ವಾಷಿಂಗ್ ಟನ್: ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುವ ಭಯೋತ್ಪಾದಕ ಸಂಘಟನೆಗಳ ಮಾಹಿತಿಯ ಮಾದರಿಯ ಬಗ್ಗೆ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಹರಡುವ ಮಾಹಿತಿ, ಹಾಗೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ಜನರ ಗುಂಪುಗಳ ಬಗ್ಗೆ ಅಧ್ಯಯನ ನಡೆಯಲಿದೆ.
ಅರಿಜೋನ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಅಧ್ಯಯನ ನಡೆಯುತ್ತಿದ್ದು, ವಿಧ್ವಂಸಕ ಕೃತ್ಯ, ಹಿಂಸೆಯನ್ನು ಅಂತರ್ಜಾಲದಲ್ಲಿ ಉತ್ತೇಜಿಸುವ ಉಗ್ರಗಾಮಿಗಳ ಜಾಲವನ್ನು ಪತ್ತೆಮಾಡುವುದಕ್ಕೆ ಸಹಕಾರಿಯಾಗಲಿದೆ ಎಂದು ವಾಷಿಂಗ್ ಟನ್ ನ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಇಸೀಸ್ ನಂತಹ ಉಗ್ರ ಸಂಘಟನೆಗಳು ತಾವು ವಾಸಿಸುವ ಸಮಾಜದಿಂದ ದೂರದಲ್ಲಿದ್ದೇವೆ ಎಂದು ಭಾವಿಸುತ್ತಾರೆ. ಪಾಶ್ಚಾತ್ಯ ರಾಷ್ಟ್ರಗಳಿಂದ ಹೊಸ ತಂಡಗಳನ್ನು ನೇಮಕ ಮಾಡಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಅಧ್ಯಯನದಲ್ಲಿ ನಿರತರಾಗಿರುವ ಸಂಶೋಧಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸಮಾಜದಿಂದ ದೂರ ಸರಿದಿರುವ ವ್ಯಕ್ತಿಗಳು ಪ್ರಚಾರದ ಸಾಂಪ್ರದಾಯಿಕ ರೂಪಗಳಿಗಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣದ ಚಿತ್ರಗಳಿಗೆ ಬಲಿಯಾಗುತ್ತಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುವ ಭಯೋತ್ಪಾದಕ ಸಂಸ್ಥೆಗಳ ಮಾಹಿತಿಯ ಮಾದರಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ.