ಶ್ರೀ ಮುತಯ್ಯ ಭಾಗವತರು

ಕರ್ನಾಟಕ ಸಂಗೀತದ ಸುವರ್ಣ ಯುಗವೆಂದು ಕರೆಯಿಸಿಕೊಳ್ಳುವ, ಸಂಗೀತ ಪಿತಾಮಹರುಗಳಾದ ಮತ್ತು ತ್ರಿಮೂರ್ತಿಗಳೆಂದೇ...
ಶ್ರೀ ಮುತಯ್ಯ ಭಾಗವತರು
ಶ್ರೀ ಮುತಯ್ಯ ಭಾಗವತರು
ಕರ್ನಾಟಕ ಸಂಗೀತದ ಸುವರ್ಣ ಯುಗವೆಂದು ಕರೆಯಿಸಿಕೊಳ್ಳುವ, ಸಂಗೀತ ಪಿತಾಮಹರುಗಳಾದ ಮತ್ತು ತ್ರಿಮೂರ್ತಿಗಳೆಂದೇ ಹೆಸರಾದ ಸಂತ ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ನಂತರದ ಕಾಲಘಟ್ಟದಲ್ಲಿ ಬಹಳ ಪ್ರಸಿದ್ಧರಾದವರೆಂದರೆ ಶ್ರೀ ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು.  ಇವರು ೧೫ನೆಯ ನವೆಂಬರ್ ೧೮೭೭ರಲ್ಲಿ, ಸಿರಿವಿಲ್ಲಿ ಪುತ್ತೂರ್ ಹತ್ತಿರವಿರುವ ಪುನಲ್ವೇಲಿ, ತಮಿಳುನಾಡಿನಲ್ಲಿ, ಲಿಂಗಂ ಐಯ್ಯರ್ ಮತ್ತು ಆನಂದಂ ಎಂಬ ದಂಪತಿಗೆ ಜನಿಸಿದರು.  ಆರನೆಯ ವಯಸ್ಸಿಗೇ ತಂದೆಯನ್ನು ಕಳೆದುಕೊಂಡು, ತಮ್ಮ ಸೋದರಮಾವ ಮಹಾಮಹೋಪಾಧ್ಯಾಯ ಎಂ ಲಕ್ಷ್ಮಣಸೂರಿ ಅವರ ಆಶ್ರಯದಲ್ಲಿ ಹರಿಕೇಶನಲ್ಲೂರಿನಲ್ಲಿ ಬೆಳೆದರು.  ಸೋದರಮಾವ ಅವರನ್ನು ವೇದಪಾಠ ಅಭ್ಯಸಿಸಲು ಸೇರಿಸಿದರೆ, ಮುತ್ತಯ್ಯನವರಿಗೆ ಸಂಗೀತದತ್ತ ಒಲವು ತುಂಬಿ ಹರಿಯುತ್ತಿತ್ತು.  ಆಗಿನ ಕಾಲದಲ್ಲಿ ಪ್ರಸಿದ್ಧರಾಗಿದ್ದ ಮಹಾವೈದ್ಯನಾಥ ಅಯ್ಯರ್ ಮತ್ತು ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಅವರಿಂದ ಪ್ರಭಾವಿತರಾಗಿ, ವೇದಾಧ್ಯಯನ ಬಿಟ್ಟು ತಿರುವಯ್ಯಾರ್ ನಲ್ಲಿ ಕರ್ನಾಟಕ ಸಂಗೀತ ವಿದ್ವಾನ್ ಸಾಂಬಶಿವ ಐಯ್ಯರವರಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿದರು.
೧೮೯೩ರಲ್ಲಿ ಹರಿಕೇಶನಲ್ಲೂರಿಗೆ ವಾಪಸ್ಸು ಬಂದು ಸಂಪೂರ್ಣವಾಗಿ ತಮ್ಮನ್ನು ಸಂಗೀತದಲ್ಲಿಯೇ ತೊಡಗಿಸಿಕೊಂಡರು.  ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದರು.  ಇದರ ಫಲವಾಗಿ ಅವರಿಗೆ ಸುಶ್ರಾವ್ಯ ಶಾರೀರ, ಲಯ ಶ್ರುತಿ ಶುದ್ಧತೆಗಳು ಕರಗತವಾದವು.  ಅತೀ ವೇಗದಲ್ಲಿ ನೋಟುಸ್ವರಗಳನ್ನು ಹಾಡುವುದನ್ನು ಕೂಡ ಅಭ್ಯಸಿಸಿದರು.  ೧೮೯೯ರಲ್ಲಿ ಶಿವಕಾಮಿ ಅಮ್ಮಾಳ್ ಅವರನ್ನು ವಿವಾಹವಾದರು.
ಒಳ್ಳೆಯ ಕಟ್ಟುಮಸ್ತಾದ ಶರೀರ, ಸುಶ್ರಾವ್ಯ ಶಾರೀರ ಎರಡನ್ನೂ ಹೊಂದಿದ್ದ ಮುತ್ತಯ್ಯನವರು ಬಹು ಶೀಘ್ರದಲ್ಲಿಯೇ ಕರ್ನಾಟಕ ಸಂಗೀತದಲ್ಲಿ ಉತ್ತಮ ಕಲಾವಿದರೆಂದು ಪ್ರಸಿದ್ಧರಾದರು.  ೧೯೯೭ರಲ್ಲಿ ತಿರುವಾಂಕೂರಿನ ಮಹಾರಾಜ ಶ್ರೀ ಮೂಲಮ್ ತಿರುನಾಲ್ ಅವರ ಸಮ್ಮುಖದಲ್ಲಿ ಕಛೇರಿ ನಡೆಸುವ ಅವಕಾಶ ಪಡೆದುಕೊಂಡರು.  ಇವರ ಪ್ರತಿಭೆಗೆ ಪುರಸ್ಕಾರವಾಗಿ ಮಹಾರಾಜರು ಇವರನ್ನು ಸಂಸ್ಥಾನ ವಿದ್ವಾನರನ್ನಾಗಿ ನೇಮಿಸಿದರು.
ಸುಮಾರು ೧೯೦೪ನೆಯ ಇಸವಿಯ ಹೊತ್ತಿಗೆ ಮುತ್ತಯ್ಯನವರು ಹರಿಕಥಾ ಕಾಲಕ್ಷೇಪಗಳನ್ನು ನಡೆಸಿಕೊಡುತ್ತಾ ಭಾಗವತರೆನಿಸಿದರು.  ಅವರ ಮೊಟ್ಟ ಮೊದಲ ಕಥಾಕ್ಷೇಪ "ವಳ್ಳಿ ಪರಿಣಯಮ್" ಆಗಿತ್ತು.  ಈ ತರಹದ ಕಥಾಕಾಲಕ್ಷೇಪಗಳು ಪ್ರಚಲಿತದಲ್ಲಿಲ್ಲದ ಕಾರಣ, ಮುತ್ತಯ್ಯನವರು ತಮಿಳು ಭಾಷೆಯಲ್ಲಿ ನಿರೂಪಣೆಗಳನ್ನು ರಚಿಸಿದರು.  ಅವರು ಪುರಾಣಗಳಲ್ಲಿಯೂ, ಸಂಸ್ಕೃತ ಭಾಷೆಯಲ್ಲಿಯೂ ಪಂಡಿತರಾಗಿದ್ದರು.
೧೯೨೭ರ ದಸರಾ ಹಬ್ಬದಲ್ಲಿ ಮೈಸೂರು ಸಂಸ್ಥಾನದ ಆಗಿನ ಮಹಾರಾಜರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಸಮ್ಮುಖದಲ್ಲಿ ಕಛೇರಿ ನಡೆಸಿದರು.  ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ "ತಪ್ಪುಲನ್ನಿ ತಾಳುಕೊಮ್ಮ" ಮತ್ತು "ಮಾನಮು ಕಾವಲೇನು ತಲ್ಲಿ" ಎಂಬ ಕೃತಿಗಳ ಮೂಲಕ ತಮ್ಮ ಮನಸ್ಸಿನ ವ್ಯಥೆ ದುಗುಡಗಳನ್ನು ನಿವೇದಿಸಿಕೊಂಡರು.  ಮರೆಯಲ್ಲಿ ನಿಂತು ಆಲಿಸಿದ ಮಹಾರಾಜರು ಮತ್ತೊಮ್ಮೆ ಇವರ ಕಛೇರಿಯನ್ನು ಇಡಿಸಿದರು.  ಹೀಗೆ ಮತ್ತೆ ಮತ್ತೆ ಹಲವು ಬಾರಿ ಅವಕಾಶಗಳನ್ನು ಒದಗಿಸಿಕೊಟ್ಟು ಮುತ್ತಯ್ಯ ಭಾಗವತರ ಗಾಯನವನ್ನು ಆಲಿಸಿ, ಮೆಚ್ಚಿ, ಅವರನ್ನು ಸಂಸ್ಥಾನ ವಿದ್ವಾನರನ್ನಾಗಿ ನೇಮಿಸಿ, "ಗಾಯಕ ಶಿಖಾಮಣಿ" ಎಂಬ ಬಿರುದನ್ನು ಕೊಟ್ಟು, ಚಿನ್ನದ ತೋಡು, ೧೦೦೦೦ ರೂಪಾಯಿ ನಗದನ್ನು ಬಹುಮಾನವಾಗಿ ಇತ್ತು ಗೌರವಿಸಿದರು.  ವಾಗ್ಗೇಯಕಾರರಾಗಿ ಮುತ್ತಯ್ಯನವರು ತೆಲುಗು, ತಮಿಳು, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವರ್ಣ, ದರುವರ್ಣ, ಕೃತಿ, ತಿಲ್ಲಾನಗಳನ್ನು ರಚಿಸಿದ್ದಾರೆ.  ಕನ್ನಡದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರನ್ನು ಕುರಿತು ಲಲಿತಾ ಅಷ್ಟೋತ್ತರದಲ್ಲಿ ಬರುವ ದೇವಿಯ ವಿಶೇಷ ನಾಮಗಳನ್ನು ಸೇರಿಸಿ, ೧೧೪ ಕೃತಿಗಳನ್ನು "ಚಾಮುಂಡಾಂಬ ಅಷ್ಟೋತ್ತರ ಕೃತಿಗಳು" ಎಂಬ ಗುಚ್ಛವಾಗಿ ರಚಿಸಿರುವರು.  ಉದಾಹರಣೆಯಾಗಿ ಕೆಲವು ಮುಖ್ಯವಾದ ನಾಮಗಳನ್ನು ಒಳಗೊಂಡ ಕೃತಿಗಳೆಂದರೆ 
೧)  ಶ್ರೀ ಲಲಿತಾ ಸಹಸ್ರನಾಮದ ಮೊದಲನೆಯ ಚರಣ ಶ್ರೀಮಾತಾ ಶ್ರೀಮಹಾರಾಜ್ಞೀ ಶ್ರೀಮತ್ಸಿಂಹಾಸನೇಶ್ವರೀ - ಮುತ್ತಯ್ಯನವರ ಶ್ರೀಮತ್ಸಿಂಹಾಸನೇಶ್ವರಿ ಶ್ರೀ ಶಂಕರಿ ಕಾಮೇಶ್ವರಿ ಎಂದೇ ಪ್ರಾರಂಭವಾಗುವ ಶುದ್ಧಸಾವೇರಿ ರಾಗದ ಕೃತಿ 
೨)   ೬೬ನೆಯ ಚರಣ ಸಹಸ್ರಶೀರ್ಷವದನಾ ಸಹಸ್ರಾಕ್ಷೀ ಸಹಸ್ರಪಾತ್ - ಲಲಿತ ರಾಗದಲ್ಲಿ ಸಹಸ್ರಶೀರ್ಷ ಸಂಯುಕ್ತೆ ಎಂದು ಪ್ರಾರಂಭವಾಗುವ ಕ್ರುತಿ
೩)  ೧೨ನೆಯ ಚರಣ ಕಾಮೇಶಬದ್ಧ ಮಾಂಗಲ್ಯಸೂತ್ರ ಶೋಭಿತ ಕಂಧರಾ - ಅಪರೂಪದ ರಾಗವಾದ ಬುಧಮನೋಹರಿಯಲ್ಲಿ ಕಾಮೇಶಬದ್ಧ ಮಾಂಗಲೈ ಎಂದು ಪ್ರಾರಂಭವಾಗುವ ಕೃತಿ
ಶ್ರೀ ಲಲಿತಾ ಅಷ್ಟೋತ್ತರದ ೩೩ನೆಯ ಸಾಲಿನಲ್ಲಿ ಬರುವ ದೇವಿಯ ಸಚಾಮರ ರಮಾವಾಣೀವೀಜಿತಾಯೈ ಎಂಬ ನಾಮದಿಂದಲೇ ಪ್ರಾರಂಭವಾಗುವ ಹಂಸಾನಂದಿ ರಾಗದ ಸಚಾಮರ ರಮಾವಾಣಿ ಸೌಮ್ಯ ದರ್ಶನ ಸೇವಿತೇ ಎಂಬ ಕೃತಿ...  ಹೀಗೆ ಸಾಮ್ಯತೆಯನ್ನು ನೋಡುತ್ತಾ ಹೋದರೆ, ಮುತ್ತಯ್ಯನವರ ಕೃತಿಗಳನ್ನು ಹಾಡುವುದು ಶ್ರೀಮಾತೆಯ, ಪರಮೇಶ್ವರಿಯ ಅಷ್ಟೋತ್ತರ ಹಾಗೂ ಸಹಸ್ರನಾಮಗಳನ್ನು ಪಠಿಸಿದಂತೆಯೇ ಆಗುತ್ತದೆ.  ಈ ಗುಚ್ಛದಲ್ಲಿ ಮುತ್ತಯ್ಯನವರು ಕೆಲವು ಅಪರೂಪದ  "ವಿಜಯನಾಗರಿ, ನಿರೋಷ್ಠ, ಬುಧಮನೋಹರಿ, ಗುಹರಂಜನಿ ಮತ್ತು ಸಮನಪ್ರಿಯ"  ಎಂಬ  ರಾಗಗಳಲ್ಲಿ ರಚಿಸಿರುವರು.  ಇವುಗಳು ಮುತ್ತಯ್ಯನವರ ಆಳವಾದ ಸಂಗೀತ ಅಧ್ಯಯನ ಮತ್ತು ಜ್ಞಾನವನ್ನು ಸೂಚಿಸುವುವು.
ಮುತ್ತಯ್ಯನವರ ಈ ಅತ್ಯಂತ ಶ್ರೇಷ್ಠವಾದ ಸೇವೆಗೆ ಮಹಾರಾಜರು, ಚಾಮುಂಡೇಶ್ವರಿಯ ಪದಕ ಇರುವ ಮುತ್ತಿನ ಕಂಠೀಹಾರಗಳನ್ನು ಇತ್ತು ಸನ್ಮಾನಿಸಿದರು.    
ಅಷ್ಟೋತ್ತರ ಕೃತಿಗಳ ಗುಚ್ಛದಲ್ಲಿ ಬರುವ ಮೋಹನ ಕಲ್ಯಾಣಿ ರಾಗದಲ್ಲಿ ರಚಿತವಾಗಿರುವ ಭುವನೇಶ್ವರಿಯ ನೆನೆ ಮಾನಸವೇ ಭವಬಂಧಂಗಳ ಭೀತಿಯ ಬಿಡುವೆ ಎಂಬ ಕೃತಿ ನಮ್ಮ ಕನ್ನಡತಾಯಿ ಭುವನೇಶ್ವರಿಯನ್ನು ಆರಾಧಿಸುವ ಕೃತಿಯಾಗಿದೆ ಎನ್ನಬಹುದು.  ಕೃತಿಯ ಅನುಪಲ್ಲವಿಯಲ್ಲಿ ಮುತ್ತಯ್ಯ ಭಾಗವತರು ಭವ ಎನ್ನುವುದನ್ನು ಬಿಡಬೇಕು ಎಂಬ ಸಂದೇಶವನ್ನು ನೀಡುತ್ತಾ ಭವದಲಿ ಬರಿದೆ ನವೆಯದೆ ನೋಯದೆ ತವೆಸುವಿಲಾಸದೆ ತಣಿಯುವೆ ಸುಖಿಸುವೆ.. ಭುವನೇಶ್ವರಿಯ ನೆನೆ ಮಾನಸವೇ ಎಂದಿದ್ದಾರೆ.  ಇದೊಂದು ಅಪೂರ್ವ ಹಾಗೂ ವಿಶೇಷ ಕೃತಿಯಾಗಿದೆ.
ಮುತ್ತಯ್ಯ ಭಾಗವತರು "ಶಿವ ಅಷ್ಟೋತ್ತರ" ಕೃತಿಗಳ ಗುಚ್ಛವನ್ನೂ ರಚಿಸಿರುವರು.  ಹಾಗೂ ಅನೇಕ ಮಧ್ಯಮ, ವಿಳಂಬ ಕಾಲದ ಕೃತಿಗಳನ್ನೂ, ದರುವರ್ಣ, ಅಟ್ಟತಾಳ, ಪದವರ್ಣಗಳನ್ನೂ ರಚಿಸಿದ್ದಾರೆ.  ಶಿವ ಅಷ್ಟೋತ್ತರ ಕೃತಿಗಳನ್ನು ಕೇಳಿ ಆನಂದದಿಂದ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ಮುತ್ತಯ್ಯನವರಿಗೆ ಪಚ್ಚೆಲಿಂಗವನ್ನು ನೀಡಿ ಸನ್ಮಾನಿಸಿರುವರು.
ಮುತ್ತಯ್ಯ ಭಾಗವತರು ೧೯೩೬ ರಿಂದ ೧೯೩೮ರವರೆಗೆ ತಿರುವಾಂಕೂರು ಸಂಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದುಕೊಂಡು ಶ್ರೀ ಸ್ವಾತಿ ತಿರುನಾಳ್ ಮಹಾರಾಜರ ರಚನೆಗಳಿಗೆ ಸ್ವರ ಸಂಯೋಜನೆಯನ್ನು ಮಾಡಿ, ಆ ಕೃತಿಗಳ ಪುನರುದ್ಧಾರ ಕಾರ್ಯವನ್ನು ಮಾಡಿದರು.  ಮಹಾರಾಜರ ರಚನೆಗಳ ಕುರಿತು ಸಂಶೋಧನೆ ನಡೆಸಿ ತಿರುವಾಂಕೂರ್ ಮಹಾರಾಜರಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು.  ಇನ್ನೂ ಅನೇಕ ಬಿರುದುಗಳನ್ನೂ, ಗೌರವಗಳನ್ನೂ ಪಡೆದುಕೊಂಡ ಮುತ್ತಯ್ಯನವರು ಸುಮಾರು ೪೦೦ ಕೃತಿಗಳನ್ನು "ಹರಿಕೇಶ"  ಎಂಬ ಅಂಕಿತನಾಮದಲ್ಲಿ ರಚಿಸಿರುವರು.  ೪೮೭ ಶ್ಲೋಕಗಳೀರುವ "ತ್ಯಾಗರಾಜ ವಿಜಯ" ಎಂಬ ಬೃಹತ್ ಕಾವ್ಯವನ್ನೂ ರಚಿಸಿರುವರು.  
ಶ್ರೀ ಮುತ್ತಯ್ಯ ಭಾಗವತರ ವ್ಯಕ್ತಿತ್ವವು ಸಂಪೂರ್ಣವಾಗಿತ್ತು ಎನ್ನಬಹುದಾಗಿದೆ.  ಅವರು ವಾಗ್ಗೇಯಕಾರರು, ಗಾಯಕರು, ಕೀರ್ತನಕಾರರು, ಶಾಸ್ತ್ರಜ್ಞರು, ಶಿಕ್ಷಕರು, ಸಂಗೀತಜ್ಞರು, ಅಧಿಕಾರಿಗಳು ಮತ್ತು ಲೇಖಕರೂ ಆಗಿ ಸಂಗೀತಕ್ಕೆ ತಮ್ಮ ಸರ್ವತೋಮುಖ ಸೇವೆಯನ್ನು ಸಲ್ಲಿಸಿದವರು.  ಅವರ ಜನ್ಮದಿನ ನಮ್ಮ ಕರ್ನಾಟಕ ರಾಜ್ಯೋತ್ಸವದ ನವೆಂಬರ್ ತಿಂಗಳ ೧೫ನೆಯ ತಾರೀಖು ಆಗಿರುವುದು ಕೂಡ ವಿಶೇಷವೆಂದೇ ಅನಿಸುತ್ತದೆ.   ಅಪರೂಪದ ವಿಶೇಷ ವ್ಯಕ್ತಿತ್ವ ಹಾಗೂ ಪಾಂಡಿತ್ಯವನ್ನು ಹೊಂದಿದ್ದ ಶ್ರೀ ಮುತ್ತಯ್ಯ ಭಾಗವತರು ೧೯೪೫ರ ಜೂನ್ ೩೦ರಂದು ಸ್ವರ್ಗಸ್ತರಾದರು.  
-ಶ್ಯಾಮಲಾ ಜನಾರ್ಧನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com