೆ. ಆದರೆ ಇಲ್ಲಿ ಓದುಗರನ್ನು ಸೆಳೆಯುವ ನಿಟ್ಟಿನಲ್ಲಿ ಕನ್ನಡತನವನ್ನು ಮರೆಯಲಾಗುತ್ತಿದೆ. ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಅಕ್ಷರ ಹೊಂದಾಣಿಕೆಯ ಸಮಸ್ಯೆ ಸಾಮಾನ್ಯವೇ ಆದರೂ, ಇದಕ್ಕಾಗಿ ಆಂಗ್ಲ ಪದಗಳ ಬಳಕೆಯೇ ಪರಿಹಾರ ಎಂಬಂತೆ ಪತ್ರಿಕೆಗಳು ಶೀರ್ಷಿಕೆಗಳನ್ನು ನೀಡುತ್ತಿವೆ. ಓದುಗನನ್ನು ಸೆಳೆಯುವುದಕ್ಕಾಗಿಯೋ, ಕ್ಲೀಷೆಗಾಗಿಯೋ ಕನ್ನಡ ಪತ್ರಿಕೆಗಳಲ್ಲಿ ಆಂಗ್ಲ ಪದಗಳ ಬಳಕೆ ಸಾಮಾನ್ಯವಾಗಿವೆ.

ತಾಮುಂದು ನಾ ಮುಂದು ಎನ್ನುತ್ತಿರುವ ಅಂತರ್ಜಾಲ ಸುದ್ದಿ ತಾಣಗಳು..
ಇನ್ನು ಅಂತರ್ಜಾಲ ಸುದ್ದಿ ತಾಣಗಳ ವಿಚಾರಕ್ಕೆ ಬರುವುದಾದರೆ ಸುದ್ದಿವಾಹಿನಿ ಮತ್ತು ಪತ್ರಿಕೆಗಳಂತೆಯೇ ಅಂತರ್ಜಾಲ ಸುದ್ದಿ ತಾಣಗಳಲ್ಲಿಯೂ ಆಂಗ್ಲ ಪದಗಳ ಬಳಕೆ ಯಥೇಚ್ಛವಾಗಿಯೇ ಇದೆ ಎಂದು ಹೇಳಬಹುದು. ರೋಚಕತೆಗಾಗಿಯೇ ಈ ಜಾಲ ತಾಣಗಳು ಆಂಗ್ಲ ಪದಗಳ ಬಳಕೆ ಮಾಡುತ್ತವೆ. ಪ್ರಮುಖವಾಗಿ ತತ್ ಕ್ಷಣದ ಸುದ್ದಿಗೆ-ಬ್ರೇಕಿಂಗ್ ನ್ಯೂಸ್, ಫ್ಲಾಷ್ ನ್ಯೂಸ್, ಚಿತ್ರಗಳಿಗೆ ಇಮೇಜ್-ಸ್ಟಿಲ್ಸ್ ಸೇರಿದಂತೆ ಬಹುತೇಕ ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳಂತೆಯೇ ಅಂತರ್ಜಾಲ ಸುದ್ದಿತಾಣಗಳೂ ಕೂಡ ಆಂಗ್ಲ ಪದಗಳನ್ನು ಬಳಕೆ ಮಾಡುತ್ತಿವೆ.

ಜನರ ಮತ್ತು ಭಾಷೆಯ ನಡುವೆ ಸಂಪರ್ಕ ಸೇತುವಾಗಿರುವ ಮಾಧ್ಯಮವೇ ಭಾಷಾ ಬಳಕೆಯಲ್ಲಿ ಈ ರೀತಿ ತಪ್ಪು ಮಾಡುತ್ತಿದ್ದರೆ ಮುಂದಿನ ಪೀಳಿಗೆಗೆ ಕನ್ನಡದ ಮೂಲ ಪದಗಳ ಪರಿಚಯವೇ ಇಲ್ಲದಂತಾಗುತ್ತದೆ. ಹಾಗಾಗದಿರಲಿ...

- ಬ್ರಹ್ಮೀ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com