
ಖ್ಯಾತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ಹೊಸ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದ್ದು, ಈ ಆ್ಯಪ್ ನ ಸಹಾಯದಿಂದ ಬಗೆ ಬಗೆಯ ಚಿತ್ರಗಳನ್ನು ಒಟ್ಟುಗೂಡಿಸಿ ಒಂದೇ ಚಿತ್ರವನ್ನಾಗಿ ಪರಿವರ್ತಿಸಬಹುದಾಗಿದೆ.
ಈ ಹೊಸ ಆ್ಯಪ್ ಗೆ ಲೇಔಟ್ ಎಂದು ಹೆಸರಿಡಲಾಗಿದ್ದು, ಈ ನೂತನ ಆ್ಯಪ್ ನ ಸಹಾಯದಿಂದ ಬಳಕೆದಾರರು ತಾವು ತೆಗೆದ ವಿವಿಧ ಭಾವಚಿತ್ರಗಳನ್ನು ಒಟ್ಟುಗೂಡಿಸಿ ಒಂದೇ ಭಾವಚಿತ್ರವನ್ನಾಗಿ ಪರಿವರ್ತಿಸಬಹುದಾಗಿದೆ. ಇನ್ನು ಇದರಲ್ಲಿರುವ ವಿವಿಧ ಬಗೆಯ ಲೇಔಟ್ ಗಳನ್ನು ಬಳಕೆ ಮಾಡಿಕೊಂಡು ಭಾವಚಿತ್ರಗಳನ್ನು ನಮ್ಮ ಇಚ್ಛೆಗನುಸಾರವಾಗಿ ಜೋಡಣೆ ಮತ್ತು ಆ ಭಾವಚಿತ್ರಗಳ ಅಳತೆ, ಆಕಾರವನ್ನು ಬದಲಿಸಬಹುದಾಗಿದೆ. ಫೇಸಸ್ (Faces) ಎಂಬ ಟೂಲ್ ಅನ್ನು ಬಳಕೆ ಮಾಡಿಕೊಂಡು ನಮ್ಮ ಕ್ಯಾಮೆರಾದಲ್ಲಿರುವ ಅಷ್ಟೂ ಫೋಟೋಗಳನ್ನು ಒಮ್ಮೆಲೆ ವಿಕ್ಷಿಸಬಹುದಾಗಿದೆ.
ಈ ಟೋಲ್ ನ ಸಹಾಯದಿಂದ ನಾವು ಹಾಕಬೇಕು ಎಂದುಕೊಂಡ ಫೋಟೋಗಳನ್ನು ಹುಡುಕಾಡುವ ಕಷ್ಟ ಬಳಕೆದಾರರಿಗೆ ತಪ್ಪುತ್ತದೆ. ಇನ್ನು ಫೋಟೋ ಬೂತ್ ಎಂಬ ಟೂಲ್ ಆಯಾ ಭಾವ ಚಿತ್ರಗಳನ್ನು ತೆಗೆದ ದಿನಾಂಕದ ಆಧಾರದ ಮೇಲೆ ವಿಂಗಡಿಸುತ್ತದೆ. ಇದರಿಂದ ಚಿತ್ರಗಳನ್ನು ತೆಗೆದ ದಿನಾಂಕ ಮತ್ತು ಆ ದಿನದ ವಿಶೇಷಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದಾಗಿದೆ. ಪ್ರಸ್ತುತ ಈ ಆ್ಯಪ್ ಐಒಎಸ್ ಮೊಬೈಲ್ ಗಳಲ್ಲಿ ಮಾತ್ರ ಬಳಕೆಯಾಗಲಿದ್ದು, ಮುಂದಿನ ದಿನಗಳಲ್ಲಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೂ ಲಭಿಸುವಂತೆ ಮಾಡುತ್ತೇವೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಫೇಸ್ ಬುಕ್ ಮಾಲೀಕತ್ವದ ಇನ್ ಸ್ಟಾಗ್ರಾಮ್ ಯುವ ಪೀಳಿಗೆಯ ಮನಗೆದ್ದಿದ್ದು, ಪ್ರಸ್ತುತ ಇನ್ ಸ್ಟಾಗ್ರಾಮ್ ಬಿಡುಗಡೆ ಮಾಡಿರುವ ಆ್ಯಪ್ 2ನೇ ಆ್ಯಪ್ ಆಗಿದೆ. ಈ ಹಿಂದೆ ಟೈಮ್ ಲ್ಯಾಪ್ಸ್ ವಿಡಿಯೋಗಳ ತಯಾರಿಗಾಗಿ ಹೈಪರ್ ಲ್ಯಾಪ್ಸ್ ಎಂಬ ಆ್ಯಪ್ ಅನ್ನು ಇನ್ ಸ್ಟಾಗ್ರಾಮ್ ಹೊರತಂದಿತ್ತು.
Advertisement