ಡಿಜಿಟಲ್ ಕನ್ನಡದಲ್ಲಿ ಆಗಬೇಕಾಗಿರುವ ಮೂಲ ಕೆಲಸಗಳೇನು?

ಕನ್ನಡದಲ್ಲಿ ಯುನಿಕೋಡ್ ಫಾಂಟ್ ಗಳಿಲ್ಲವೇ? ಖಂಡಿತಾ ಇವೆ. ಆದರೆ ಅದನ್ನು ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಅಳವಡಿಸಿಕೊಳ್ಳುವ ಇಚ್ಛಾಶಕ್ತಿ ನಮ್ಮ ಸರಕಾರಗಳಿಗಿದ್ದರೆ ತಾನೆ?
ಡಿಜಿಟಲ್ ಕನ್ನಡ
ಡಿಜಿಟಲ್ ಕನ್ನಡ
 ಪ್ರತೀ ವೈಚಾರಿಕ ಬೆಳವಣಿಗೆಗಳ ಹಂತದಲ್ಲೂ ಕನ್ನಡ ತನ್ನನ್ನು ತಾನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ದ್ರವಿಡ ನುಡಿಗಳು ಬೆಳೆಯುವಾಗ, ಲಿಪಿಗಳು ಉದ್ಭವವಾದಾಗ, ಶಾಸನಗಳು ಬರೆಯಲ್ಪಡತೊಡಗಿದಾಗ, ರಾಜರುಗಳು ದಿಗ್ವಿಜಯ ಸಾಧಿಸತೊಡಗಿದಾಗ ಕನ್ನಡ ಮುಂಚೂಣಿಯಲ್ಲಿತ್ತು. ಇಂದಿನ ಮಹಾರಾಷ್ಟ್ರ,ಆಂದ್ರ, ತೆಲಂಗಾಣಗಳೂ ಕರುನಾಡಿನ ರಾಜರಿಗೆ ಕಪ್ಪ ಸಲ್ಲಿಸುತ್ತಿದ್ದರು. ಉಳಿದ ಭಾಷೆಗಳು ಇನ್ನೂ ತನ್ನತನವನ್ನು ಕಂಡುಕೊಳ್ಳಲು ಹೆಣಗುತ್ತಿರುವಾಗ ಕನ್ನಡವು ತನ್ನದೊಂದು ಸಾಂಸ್ಕೃತಿಕ ಪರಂಪರೆಯನ್ನು ಸ್ಥಾಪಿಸಿಕೊಂಡಿತ್ತು! ಇಂತಹ ಕನ್ನಡ ಡಿಜಿಟಲ್ ಯುಗದಲ್ಲೂ ಹಿಂದೆ ಬಿದ್ದಿಲ್ಲ. ತಮಿಳಿನ ನಂತರ ಹೆಚ್ಚು ಡಿಜಿಟಲ್ ಬೆಳವಣಿಗೆಗೆ ಪಕ್ಕಾಗಿರುವುದು ಕನ್ನಡ. ಆದರೆ ಕನ್ನಡದ ಸ್ಪರ್ಧೆ ಇರಬೇಕಾದುದು ಇತರ ಭಾರತೀಯ ಭಾಷೆಗಳ ಜೊತೆಗಲ್ಲ. ಭಾರತ ದೇಶಕ್ಕೆ ತನ್ನ ಸ್ಪರ್ಧೆಯನ್ನು ಸೀಮಿತಗೊಳಿಸಿಕೊಂಡರೆ ಕನ್ನಡದ ಬೆಳವಣಿಗೆಗೆ ಅದಕ್ಕಿಂತ ದೊಡ್ಡ ಅನಾಹುತ ಇನ್ನೊಂದಿಲ್ಲ! ಇಂತಹ ವಿಷಯಗಳಿಗಾಗಿ ನಾವು ನೋಡಬೇಕಾಗಿರುವುದು ಕೊರಿಯನ್,ಜಪಾನೀಸ್,ಫ್ರೆಂಚ್, ಜರ್ಮನ್, ಸ್ವೀಡಿಷ್ ನಂತಹ ಭಾಷೆಗಳ ಕಡೆಗೆ. ಅವುಗಳ ಬೆಳವಣಿಗೆಗೆ ಸಮಾನಾಂತರವಾಗಿ ಬೆಳೆಯಬೇಕಾದುದು ಕನ್ನಡದ ಆದ್ಯತೆಯಾಗಬೇಕು. ಅಷ್ಟಕ್ಕೂ ಕನ್ನಡದ ಆದ್ಯತೆಗಳೇನು ಎಂಬುದು ನಾಡನ್ನಾಳುವವರಿಗೆ ಗೊತ್ತಿಲ್ಲ. ಅವರಿಗೆ ಸಲಹೆ ಕೊಡಬೇಕಾದವರೂ ಸಹ ಅರೆಬರೆಯಾಗಿ ಕಂಪ್ಯೂಟರ್ ಕಲಿತವರು. ಅಧಿಕಾರಿಗಳ ಕಂಪ್ಯೂಟರ್ ಜ್ಞಾನವಾದರೂ ಬಳಕೆಗೆ ಮಾತ್ರ ಸೀಮಿತವಾಗಿದೆ. ಮೂಲಭೂತವಾಗಿ ಬೆಳವಣಿಗೆ ಆಗಬೇಕಾಗಿರುವುದೆಲ್ಲಿ ಎಂಬುದರ ಅರಿವಿನ ಕೊರತೆ ಎಲ್ಲರಿಗೂ ಇದೆ.
 ಮೊದಲ ಉದಾಹರಣೆಯೆಂದರೆ ಕನ್ನಡ ಯುನಿಕೋಡ್ ಬಳಕೆ. ಇದರ ಬಗ್ಗೆ ಚಂದ್ರಶೇಖರ ಕಂಬಾರರು ಬಹಳ ಮಾತನಾಡಿದರು. ಅದ್ಯಾವುದೋ ಶುಭಗಳಿಗೆಯಲ್ಲಿ ಅದೆಂತದೋ ಮಾಯೆಯಲ್ಲಿ ಕನ್ನಡಕ್ಕೆ ಯುನಿಕೋಡ್ ಅತ್ಯಂತ ಅವಶ್ಯಕ ಎಂಬುದು ಕಂಬಾರರಿಗೆ ಹೇಗೋ ಮನವರಿಕೆಯಾಗಿ ಹೋಗಿಬಿಟ್ಟಿದೆ. ಅದಕ್ಕೇ ಅವರು ಹೋದಲ್ಲಿ ಬಂದಲ್ಲೆಲ್ಲ ಕನ್ನಡದಲ್ಲಿ ಯುನಿಕೋಡ್ ತಂತ್ರಾಂಶ ಬಳಕೆಗೆ ಬರಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಇಷ್ಟಕ್ಕೂ ಯುನಿಕೋಡ್ ಎಂಬುದು ತಂತ್ರಾಂಶವಲ್ಲ ಅದೊಂದು ಶಿಷ್ಟತೆ ಅಥವಾ ಪ್ರೊಟೊಕಾಲ್ ಎಂದು ಹೇಳಿಕೊಡುವವರಾರು? ಇವೆರಡರ ವ್ಯತ್ಯಾಸ ಆ ಹಿರಿಯರಿಗೆ ತಿಳಿದಿರುವ ಸಾಧ್ಯತೆಗಳೂ ಇಲ್ಲ. ಕುರುಡಾಗಿಯಾದರೂ ಸರಿ ಕನ್ನಡಕ್ಕೊಂದು ಒಳಿತಾಗಬೇಕಾದ ತಂತ್ರಜ್ಞಾನ ಬರಬೇಕಿದೆ ಎಂದು ಕಂಡುಕೊಂಡು ಮಾತನಾಡಿದ ಅವರ ಹಿರಿಮೆಗೆ ನಮ್ಮ ಗೌರವ ಸಲ್ಲುತ್ತದೆ. ಸರಿ ಯುನಿಕೋಡ್ ಬಂತು! ಮೈಕ್ರೊಸಾಫ್ಟ್, ಲಿನಕ್ಸ್ ಮತ್ತು ಆಪಲ್ ಗಳು ಕಾಸು ಭಿಕ್ಷೆಯಂತೆ ಒಂದು ಫಾಂಟ್ ಅನ್ನು ಮಾತ್ರ ಕನ್ನಡಕ್ಕೆ ಮೀಸಲಿಟ್ಟವು. ಇಂಗ್ಲೀಷ್ (ರೋಮನ್) ಲಿಪಿಯು ವಿವಿಧ ಆಕಾರಗಳಲ್ಲಿ ಚೆಂದವಾಗಿ ಕಾಣುವಂತೆ ಮಾಡುವ ಎಲ್ಲ ಸೌಲಭ್ಯವಿದೆ. ಆದರೆ ಕನ್ನಡ ಜಾಲತಾಣಗಳು ಮಾತ್ರ ಭಿಕ್ಷೆಯಾಗಿ ದೊರಕಿದ ಒಂದೇ ಫಾಂಟ್ ನಲ್ಲಿ ಎಲ್ಲರಿಗೂ ಕಾಣಬೇಕು! ಕನ್ನಡದಲ್ಲಿ ಯುನಿಕೋಡ್ ಫಾಂಟ್ ಗಳಿಲ್ಲವೇ? ಖಂಡಿತಾ ಇವೆ. ಆದರೆ ಅದನ್ನು ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಅಳವಡಿಸಿಕೊಳ್ಳುವ ಇಚ್ಛಾಶಕ್ತಿ ನಮ್ಮ ಸರಕಾರಗಳಿಗಿದ್ದರೆ ತಾನೆ? ಗಣಕ ಪರಿಷತ್ ನವರು ಅನೇಕ ವರ್ಷಗಳ ಹಿಂದೆಯೇ ಯುನಿಕೋಡ್ ಫಾಂಟ್ ಗಳನ್ನು ಬಿಡುಗಡೆ ಮಾಡಿದರೂ ಇತ್ತೀಚೆಗೆ ಬಂದ ವಿಂಡೋಸ್ 8 ಮತ್ತು 10 ಗಳಲ್ಲಿ ಈ ಫಾಂಟ್ ಗಳು ಬಳಕೆಗೆ ಬಂದಿಲ್ಲ. ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚುಮಾಡಿ ಈ ಆಪರೇಟಿಂಗ್ ಸಿಸ್ಟಮ್ ಗಳ ಲೈಸೆನ್ಸ್ ಅನ್ನು ಖರೀದಿ ಮಾಡಲಾಗುತ್ತದೆ.  ಕನ್ನಡಕ್ಕೆ ತಕ್ಕುದಾದ ಎಲ್ಲ ಫಾಂಟಗಳನ್ನು ಆಪರೇಟಿಂಗ್ ಸಿಸ್ಟಮ್ ನಲ್ಲಿ ಅಳವಡಿಸಿಕೊಡಿ ಎಂದು ಕೇಳುವ ಧೈರ್ಯ ಸರಕಾರಕ್ಕಿಲ್ಲ.
 ಅಷ್ಟಕ್ಕೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಆಪರೇಟಿಂಗ್ ಸಿಸ್ಟಮ್ ಗಳನ್ನು ಏಕೆ ಖರೀದಿಸಬೇಕು? ತನ್ನದೇ ಒಂದು ಆಪರೇಟಿಂಗ್ ಸಿಸ್ಟಮ್ ಅನ್ನು ಮಾಡಿಕೊಂಡರಾಗದೇ? ಇದಕ್ಕಾಗಿ ವಿಶೇಷ ಪರಿಣಿತಿಯೂ ಬೇಕಿಲ್ಲ. ಉಚಿತವಾಗಿಯೇ ಲಭ್ಯವಿರುವ ಲಿನಕ್ಸ್ ಅನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವುದು ಅತ್ಯಂತ ಸುಲಭ. ಈಗಾಗಲೇ ಅನೇಕ ಚಿಕ್ಕ ಗುಂಪುಗಳು ಈ ಕೆಲಸ ಮಾಡಿವೆ. ಕೆಲ ವರ್ಷಗಳ ಹಿಂದೆ ಕನ್ನಡಕ್ಕೆ ತಂದ ಲಿನಕ್ಸ್ ಅನ್ನು ಮಕ್ಕಳ ಕಲಿಕೆಗಾಗಿ "ಚಿಗುರು" ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ಮಾಡಿದ್ದು ಇಪ್ಪತ್ನಾಲ್ಕು ಇಪ್ಪತೈದು ವರ್ಷ ವಯಸ್ಸಿನ ಕೆಲವೇ ಕೆಲವು ಹುಡುಗರು. ಹುಡುಗರೂ ಮಾಡಬಹುದಾದ ಒಂದು ಸಣ್ಣ ಕೆಲಸಕ್ಕೆ ಅಗಾಧ ಸಾಮರ್ಥ್ಯ ಇರುವ ಸರಕಾರ ಇನ್ನೂ ಮುಂದಾಗದಿರುವುದು ಒಂದು ದೊಡ್ಡ ದೌರ್ಭಾಗ್ಯವೇ ಸರಿ! ಸಣ್ಣದೊಂದು ಇಂಜಿನಿಯರ್ ಗಳ ಅಧಿಕೃತ ಗುಂಪನ್ನು ಸ್ಥಾಪಿಸಿಕೊಂಡು ಈ ಕೆಲಸವನ್ನು ಮಾಡಬಹುದು. ಪ್ರತಿ ವರ್ಷ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುತ್ತಾ ಹೋಗಬಹುದು. ಕನ್ನಡವನ್ನು ಡಿಜಿಟಲ್ ಲೋಕದಲ್ಲಿ ಎತ್ತರೆತ್ತರಕ್ಕೆ ಬೆಳೆಸಬಹುದು!
 ತಂತ್ರಾಂಶದ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಕಿಯೋನಿಕ್ಸ್ ಎಂಬ ಸಂಸ್ಥೆ ಇದೆ. ತಂತ್ರಜ್ಞಾನದ ಬಗ್ಗೆ ತೀರಾ ಕಡಿಮೆ ಜ್ಞಾನವುಳ್ಳ, ಬದ್ಧತೆಯ ತೀವ್ರ ಕೊರತೆಯುಳ್ಳ ಅಧಿಕಾರಿಗಳ ಅಡ್ಡೆ ಇದು! ಇದರ ಕೆಲಸವೆಂದರೆ ಸರಕಾರದ ತಾಂತ್ರಿಕ ಕೆಲಸಗಳನ್ನು ಗುತ್ತಿಗೆ ತೆಗೆದುಕೊಂಡು ಮತ್ತೆ ಇನ್ನೊಂದು ಸಂಸ್ಥೆಗೆ ಹೊರಗುತ್ತಿಗೆ ಕೊಡುವುದು! ಸರಕಾರವೇ ನೇರವಾಗಿ ಮಾಡಬಹುದಾದ ಹೊರಗುತ್ತಿಗೆ ಕೊಡುವ ಕೆಲಸಕ್ಕೆ ನಡುವೆ ಇಂತಹದೊಂದು ಬಿಳಿಯಾನೆ ಸಂಸ್ಥೆಯನ್ನು ಕಟ್ಟಿಕೊಂಡು ನಾಗರಿಕರ ಹಣ ಪೋಲು ಮಾಡುವ ಅವಶ್ಯಕತೆ ಇದೆಯೇ ಎಂದು ಯೋಚಿಸಬೇಕಾಗಿದೆ.  
   ಕನ್ನಡದಲ್ಲಿ ಬರೀ ಇಂಗ್ಲೀಷ್ ಕೀಬೋರ್ಡ್ ಬಳಸಿ ಟೈಪ್ ಮಾಡುವುದಕ್ಕೆ ತೃಪ್ತಿ ಪಟ್ಟರೆ ಸಾಲದು. ಜರ್ಮನ್ ಪದಗಳಲ್ಲಿ ಬಳಸಲ್ಪಡುವ "ಸ್ಯಾಪ್" ನಂತೆ ಕನ್ನಡವೂ ಬಳಸಲ್ಪಡಬೇಕು. ಕನ್ನಡದ ವಿವಿಧ ಟೂಲ್ ಗಳು, ಸಾಫ್ಟ್ ವೇರ್ ಉತ್ಪನ್ನಗಳು ವಿಶ್ವದಾದ್ಯಂತ ಬಳಸಲ್ಪಡಬೇಕು. ಕನ್ನಡವನ್ನೇ ನೇರವಾಗಿ ಟೈಪ್ ಮಾಡಬಲ್ಲ ಕೀಬೋರ್ಡ್ ಗಳು ಬರಬೇಕು. ಕನ್ನಡ ಲಿಪಿ ಮತ್ತು ಪದಗಳನ್ನು ಬಳಸಿ ಪ್ರೋಗ್ರಾಮ್ ಗಳನ್ನು ಬರೆಯುವಂತಾಗಬೇಕು. ಕನ್ನಡ ಬಿಟ್ಟು ಬೇರೆ ನುಡಿ ಬರದವರು ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿ ಪಡಿಸುವಷ್ಟು ಶಕ್ತರಾಗಬೆಕು. ಕನ್ನಡದಲ್ಲಿ ಓದಿದರೆ ಸಾಫ್ಟ್ ವೇರ್ ನೌಕರಿ ಮತ್ತು ಪಗಾರ ದೊರೆಯುತ್ತದಾದರೆ ಕನ್ನಡ ಅನ್ನ ಕೊಡುವ ನುಡಿಯಾಗುತ್ತದೆ. ಅನ್ನ ಕೊಡುವ ನುಡಿ ಕನ್ನಡದಲ್ಲೇ ಕಲಿಕೆಗಳಾಗುತ್ತವೆ, ಸಂಶೋಧನೆಗಳಾಗುತ್ತವೆ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತದೆ. ಕನ್ನಡವನ್ನು ಕನ್ನಡಿಗರು ಮಾತ್ರವಲ್ಲ ಬೇರೆಯವರೂ ಕಲಿಯತೊಡಗುತ್ತಾರೆ. ಆಗ ಕನ್ನಡ ಕಾಲ,ಗಡಿಗಳನ್ನು ಮೀರಿ ಬೆಳೆದು ನಿಲ್ಲುತ್ತದೆ.
  ಕನ್ನಡವನ್ನು ಅರ್ಥಮಾಡಿಕೊಂಡು ಯಂತ್ರಕ್ಕೆ ಊಡಿಸುವ ಕಂಪೈಲರ್ ಗಳು ಅಭಿವೃದ್ಧಿಯಾಗಬೇಕು. ಕನ್ನಡದ ಅಕ್ಷರಗಳನ್ನು ತೆರೆಯ ಮೇಲೆ ಮೂಡಿಸಬಲ್ಲ ಡಿವೇಸ್ ಡ್ರೈವರ್ ಗಳು ಬರಬೇಕು. ಫಾಂಟ್ ಬೆಳವಣಿಗೆಯ ಕಿಟ್ ಗಳು ಬರಬೇಕು. ಇವೆಲ್ಲ ಬರಬೇಕಾದರೆ ಕನ್ನಡಿಗರಿಗೆ ಇಚ್ಛಾಶಕ್ತಿ ಬೇಕು! ನೃಪತುಂಗ, ತೈಲಪ, ಚಾಲುಕ್ಯರ ಕಾಲದ ವೈಭವಕ್ಕೆ ಮರಳಬೇಕಾದರೆ ತಂತ್ರಜ್ಞಾನದೊಡನೆ ವಿಶ್ವದೊಂದಿಗೆ ಸಮೀಕರಿಸಿಕೊಂಡು ಹೋಗುವುದು ಕನ್ನಡಿಗರಿಗೆ ಅನಿವಾರ್ಯ ಮತ್ತು ಸಧ್ಯದ ಅಗತ್ಯ!
-ಶ್ರೀಹರ್ಷ ಸಾಲಿಮಠ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com