ಆ್ಯಪ್ ಲೋಕದಲ್ಲಿ ಕನ್ನಡ

ಇಂದು ಶೇಕಡಾ ೬೫-೭೦% ಮಂದಿ ಸಾಮಾಜಿಕ ಜಾಲತಾಣಗಳನ್ನು ಮೊಬೈಲಿನಿಂದಲೇ ಬಳಸುತ್ತಾರೆ. ಶೇಕಡಾ ೪೦-೫೦% ಮಂದಿ 'ವೆಬ್ ಬ್ರೌಸಿಂಗ್'ನ್ನು...
ಕನ್ನಡ ಆ್ಯಪ್
ಕನ್ನಡ ಆ್ಯಪ್
ಒಂದು ದಿನ ಬಸ್ಸಿನಲ್ಲಿ ಹೋಗುತ್ತಿದ್ದಾಗ ಬೇಜಾರಾಗಿ ಅತ್ತಿತ್ತ ನೋಡಿದಾಗ ಕಂಡಿದ್ದು ಇನ್ನೊಬ್ಬ ಸಹಪ್ರಯಾಣಿಕ ಕಂಪ್ಯೂಟರ ಇಂಟರ್ನೆಟ್ ನಲ್ಲಿ ಕನ್ನಡದ ಜೋಕ್ಸ್  ಓದುತ್ತಿದ್ದುದು, ಇನ್ನೊಬ್ಬ ಕನ್ನಡ ಪತ್ರಿಕೆಯನ್ನು ಓದುತ್ತಿರುವುದು. ನಮಗೆ ನಮ್ಮ ಭಾಷೆ ತಾಯಿ ಇದ್ದ ಹಾಗೆ, ಅದರ ಮಗ್ಗಲಿನ ಹಿತವೇ ಬೇರೆ. ಇಂಗ್ಲಿಷ್ ಎನ್ನಲಿ, ಹಿಂದಿ ಎನ್ನಲಿ ...ಕೊನೆಗೆ ಹೃದಯಕ್ಕೆ ಸ್ಪಂದಿಸುವುದು ಕನ್ನಡವೇ. ಇದು ನನ್ನ ಅನುಭವ. ಸಹಪ್ರಯಾಣಿಕನ ನೋಡಿದ ಆ ಕ್ಷಣ ನನಗನಿಸಿದ್ದು , ಕನ್ನಡದ ಒಂದು 'ಜೋಕ್ಸ್ app' ಇರಬಾರದೇ ಕನ್ನಡ ಪತ್ರಿಕೆಗಳ ಆ್ಯಪ್  ಇರಬಾರದೇ ಅಂತ. ಇಂದು ಜನರ ಮನಸ್ಸು ಒಂದು ನಿಮಿಷವೂ ಖಾಲಿ ಇರಲು ಬಯಸುವುದಿಲ್ಲ, ಏನಾದರೂ ಮಾಡುತ್ತಿರುತ್ತದೆ, ನೋಡುತ್ತಿರುತ್ತದೆ, ಕೇಳುತ್ತಿರುತ್ತದೆ...ಅದಕ್ಕೆ ಇಂದಿನ ದಿನಗಳಲ್ಲಿ app ಅಷ್ಟು ಜನಪ್ರಿಯತೆ ಪಡೆದಿದ್ದು. ಮೊದಲು ನಾನು ಕಾಗದದಲ್ಲಿ ಬರೆದು ನಂತರ ಬರಹ ಸಾಪ್ಟವೇರ್ ಬಳಸಿ ಅದನ್ನು ಪೋಸ್ಟ್  ಮಾಡುತ್ತಿದ್ದೆ. ಈ ಸಂಪೂರ್ಣ ಲೇಖನ ಬರೆದಿದ್ದು ಮೊಬೈಲ್ ನಲ್ಲಿ, ಜಸ್ಟ್  ಕನ್ನಡ ಎಂಬ ಆ್ಯಪ್  ಬಳಸಿಕೊಂಡು. ಮುಂದೆ ಕನ್ನಡ ಜನಮನದಲ್ಲಿ ಉಳಿಯಬೇಕೆಂದರೆ ಕನ್ನಡ apps ಹೆಚ್ಚು ಹೆಚ್ಚಾಗಿ ಬರಬೇಕು. ಉತ್ಕೃಷ್ಟವಾಗಿ ಇರಬೇಕು.
ಇಂದು ಶೇಕಡಾ ೬೫-೭೦% ಮಂದಿ ಸಾಮಾಜಿಕ ಜಾಲತಾಣಗಳನ್ನು  ಮೊಬೈಲಿನಿಂದಲೇ ಬಳಸುತ್ತಾರೆ. ಶೇಕಡಾ ೪೦-೫೦% ಮಂದಿ 'ವೆಬ್ ಬ್ರೌಸಿಂಗ್'ನ್ನು ಮೊಬೈಲಿನಿಂದಲೇ ಮಾಡುತ್ತಾರೆ. ಟ್ಯಾಬ್ಲೆಟ್ ಗಳು ಬಂದಾಗಿನಿಂದ ಶೇಕಡಾ ೬೫% ಕಂಪ್ಯೂಟರ್ ಡಬ್ಬಗಳ ಮಾರಾಟ ಕಡಿಮೆ ಆಗಿದೆ. ೨೦೨೫ ರೊಳಗೆ ಈ ಮೊಬೈಲ್ ಇಂಟರ್ ನೆಟ್ ಎಷ್ಟು ಬೆಳೆಯಲಿದೆ ಅಂದರೆ ಅದರಿಂದ ವರ್ಷದ ವಹಿವಾಟು ಸುಮಾರು ೧೦-೧೨ ಟ್ರಿಲಿಯನ್ ಡಾಲರ್ ಗಳಷ್ಟು ಆಗುವ ಸಂಭವವಿದೆ ಎಂದು ಒಂದು ವಾಣಿಜ್ಯ ಸಂಸ್ಥೆಯ ವರದಿ ಹೇಳುತ್ತದೆ. ಈ ಮೇಲಿನ ಅಂಕಿಅಂಶಗಳು ಏನು ಹೇಳುತ್ತವೆ?  ಮುಂದಿನ ದಿನಗಳಲ್ಲಿ ಜನ ಮೊಬೈಲನ್ನು ಏಳಲು, ಓದಲು, ಬರೆಯಲು, ಕೇಳಲು, ನೋಡಲು, ದುಡಿಯಲು, ಕಾಲ ಕಳೆಯಲು ಎಲ್ಲದಕ್ಕೂ ಬಳಸುತ್ತಾರೆ.  ಹೀಗಿರುವಾಗ ಮೊಬೈಲ್ ಒಳಗೆ ಕನ್ನಡವನ್ನು ತುಂಬುವ ಅವಶ್ಯಕತೆ ತುಂಬಾ ಇದೆ.
ಈಗಾಗಲೇ ಹಲವಾರು ಕನ್ನಡ apps ಗಳು ಮಾರುಕಟ್ಟೆಯಲ್ಲಿವೆ. ಎಂಡ್ರೋಯ್ಡ ಆಗಲಿ, ಆ್ಯಪಲ್  iOS ಆಗಲಿ...ಅಲ್ಲಿ ಕನ್ನಡದ apps ಗಳು ಲಭ್ಯವಿದೆ, ಆದರೆ 'ಸಾಕಷ್ಟು' apps ಗಳು ಲಭ್ಯವಿಲ್ಲ. ಸಾಕಷ್ಟು ಆ್ಯಪ್ ಗಳ ವಿಶೇಷ ಅಂದರೆ ಒಂದು ಸಲ ಇನ್ ಸ್ಟಾಲ್ ಆದಮೇಲೆ ಇಂಟರನೆಟ್ ಇಲ್ಲದೆಯೂ ಅದನ್ನು ಬಳಸಬಹುದು. ಕೆಲವೊಂದು ಆ್ಯಪ್  ಗಳ ಬಗ್ಗೆ ನೋಡೋಣ.
ಕನ್ನಡವನ್ನು ಮೊಬೈಲಿನಲ್ಲಿ ಟೈಪಿಸಲು  'ಜಸ್ಟ್  ಕನ್ನಡ'ದ ಹಾಗೆ ಹಲವಾರು  ಆ್ಯಪ್ಸ್ ಗಳಿವೆ. ಅದರಿಂದ ನಿಮ್ಮ ವಿಚಾಗಳನ್ನು ಕನ್ನಡದಲ್ಲಿ ಬರೆಯಬಹುದು. 'ಕನ್ನಡ ಕೀ ಬೋರ್ಡ್',  'ಕನ್ನಡ ಲಿಪಿ' ಹೀಗೆ ಬೇರೆ ಬೇರೆ ಹೆಸರಿನಲ್ಲಿಆ್ಯಪ್ಸ್  ಬೆಳವಣಿಗೆ ಆಗಿವೆ.
'ಕನ್ನಡ ಶಬ್ಧಕೋಶ' ಎಂಬ ಆ್ಯಪ್ಸ್ . ಆನ್ ಲೈನ್ ಶಬ್ಧಕೋಶದಂತೆ ಈ ಆ್ಯಪ್ ಕೂಡ. ಇದನ್ನು ಒಂದು ಸಲ ಇನಸ್ಟಾಲ್ ಮಾಡಿಕೊಂಡ ಮೇಲೆ ಇಂಟರ್ ನೆಟ್ ಇಲ್ಲದೆಯೂ ಬಳಸಬಹುದು. ಇದು ತುಂಬಾ ಸಹಾಯಕಾರಿಯಾಗಿದೆ. ಆ್ಯಪ್  ಜನಪ್ರಿಯ ಆಗಲು ಇದೂ ಒಂದು ಕಾರಣವಾಗಿದೆ.
ಕನ್ನಡ ಪತ್ರಿಕೆಗಳು ತಯಾರಿಸಿದ ಆ್ಯಪ್ಸ್ ಗಳು ಇವೆ. ಉದಾಹರಣೆಗೆ ವಿಜಯ ಕರ್ನಾಟಕ ಆ್ಯಪ್ಸ್, ಉದಯವಾಣಿ ಆ್ಯಪ್ಸ್. ಕನ್ನಡ ಸುದ್ದಿ ವಾಹಿನಿ ಗಳ ಆ್ಯಪ್ಸ್ ಕೂಡ ಸಿಗುತ್ತವೆ. ವಿದ್ಯಮಾನಗಳ ಬಗ್ಗೆ ಆಸಕ್ತಿ ಹೊಂದಿದವರಿಗೆ ಇದು ಬಹಳ ಅನುಕೂಲ ವಾದಂತಹ ಆ್ಯಪ್ ಗಳು.
'ಕನ್ನಡ ಕಲಿಯಿರಿ' ಎಂಬ ಒಂದು ಆ್ಯಪ್ಸ್ ಕನ್ನಡ ಕಲಿಯುವವರಿಗಾಗಿ ಅನುಕೂಲವಾಗಿದೆ. ಬೇರೆ ಬೇರೆ ಹೆಸರಿನಲ್ಲಿ ಇದೇ ಉದ್ದೇಶಕ್ಕೆ ಹಲವಾರು ಆ್ಯಪ್ಸ್ ಗಳು ಇವೆ. 'ಕನ್ನಡ ಬರುತ್ತೆ', 'ವಾರದಲ್ಲಿ ಕನ್ನಡ ಕಲಿಯಿರಿ' ಹೀಗೆ ಪಟ್ಟಿ ಬೆಳೆಯುತ್ತದೆ.
'ಕನ್ನಡದ ಒಗಟುಗಳು' ಎಂಬ ಆ್ಯಪ್ಸ್ ಒಗಟುಗಳನ್ನು ಬಿಡಿಸಲು ಆಸಕ್ತಿ ಇರುವವರಿಗೆ ಒಳ್ಳೆಯ ಆ್ಯಪ್ಸ್ ಆಗಿದೆ. ಆಟದ , ಅಥವಾ ಸ್ಪರ್ಧೆಯ ತರಹದಲ್ಲಿ ಇದನ್ನು ಡೆವಲಪ್ ಮಾಡಿದರೆ ಮತ್ತೂ ಜನಪ್ರಿಯತೆಯನ್ನು ಪಡೆದುಕೊಳ್ಳಬಹುದು.
'ಕನ್ನಡ ಹಾಡುಗಳು' ಎನ್ನುವ ಹಲವಾರು ಬೇರೆ ಬೇರೆಯ ಕಂಪನಿ ಅಥವಾ ಡೆವಲಪರ್ಸ ಗಳ ಆ್ಯಪ್ಸ್ ಗಳಿವೆ. ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಇಂತಹ ಆ್ಯಪ್ಸ್ ಗಳು ಬಹಳ ಮೆಚ್ಚುಗೆ ಪಡೆದಿವೆ. ಕನ್ನಡದ ಈ ಆ್ಯಪ್ಸ್ ಗಳು ಇನ್ನೂ ಆ ಹಂತಕ್ಕೆ ತಲುಪಿಲ್ಲ.
'ಕನ್ನಡದಲ್ಲಿ ಭಗವದ್ಗೀತೆ', 'ಕನ್ನಡ ಬೈಬಲ್', 'ಕನ್ನಡ ಕುರಾನ್' ಎನ್ನುವಂತಹ ಆ್ಯಪ್ಸ್ ಗಳೂ ಲಭ್ಯವಿದೆ. ಅದನ್ನು ಮೊಬೈಲ್ ನಲ್ಲಿ ಅಳವಡಿಸಿಕೊಂಡರೆ ಧರ್ಮಗ್ರಂಥ ಯಾವಾಗ ಬೇಕಾದರೂ ನಿಮ್ಮ ಕೈ ಬೆರಳ ತುದಿಯಲ್ಲೇ ಇರುತ್ತದೆ.
'ಕನ್ನಡ ವಚನಗಳು' ಎನ್ನುವ ಆ್ಯಪ್ಸ್ ತುಂಬ ಪ್ರಚಲಿತದಲ್ಲಿದೆ. ಕನ್ನಡದ ಸಾಕಷ್ಟು ವಚನ ಸಾಹಿತ್ಯವನ್ನು ಇಲ್ಲಿ ಸಂಗ್ರಹಿಸಲಾಗಿದೆ. ಸಾಹಿತ್ಯದಲ್ಲಿ ಇನ್ನೂ ಈ ಆ್ಯಪ್ಸ್ ಗಳು ಬೆಳವಣಿಗೆ ಆಗಬೇಕಿದೆ. ಕನ್ನಡ ಕವನಗಳು ಎಂಬ ಆ್ಯಪ್ಸ್ ಕೂಡ ಬಳಕೆಯಲ್ಲಿದೆ.
'ಕನ್ನಡ ಪಂಚಾಂಗ' ಎಂಬ ಹಲವಾರು ಮಾದರಿಯ ಆ್ಯಪ್ಸ್ ಗಳು ಗೂಗಲ್ ಪ್ಲೇ ಸ್ಟೋರ್ಸ್ ನಲ್ಲಿ ಅಥವಾ ಆ್ಯಪಲ್ ಇ-ಸ್ಟೋರ್ಸ್ ನಲ್ಲಿ ಕಾಣಬಹುದು. ಇದು ಕೂಡ ಬಹಳ ಜನಪ್ರಿಯ ಆ್ಯಪ್ . ನಾನು ನೋಡಿದ ಪ್ರಕಾರ ಸುಮಾರು ನಾಲ್ಕೈದು  ರೀತಿಯ ಆ್ಯಪ್ಸ್ ಗಳು ಆನ್ಲೈನ್ ಅಂಗಡಿಗಳಲ್ಲಿ ಫ್ರೀ ಆಗಿ ಸಿಗುತ್ತಿವೆ.
'ಕನ್ನಡ ಗಾದೆಗಳು' ಎಂಬ ಆ್ಯಪ್ಸ್ ಕೂಡ ಡೆವಲಪ್ ಆಗಿದೆ. ಜನರಲ್ಲಿ ಪ್ರಚಲಿತ ಗಾದೆ ಮಾತುಗಳು ಇರಬಹುದೇನೋ. ಇದನ್ನು ಮತ್ತೂ ಹೆಚ್ಚು ಅಧ್ಯಯನದ ಮಾಡಬೇಕಿದೆ.
'ಕನ್ನಡ ಜೋಕ್ಸ್ ಗಳು', 'ಕನ್ನಡ ಬಾಲ ಗೀತೆಗಳು', 'ಕನ್ನಡ ಕೊಟ್ಯಾಧಿಪತಿ' ಹೀಗೆ ಕೆಲವೇ ಕೆಲವು ಮನರಂಜನೆ ಆಧಾರಿತ ಆ್ಯಪ್ಸ್ ಕೂಡ ಡೆವಲಪ್ ಆಗಿದೆ. ಹೀಗೆ ಬರೆಯುತ್ತಾ ಹೋದರೆ ಸಾಕಷ್ಟು ದೊಡ್ಡದಾದ ಪಟ್ಟಿಯೇ ಆಗಬಹುದೇನೋ. ಮುಖ್ಯವಾದ ವಿಷಯವೆಂದರೆ ಸಾಹಿತ್ಯ, ಭಾಷೆ ಹಾಗೂ ಮನರಂಜನೆಯ ಆಧಾರಿತ ಆ್ಯಪ್ಸ್ ಗಳು ಆನ್ ಲೈನ್ ಸ್ಟೋರ್ಸ್ ಗಳಲ್ಲಿ ಲಭ್ಯವಿದೆ. ಆದರೆ ಅದು ಎಷ್ಟು ಜನರನ್ನು ಆಕರ್ಷಿಸುತ್ತವೆ ಎಂದು ನೋಡಬೇಕು. ಜನರಲ್ಲಿ ಕನ್ನಡ ಆ್ಯಪ್ ಗಳ ಬಗ್ಗೆ ಮೊದಲಿಗಿಂತ ಇಂದು ಆಸಕ್ತಿ ತುಂಬಾ ಹೆಚ್ಚಿದೆ, ಇದು ಡೆವಲಪರ್ಸಿಗೆ ಹಾಗೂ ಕನ್ನಡ ಅಭಿಮಾನಿಗಳಿಗೆ ಸಂತಸದ ವಿಷಯ.
ಇಂದು ಎಷ್ಟೇ ಆ್ಯಪ್ಸ್ ಇದ್ದರೂ ಕೂಡ, ಕನ್ನಡ ಆ್ಯಪ್ಸ್ ಗಳ ಕೊರತೆ ಇದೆ. ರೈಲ್ವೆ ರಿಸರ್ವೆಷನ್ ಬಗ್ಗೆ ತಿಳಿದುಕೊಳ್ಳಲು,  ಬ್ಯಾಂಕಿಂಗ್ ( ಕೆನರಾ, ಕರ್ನಾಟಕ,  ಕಾರ್ಪೋರೇಷನ್, ಸಿಂಡಿಕೇಟ್ ಬ್ಯಾಂಕುಗಳು ಕರ್ನಾಟಕದ್ದೇ ಆದರೂ ಒಂದೂ ಕನ್ನಡ ಆ್ಯಪ್ಸ್ ಗಳನ್ನು ತಂದಿರುವ ಬಗ್ಗೆ ನನಗೆ ಗೊತ್ತಿಲ್ಲ), ಚಿತ್ರ ಮಂದಿರಗಳ ಆ್ಯಪ್ಸ್, ಕನ್ನಡ ಸಾಹಿತ್ಯದ ಆ್ಯಪ್ಸ್ ಹೀಗೆ ಹಲವಾರು ಅವಕಾಶಗಳಿವೆ.  ಇನ್ನು ಜನಪ್ರಿಯತೆಯನ್ನು ಗಳಿಸಲು ಹಲವಾರು ಇಂಗ್ಲೀಷ್ ಮಾದರಿಯ ಆ್ಯಪ್ ಗಳನ್ನೂ ಕನ್ನಡದಲ್ಲಿ ಡೆವಲಪ್‌ ಮಾಡಬಹುದು. ಆರೋಗ್ಯಕ್ಕೆ ಸಂಬಂಧಪಟ್ಟ ಆ್ಯಪ್ಸ್ ಗಳನ್ನು ಕನ್ನಡದಲ್ಲಿ ಮಾಡಬಹುದು. ಕನ್ನಡ ಜಾನಪದ ಜಗತ್ತು ಎಷ್ಟು ಶ್ರೀಮಂತವಾಗಿದೆ, ಅದನ್ನೆಲ್ಲ ಸೇರಿಸಿ ಒಂದು ಆ್ಯಪ್ಸ್ ಡೆವಲಪ್ ಮಾಡಬಹುದು. ಡೆವಲೆಪ್ ಮಾಡುವುದು ಒಂದು ಚಾಲೆಂಜ್ ಆದರೆ ಅದನ್ನು ಉತ್ಕೃಷ್ಟವಾಗಿ, ಆಕರ್ಷಣೀಯವಾಗಿ ಮಾಡುವುದು ಇನ್ನೂ ದೊಡ್ಡ ಚಾಲೆಂಜ್. ಅದಕ್ಕೆ ಬೇಕಾದ ಜನ, ಮನ, ಎಲ್ಲಕ್ಕಿಂತಲೂ ಮುಖ್ಯವಾಗಿ ಹಣದ ಸಂಯೋಜನೆ ಸಂಗ್ರಹಣೆ ಮುಖ್ಯ.
ಕನ್ನಡದ ಆ್ಯಪ್ಸ್ ಗಳು ಮೊಬೈಲ್ ನಲ್ಲಿ ತುಂಬಬೇಕು. ಜನ ಹೇಗೆ ಭಾಷೆಯನ್ನು ಜನಜೀವನದಲ್ಲಿ ಬಳಸುತ್ತಾರೋ ಹಾಗೆಯೇ ಮೊಬೈಲ್ ನಲ್ಲೂ ಕೂಡ ಬಳಸಬೇಕು. ಶಹರದಿಂದ ಹಳ್ಳಿಯವರೆಗೆ, ಶ್ರೀಮಂತನಿಂದ ಹಿಡಿದು ಬಡವನವರೆಗೆ ಆ್ಯಪ್ ಗಳು ಸಿಗುವಂತಿರಬೇಕು. ಭಾಷೆಯೂ ತಂತ್ರಜ್ಞಾನವನ್ನು ಬಳಸಿಕೊಂಡು ಆಧುನಿಕವಾಗಬೇಕು. ಭಾಷೆ ಮಿದುಳಿನಂತೆ....ಬಳಸಿದಷ್ಟು ಬೆಳೆಯುವುದು.
-ವಿಕ್ರಮ ಜೋಷಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com