ವಾಷಿಂಗ್ ಟನ್: ಬುಧ ಗ್ರಹದ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾಯಿಸಿದ್ದ ಮೆಸ್ಸೆಂಜರ್ ಉಪಗ್ರಹ ಸ್ಫೋಟಗೊಂಡಿದೆ.
ನಾಸಾ ಉಡಾಯಿಸಿದ್ದ ಮಹತ್ವದ ಸಂದೇಶ ವಾಹಕ ಉಪಗ್ರಹ ತನ್ನ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿ ನಿನ್ನೆ ಬುಧ ಗ್ರಹದ ಅಂಗಳದಲ್ಲಿ ಪತನವಾಗಿದೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ. ಮೇರಿಲ್ಯಾಂಡ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿಯಲ್ಲಿ ನಿಯಂತ್ರಣ ಕೇಂದ್ರವನ್ನು ಹೊಂದಿದ್ದ ಈ ಉಪಗ್ರಹ ಗಂಟೆಗೆ 14,000ಕಿ.ಮೀ. ವೇಗದಲ್ಲಿ ಸುತ್ತುತ್ತಿತ್ತು. ಉಪಗ್ರಹದಲ್ಲಿ ಇಂಧನ ಖಾಲಿಯಾದ ಬಳಿಕ ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟ ಉಪಗ್ರಹವು ಅದರ ಆಕರ್ಷಣೆಯಲ್ಲೇ ತಿರುಗುತ್ತಿತ್ತು.
ಬುಧಗ್ರಹ ಕಕ್ಷೆಯತ್ತ ಆಗಮಿಸುತ್ತಿದ್ದಂತೆಯೇ ಅದರ ಗುರುತ್ವಾಕರ್ಷಣೆಗೆ ಸಿಲುಕಿದ ಉಪಗ್ರಹ ಗುರುವಾರ ಮಧ್ಯಾಹ್ನ 3.26ರ ಸುಮಾರಿನಲ್ಲಿ ಪತನಗೊಂಡಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಬುಧ ಗ್ರಹದ ಅಂಗಳದಲ್ಲಿ ಪತನಗೊಳ್ಳುವ ಕೆಲವು ವಾರಗಳ ಹಿಂದೆಷ್ಟೇ ಉಪಗ್ರಹವು ಬುಧಗ್ರಹ ಮತ್ತು ಸೌರವ್ಯೂಹಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಮಾಹಿತಿಗಳನ್ನು ರವಾನಿಸಿತ್ತು. ಬುಧ ಗ್ರಹದ ಮೇಲ್ಮೈ, ಹವಾಮಾನ, ಭೂಗುಣ, ಭೌಗೋಳಿಕ ವ್ಯವಸ್ಥೆಗಳ ಬಗ್ಗೆಯೂ ನಾಸಾಕ್ಕೆ ಮಾಹಿತಿ ರವಾನಿಸಿತ್ತು.
ಮೆಸ್ಸೆಂಜರ್ ಉಪಗ್ರಹ ಪತನಗೊಳ್ಳುವ ಅಂತಿಮ ಕ್ಷಣದ ದೃಶ್ಯಗಳನ್ನು ಭೂ ಆಧಾರಿತ ದೂರದರ್ಶಕಗಳು ಸೆರೆ ಹಿಡಿಯುವಲ್ಲಿ ವಿಫಲವಾಗಿವೆ. ಉಪಗ್ರಹದ ಅಂತರ ಹೆಚ್ಚಾಗಿದ್ದರಿಂದ ಈ ಕ್ಷಣಗಳನ್ನು ಸೆರೆ ಹಿಡಿಯುವಲ್ಲಿ ದೂರದರ್ಶಕಗಳು ವಿಫಲವಾಗಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಪತನಕ್ಕೂ ಮುನ್ನ ಮೆಸ್ಸೆಂಜರ್ ಉಪಗ್ರಹ ರವಾನೆ ಮಾಡಿದ್ದ ಅಂತಿಮ ಬುಧಗ್ರಹದ ಚಿತ್ರ
ಬುಧನ ಅಂಗಳಕ್ಕೆ ತೆರಳಿದ ಮೊದಲ ಉಪಗ್ರಹ
ಆಗಸ್ಟ್ 2004ರಲ್ಲಿ ಉಡಾವಣೆಗೊಂಡಿದ್ದ ಮೆಸ್ಸೆಂಜರ್ ಉಪಗ್ರಹವು 2011 ಮಾರ್ಚ್ 18ರಂದು ಬುಧ ಗ್ರಹ ಕಕ್ಷೆ ಸೇರುವ ಮೂಲಕ ಇತಿಹಾಸ ಬರೆದಿತ್ತು. ಬುಧಗ್ರಹದ ಕಕ್ಷೆಗೆ ಸೇರಿದ ವಿಶ್ವದ ಮೊದಲ ಉಪಗ್ರಹ ಎಂಬ ಖ್ಯಾತಿಗೂ ಪಾತ್ರವಾಯಿತು. ಅಂದಿನಿಂದ ನಿನ್ನೆ ಉಪಗ್ರಹ ಪತನವಾಗುವವರೆಗೂ ಈ ಉಪಗ್ರಹವು ಬುಧಗ್ರಹದ ಮೇಲ್ಮೈ, ಹವಾಮಾನ, ಭೂಗುಣ, ಭೌಗೋಳಿಕ ವ್ಯವಸ್ಥೆ ಮತ್ತು ಸೌರವ್ಯೂಹದ ಮಹತ್ವದ ಮಾಹಿತಿ ನೀಡಬಲ್ಲ ಸುಮಾರು 2500 ಚಿತ್ರಗಳನ್ನು ನಾಸಾಗೆ ರವಾನಿಸಿದೆ.
Advertisement