ಆತ್ಮಹತ್ಯೆ
ಆತ್ಮಹತ್ಯೆ

ಆತ್ಮಹತ್ಯೆ ತಡೆಗೆ ಫೇಸ್ ಬುಕ್ ನಿಂದ ವಿನೂತನ ತಂತ್ರ

ಫೇಸ್ ಬುಕ್ ನಲ್ಲಿ ಅಳವಡಿಸಲಾಗಿರುವ ನೂತನ ಟೂಲ್ ನಲ್ಲಿನ ಬಾಣದ ಗುರುತನ್ನು ಒತ್ತಿದರೆ ಕೂಡಲೇ ಫೇಸ್ ಬುಕ್ ಆ ಖಾತೆದಾರರ ಫ್ರೆಂಡ್ಸ್ ಲಿಸ್ಟ್ ನಲ್ಲಿರುವ ಅಷ್ಟೂ ಮಂದಿಗೆ ಅಲರ್ಟ್ ಸಂದೇಶ ರವಾನಿಸುತ್ತದೆ..
Published on

ಆತ್ಮಹತ್ಯೆ ಇಡೀ ವಿಶ್ವವನ್ನು ಕಾಡುತ್ತಿರುವ ಅತಿದೊಡ್ಡ ಮಾನಸಿಕ ಸಮಸ್ಯೆ. ವಿಶ್ವದಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಆತ್ಮಹತ್ಯೆಗೆ ೧೩ನೇ ಸ್ಥಾನ. ಪ್ರತೀ ವರ್ಷ ಸುಮಾರು ಒಂದು ಮಿಲಿಯನ್ ಮಂದಿ ವಿಶ್ವದಾದ್ಯಂತ ಆತ್ಮಹತ್ಯೆಗೊಳಗಾಗುತ್ತಾರೆ.

ನಮ್ಮ ದೇಶದಲ್ಲಿ ಈಗ ಪ್ರತಿ ಆರು ನಿಮಿಷಕ್ಕೆ ಒಬ್ಬರಂತೆ, ಅಂದರೆ ವರ್ಷಕ್ಕೆ ಸುಮಾರು 90 ಸಾವಿರ ಜನರು ತಮ್ಮನ್ನು ತಾವೇ ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಯ ಪ್ರಕರಣಗಳು ದಿನೇ ದಿನೇ ಏರುತ್ತಲೇ ಇವೆ. ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಹೀಗಾದರೆ, ಇದರ 10-20 ರಷ್ಟು ಪಟ್ಟು ಹೆಚ್ಚು ಮಂದಿ ಆತ್ಮಹತ್ಯೆಗೆ ಪ್ರಯತ್ನಿಸಿ, ಬದುಕುಳಿಯುತ್ತಾರೆ. ಕಾನೂನಿನ ತೊಡಕುಗಳು ಮತ್ತು ಸಾಮಾಜಿಕವಾದ ಕಾರಣಗಳಿಂದಾಗಿ ಹೆಚ್ಚಿನ ಪ್ರಕರಣಗಳನ್ನು ಅವರ ಕುಟುಂಬದವರು ಮುಚ್ಚಿ ಹಾಕಲು ಪ್ರಯತ್ನಿಸುತ್ತಾರೆ.

ಆತ್ಮಹತ್ಯೆಗೆ ಯತ್ನಿಸುವವರನ್ನು ತಡೆಯುವುದಕ್ಕಿಂತ ಸಮಾಜದಲ್ಲಿ ಕುಟುಂಬದ ಮಾನಕ್ಕೆ ಹೆದರಿ ಮತ್ತು ಕಾನೂನು ಪ್ರಕ್ರಿಯೆಗೆ ಹೆದರಿ ಸಾಕಷ್ಟು ಮಂದಿ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಾರೆಯೇ ಹೊರತು, ಆತ್ಮಹತ್ಯೆಯನ್ನು ತಡೆಯುವ ಪ್ರಯತ್ನ ತೀರ ಕಡಿಮೆಯಾಗಿದೆ.

ಹೀಗಾಗಿ ಪ್ರಮುಖ ಸಾಮಾಜಿ ಜಾಲತಾಣ ಫೇಸ್ ಬುಕ್ ಆತ್ಮಹತ್ಯೆಯಂತಹ ಮಾನಸಿಕ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದೆ. ಇದಕ್ಕಾಗಿ ಫೇಸ್ ಬುಕ್ ಟೂಲ್ಸ್ ಗೆ ಕೆಲ ಅಪ್ ಡೇಟ್ಸ್ ಗಳನ್ನು ಮಾಡಲಾಗಿದ್ದು, ಇದು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳ ಸ್ಟೇಟಸ್ ಮತ್ತು ಕಮೆಂಟ್ ಗಳನ್ನು ಆಧರಿಸಿ ಅವರನ್ನು ಫೇಸ್ ಬುಕ್ ಮೂಲಕವಾಗಿಯೇ ಮಾತಿಗೆಳೆಯುತ್ತದೆ. ಒಂದು ಖಾತೆದಾರ ಅದಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ಆತನ ಫ್ರೆಂಡ್ಸ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ಅಲರ್ಟ್ ನೀಡುತ್ತದೆ.



ಕೇವಲ ಫೇಸ್ ಬುಕ್ ಮಾತ್ರವಲ್ಲದೇ ಬೇರಾದರೂ ಆತ್ಮಹತ್ಯೆಗೆ ಮುಂದಾಗಬಹುದಾದವರನ್ನು ಗುರುತಿಸಿ ಫೇಸ್ ಬುಕ್ ನಲ್ಲಿ ಅಳವಡಿಸಲಾಗಿರುವ ನೂತನ ಟೂಲ್ ನಲ್ಲಿನ ಬಾಣದ ಗುರುತನ್ನು ಒತ್ತಿದರೆ ಕೂಡಲೇ ಫೇಸ್ ಬುಕ್ ಆ ಖಾತೆದಾರರ ಫ್ರೆಂಡ್ಸ್ ಲಿಸ್ಟ್ ನಲ್ಲಿರುವ ಅಷ್ಟೂ ಮಂದಿಗೆ ಅಲರ್ಟ್ ಸಂದೇಶ ರವಾನಿಸುತ್ತದೆ. ಫೇಸ್ ಬುಕ್ ನ ವಿನೂತನ ಕಾರ್ಯಕ್ಕೆ ಅಮೆರಿಕದ ನ್ಯಾಷನಲ್ ಸ್ಯೂಸೈಡ್ ಪ್ರಿವೆಂಷನ್ ಲೈಫ್ ಲೈನ್ ಸಂಸ್ಥೆ ಸಾಥ್ ನೀಡುತ್ತಿದ್ದು, ಇದು 24 ಗಂಟೆಗಳ ನಿರಂತರ ಟೋಲ್ ಫ್ರೀ ನಂಬರ್ ಅನ್ನು ಕೂಡ ಅಸ್ತಿತ್ವಕ್ಕೆ ತಂದಿದೆ. ಸಂಸ್ಥೆಯ ಟೋಲ್ ಫ್ರೀ ನಂಬರ್  1-800-273-TALK (8255) ಕ್ಕೆ ಕರೆ ಮಾಡಬಹುದಾಗಿದೆ. ಅಥವಾ ನ್ಯಾಷನಲ್ ಸ್ಯೂಸೈಡ್ ಪ್ರಿವೆಂಷನ್ ಲೈಫ್ ಲೈನ್ ಸಂಸ್ಥೆಯ ವೆಬ್ ಸೈಟ್ suicidePreventionlifeline.org ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ಇಲ್ಲಿ ಮಾಹಿತಿ ನೀಡುವವರ ಕುರಿತು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವವರ ಕುರಿತು ಫೇಸ್ ಬುಕ್ ಆಗಲಿ ಅಥವಾ ನ್ಯಾಷನಲ್ ಸ್ಯೂಸೈಡ್ ಪ್ರಿವೆಂಷನ್ ಲೈಫ್ ಲೈನ್ ಸಂಸ್ಥೆಯಾಗಲಿ ಯಾವುದೇ ಕಾರಣಕ್ಕೂ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಥವಾ ಆತ್ಮಹತ್ಯೆ ಮಾಡಿಕೊಳ್ಳ ಬಯಸುವ ವ್ಯಕ್ತಿ ಕುರಿತು ಮಾಹಿತಿ ನೀಡ ಬಯಸುವ ವ್ಯಕ್ತಿ ಮಾಹಿತಿಯನ್ನು ತೀರಾ ಗೌಪ್ಯವಾಗಿ ಇಡಲಾಗುತ್ತದೆ ಎಂದು ಫೇಸ್ ಬುಕ್ ಭರವಸೆ ನೀಡಿದೆ.

ಪ್ರಸ್ತುತ ಫೇಸ್ ಬುಕ್ ನ ವಿನೂತನ ಸೇವೆ ಅಮೆರಿಕದಲ್ಲಿ ಮಾತ್ರ ಲಭ್ಯವಾಗಲಿದ್ದು, ವಿಶ್ವದ ಇತರೆ ದೇಶಗಳಲ್ಲಿ ಅಳವಡಿಸುವ ಕುರಿತು ಫೇಸ್ ಬುಕ್ ತಜ್ಞರು ಮಗ್ನರಾಗಿದ್ದಾರೆ. ಈಗಾಗಲೇ ಈ ಕುರಿತ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಫೇಸ್ ಬುಕ್ ತಿಳಿಸಿದೆ.

ಒಟ್ಟಾರೆ ನಿಮ್ಮ ಆಪ್ತರು ಅಥವಾ ಸ್ನೇಹಿತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೊರಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳ ಬಯಸುವವರ ಮಾನಸಿಕ ಸ್ಥಿತಿಯನ್ನೇ ಬದಲಿಸಿದರೆ ಒಳಿತಲ್ಲವೇ..! prevention is better than cure ಅಂತಾರಲ್ಲ ಹಾಗೆ...

- ಶ್ರೀನಿವಾಸ ಮೂರ್ತಿ ವಿಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com