ಫ್ರೀ ಮೊಬೈಲ್ ಆ್ಯಪ್ ಗಳು ಸ್ಮಾರ್ಟ್ ಫೋನ್ ಗೆ ಮಾರಕ..!

ಸ್ಮಾರ್ಟ್ ಫೋನ್ ಗ್ರಾಹಕರೇ ಎಚ್ಚರ... ಉಚಿತವಾಗಿ ದೊರೆಯಿತೆಂದು ಸಿಕ್ಕ-ಸಿಕ್ಕ ಆ್ಯಪ್ ಗಳನ್ನು ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿದರೆ...
ಉಚಿತ ಆ್ಯಪ್ ಗಳು ಸ್ಮಾರ್ಟ್ ಫೋನ್ ಗೆ ಮಾರಕ
ಉಚಿತ ಆ್ಯಪ್ ಗಳು ಸ್ಮಾರ್ಟ್ ಫೋನ್ ಗೆ ಮಾರಕ

ಸ್ಮಾರ್ಟ್ ಫೋನ್ ಗ್ರಾಹಕರೇ ಎಚ್ಚರ... ಉಚಿತವಾಗಿ ದೊರೆಯಿತೆಂದು ಸಿಕ್ಕ-ಸಿಕ್ಕ ಆ್ಯಪ್ ಗಳನ್ನು ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿದರೆ ನಿಮ್ಮ ಮೊಬೈಲ್ ನ ಕಾರ್ಯಕ್ಷಮತೆ ಕ್ರಮೇಣ ಕುಸಿಯುತ್ತದೆ..

ಸ್ಮಾರ್ಟ್ ಫೋನ್ ಮೇಲೆ ನಡೆದ ಸಂಶೋಧನೆಯೊಂದು ಇಂತಹ ಕುತೂಹಲಕಾರಿ ವರದಿಯನ್ನು ನೀಡಿದ್ದು, ಹಣ ನೀಡಿ ಖರೀದಿಸಿದ ಆ್ಯಪ್ ಗಳಿಗಿಂತ ಉಚಿತವಾಗಿ ಡೌನ್ ಲೋಡ್ ಮಾಡಿಕೊಂಡ ಆ್ಯಪ್ ಗಳು ನಮ್ಮ ಸ್ಮಾರ್ಟ್ ಫೋನ್ ಗೆ ಮಾರಕವಾಗುತ್ತದೆಯಂತೆ. ಸಾಮಾನ್ಯವಾಗಿ ಈ ಉಚಿತ ಆ್ಯಪ್ ಗಳ ಬಂಡವಾಳವೇ ಇದರ ಜಾಹಿರಾತುಗಳು. ಹೀಗಾಗಿ ಗ್ರಾಹಕನಿಗೆ ಆ್ಯಪ್ ಅನ್ನು ಉಚಿತವಾಗಿ ನೀಡಿ ಆ್ಯಪ್ ಮೂಲಕ ತಮ್ಮ ಜಾಹಿರಾತುಗಳನ್ನು ಪ್ರಸಾರ ಮಾಡುತ್ತವೆ. ಇದರಿಂದಾಗಿ ನಮ್ಮ ಸ್ಮಾರ್ಟ್ ಫೋನ್ ನ ಮೆದುಳಿನ (ಸಿಪಿಯು) ಮೇಲೆ ಹೆಚ್ಚಿನ ಒತ್ತಡ ಬಿದ್ದು, ಕ್ರಮೇಣ ಅದರ ಕಾರ್ಯಕ್ಷಮತೆ ಕುಸಿಯುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಈ ವಿನೂತನ ಸಂಶೋಧನೆ ನಡೆದಿದ್ದು, ರೊಚೆಸ್ಟರ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೆನಡಾ ಕ್ವೀನ್ಸ್ ಯುನಿವರ್ಸಿಟಿಯ ವಿವಿಧ ಟೆಕ್ಕಿಗಳು ಮತ್ತು ವಿಜ್ಞಾನಿಗಳು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂಶೋಧನೆಯ ವರದಿಯಾಧಾರದ ಮೇಲೆ ಹಣ ನೀಡಿ ಖರೀದಿಸುವ ಆ್ಯಪ್ ಗಳಿಗಿಂತ ಉಚಿತವಾಗಿ ಪಡೆದ ಆ್ಯಪ್ ಗಳು ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ. ಈ ಉಚಿತ ಆ್ಯಪ್ ಗಳಲ್ಲಿ ನೀಡಲಾಗುವ ಜಾಹಿರಾತುಗಳು ಸ್ಮಾರ್ಟ್ ಫೋನ್ ನ ಸಿಪಿಯು ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಷ್ಟೇ ಅಲ್ಲದೇ ಮೊಬೈಲ್ ಬ್ಯಾಟರಿಯಲ್ಲಿನ ವಿದ್ಯುತ್ ಅನ್ನು ಸುಖಾಸುಮ್ಮನೆ ಖಾಲಿ ಮಾಡುತ್ತದೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ ಈ ಜಾಹಿರಾತು ಮತ್ತು ಉಚಿತ ಆ್ಯಪ್ ಗಳಿಂದಾಗಿ ಸರಿ ಸುಮಾರು 2.5 ಗಂಟೆಯಿಂದ 2.10ರವೆರಗೆ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯ 1.70ಕ್ಕೆ ಕುಸಿಯುತ್ತದೆ. ಅಂದರೆ ಶೇ.16ರಷ್ಟು ವಿದ್ಯುತ್ ಅನ್ನು ಈ ಜಾಹಿರಾತುಗಳು ಖಾಲಿ ಮಾಡುತ್ತವೆ.

ಅಂತೆಯೇ ಈ ಉಚಿತ ಆ್ಯಪ್ ಗಳನ್ನು ಸತತವಾಗಿ ಬಳಕೆ ಮಾಡುವುದರಿಂದ ಸ್ಮಾರ್ಟ್ ಫೋನ್ ನ ಸಿಪಿಯು ಬಿಸಿಯಾಗಿ ಅದರ ಸಾಮರ್ಥ್ಯ ಕೂಡ ಕುಸಿಯುತ್ತದೆ. ಉಚಿತ ಆ್ಯಪ್ ಗಳ ಜಾಹಿರಾತುಗಳು ಮೊಬೈಲ್ ಸಿಪಿಯುನ ಶೇ.48ರಷ್ಟು ಸಮಯವನ್ನು ತಿನ್ನುವುದಷ್ಟೇ ಅಲ್ಲದೇ ಶೇ.22 ರಷ್ಟು ಸಂಗ್ರಹ ಸಾಮರ್ಥ್ಯ (ಮೆಮೋರಿ)ವನ್ನು ಕೂಡ ಹಾಳು ಮಾಡುತ್ತವೆ. ಕೆಲ ವಿಶೇಷ ಪ್ರಕರಣಗಳಲ್ಲಿ ಈ ಆ್ಯಪ್ ಗಳು ನಿಮ್ಮ ಸ್ಮಾರ್ಟ್ ಫೋನ್ನಲ್ಲಿನ ಶೇ.100  ಸಂಗ್ರಹ ಸಾಮರ್ಥ್ಯವನ್ನೂ ಕೂಡ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳ ಒಂದು ಅಂದಾಜಿನ ಪ್ರಕಾರ ಇಂತಹ ಉಚಿತ ಆ್ಯಪ್ ಗಳು ಸ್ಮಾರ್ಟ್ ಫೋನ್ ನಲ್ಲಿನ ಶೇ.79 ರಷ್ಟು ನೆಟವರ್ಕ್ ಡಾಟಾವನ್ನು ಬಳಕೆ ಮಾಡತ್ತದೆಯಂತೆ. ಹೀಗಾದಾಗ ನಮ್ಮ ಸ್ಮಾರ್ಟ್ ಫೋನ್ ಗಳು ಇದ್ದಕಿದ್ದಂತೆಯೇ ವೇಗ ಕಳೆದುಕೊಂಡು ಹ್ಯಾಂಗ್ ಆಗುತ್ತವೆ. ನಾವು ಹಿಂದು-ಮುಂದು ನೋಡದೆ ರಿಪೇರಿಗೆ ನೀಡಿ ನೂರಾರು ರುಪಾಯಿ ಹಣವನ್ನು ಖರ್ಚು ಮಾಡುತ್ತೇವೆ.

ಆ್ಯಪ್ ಗಳ ಬಗ್ಗೆ ಒಂದಿಷ್ಟು ಮಾಹಿತಿ:
1.ಗೂಗಲ್ ಪ್ಲೇ ಸ್ಟೋರ್ ನಲ್ಲಿ 3ರಿಂದ 5 ಸ್ಟಾರ್ ಗಳಿರುವ ಆ್ಯಪ್ ಗಳು ಸ್ಪರ್ಧಾತ್ಮಕ ಆ್ಯಪ್ ಗಳೆಂದು ಪರಿಗಣಿತವಾಗುತ್ತವೆಯೇ ಹೊರತು, ಈ ಆ್ಯಪ್ ಗಳಿಂದ ಶೇ.100 ರಷ್ಟು ರಕ್ಷಣೆ ನಿರೀಕ್ಷಿಸಲು ಸಾಧ್ಯವಿಲ್ಲ.

2.ಸಾಮಾನ್ಯವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಗಳಿಗೆ ನೀಡಲಾಗುವ ಸ್ಟಾರ್ ಗಳು ಅವುಗಳು ಪಡೆದ ಜನಾಕರ್ಷಣೆ ಮತ್ತು ಮಾರುಕಟ್ಟೆಯಲ್ಲಿರುವ ಸ್ಪರ್ಧಾತ್ಮಕತೆ ಮತ್ತು ಬಳಕೆಯ ಆಧಾರದ ಮೇಲೆ ಗ್ರಾಹಕರೇ ಸ್ಟಾರ್ ರೇಟಿಂಗ್ಸ್ ನೀಡುರುತ್ತಾರೆ. ಹೀಗಾಗಿ  ಜನಾಕರ್ಷಣೆ ಮತ್ತು ಸ್ಪರ್ಧಾತ್ಮಕ ಆ್ಯಪ್ ಗಳ ನಡುವೆ ಅಜಗಜಾಂತರ ವ್ಯತ್ಯಾಸವಿದ್ದು, ಇಂತಹ ಉಚಿತ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ ಎಚ್ಚರದಿಂದಿರಬೇಕು.

3.ಸುಖಾ-ಸುಮ್ಮನೆ ಅಥವಾ ಮಾರುಕಟ್ಟೆಯಲ್ಲಿ ಟ್ರೆಂಡ್ ಇದೆ ಎಂದು ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕಿಂತಲೂ, ನಮಗೆ ಈ ಆ್ಯಪ್ ನಿಂದ ಎಷ್ಟು ಲಾಭದಾಯಕ ಎನ್ನುವ ಆಧಾರದ ಮೇಲೆ ಆ್ಯಪ್ ಗಳನ್ನು ಪಡೆದರೆ ಒಳಿತು.

4.ಹಳೆಯ ಅಥವಾ ಬಳಕೆ ಮಾಡುತ್ತಿಲ್ಲದ ಆ್ಯಪ್ ಗಳಿದ್ದರೆ ಅಂತಹ ಆ್ಯಪ್ ಗಳನ್ನು ಸ್ಮಾರ್ಟ್ ನಿಂದ ತೆಗೆದುಹಾಕಿ. ಇದರಿಂದ ಫೋನ್ ನ ಸಂಗ್ರಹ ಸಾಮರ್ಥ್ಯ ವೃದ್ಧಿಸುವುದಷ್ಟೇ ಅಲ್ಲದೆ, ನಿಮ್ಮ ಫೋನ್ ನ ಸಿಪಿಯು ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ಫೋನ್ ನ ಕಾರ್ಯಕ್ಷಮತೆ ಹೆಚ್ಚುತ್ತದೆ.

5.ಸ್ಮಾರ್ಟ್ ಫೋನ್ ಗಳ ರಕ್ಷಣೆ ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಕ್ಕಾಗಿಯೇ ಸಾಕಷ್ಟು ಆ್ಯಪ್ ಗಳು ಬಂದಿದೆಯಾದರೂ, ಇಂತಹ ಆ್ಯಪ್ ಗಳಿಂದ ಲಾಭಕ್ಕಿಂತ ಹೆಚ್ಚಾಗಿ ನಷ್ಟವೇ ಉಂಟಾಗುತ್ತದೆ. ಹೀಗಾಗಿ ಇಂತಹ ಆ್ಯಪ್ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ ರೇಟಿಂಗ್ಸ್ ಮೇಲೆ ಆಧಾರಿತವಾಗದೇ ಗ್ರಾಹಕರು ಈ ಆ್ಯಪ್ ಬಗ್ಗೆ ನೀಡಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ಒಂದು ವೇಳೆ ಈ ಆ್ಯಪ್ ನಿಂದ ಪ್ರಯೋಜನವಿಲ್ಲ ಎಂದೆನೆಸಿದರೆ ಕೂಡಲೇ ಅದನ್ನು ಮೊಬೈಲ್ ನಿಂದ ತೆಗೆದುಹಾಕುವುದು ಒಳ್ಳೆಯದು.

- ಶ್ರೀನಿವಾಸ ಮೂರ್ತಿ ವಿಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com