
ನವದೆಹಲಿ: ಪ್ರಮುಖ ಸರ್ಚ್ ಎಂಜಿನ್ ಗೂಗಲ್ ಗಿಂತಲೂ ವೇಗವಾಗಿ ಮತ್ತು ನಿಖರವಾಗಿ ಉತ್ತರಿಸುವ ಸರ್ಚ್ ಎಂಜಿನ್ ಅನ್ನು ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾನೆ.
ಅದೂ ಕೂಡ 16 ವರ್ಷದ ಪುಟ್ಟ ಪೋರ. ಹೌದು ಪ್ರಮುಖ ಸರ್ಚ್ ಎಂಜಿನ್ ಗೂಗಲ್ ಗಿಂತಲೂ ಶೇ.47ರಷ್ಟು ವೇಗವಾಗಿ ಮತ್ತು ನಿಖರವಾಗಿ ಕಾರ್ಯ ನಿರ್ವಹಿಸಬಲ್ಲ ಸರ್ಚ್ ಎಂಜಿನ್ ಅನ್ನು ತಾನು ಆವಿಷ್ಕರಿಸಿದ್ದೇನೆ ಎಂದು ಭಾರತೀಯ ಮೂಲದ ಕೆನಡಾ ನಿವಾಸಿಯಾದ ಅನ್ಮೋಲ್ ಟುಕ್ರೆಲ್ ಹೇಳಿಕೊಂಡಿದ್ದಾನೆ. ಗೂಗಲ್ ಸಂಸ್ಥೆ ಪ್ರತೀ ವರ್ಷ ನಡೆಸುವ "ಗೂಗಲ್ ಸೈನ್ಸ್ ಫೇರ್" ಸ್ಪರ್ಧೆಯಲ್ಲಿ ಅನ್ಮೋಲ್ ಟುಕ್ರೆಲ್ ತಾನು ಅಭಿವೃದ್ಧಿಪಡಿಸಿರುವ ನೂತನ ಸರ್ಚ್ ಎಂಜಿನ್ ಅನ್ನು ಸಲ್ಲಿಕೆ ಮಾಡಿದ್ದಾನೆ.
ಆತನೇ ಹೇಳಿಕೊಂಡಿರುವಂತ ತನ್ನ ಈ ಸರ್ಚ್ ಎಂಜಿನ್ ಗಾಗಿ ಆತ ಹಲವು ತಿಂಗಳುಗಳ ಕಾಲ ಸಮಯ ತೆಗೆದುಕೊಂಡಿದ್ದು, ಕೇವಲ 60 ಗಂಟೆಗಳ ಅವಧಿಯಲ್ಲಿ ಇಂಜಿನ್ ಕೋಡ್ ಮಾಡಿ ಮುಗಿಸಿದ್ದಾನೆ. ಇನ್ನು ತನ್ನ ಸಾಧನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅನ್ಮೋಲ್ ಟುಕ್ರೆಲ್, ವೈಯುಕ್ತಿಕ ಸರ್ಚ್ ಎಂಜಿನ್ ರಚಿಸುವ ಕುರಿತು ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಆದರೆ ಗೂಗಲ್ ಸಂಸ್ಥೆ ಈ ಕೆಲಸವನ್ನು ಅದಾಗಲೇ ಮಾಡಿದೆ ಎಂದು ತಿಳಿದಾಗ, ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು ಎಂದೆನಿಸಿತು. ಸರ್ಚ್ ಎಂಜಿನ್ ರೂಪಣೆ ನನ್ನ ಪಾಲಿಗೆ ತುಂಬಾ ಆಸಕ್ತಿದಾಯಕ ವಿಚಾರವಾಗಿದೆ ಎಂದು ಅನ್ಮೋಲ್ ಟುಕ್ರೆಲ್ ಹೇಳಿದ್ದಾನೆ.
ಗೂಗಲ್ ಸಂಸ್ಥೆ ಪ್ರತೀ ವರ್ಷ ಜಾಗತಿಕ ಮಟ್ಟದಲ್ಲಿ 13 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಪ್ರಸ್ತುತ ಈ ಸ್ಪರ್ಧೆಯಲ್ಲಿ ಅನ್ಮೋಲ್ ಟುಕ್ರೆಲ್ ಕೂಡ ತನ್ನ ಸರ್ಚ್ ಎಂಜಿನ್ ಅನ್ನು ಸಲ್ಲಿಕೆ ಮಾಡಿದ್ದಾನೆ.
Advertisement