ಗುರುಗ್ರಹದ ಕಕ್ಷೆ ಸೇರಿದ ಜುನೋ ಬಾಹ್ಯಾಕಾಶ ನೌಕೆ (ನಾಸಾ ಚಿತ್ರ)
ಗುರುಗ್ರಹದ ಕಕ್ಷೆ ಸೇರಿದ ಜುನೋ ಬಾಹ್ಯಾಕಾಶ ನೌಕೆ (ನಾಸಾ ಚಿತ್ರ)

ಯಶಸ್ವಿಯಾಗಿ ಗುರು ಗ್ರಹದ ಕಕ್ಷೆ ಸೇರಿದ "ಜುನೋ" ಬಾಹ್ಯಾಕಾಶ ನೌಕೆ

ಗುರು ಗ್ರಹ ಕುರಿತ ಸಂಶೋಧನೆಗಾಗಿ ಐದು ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ "ಜುನೋ" ಗಗನ ನೌಕೆ ಮಂಗಳವಾರ ಯಶಸ್ವಿಯಾಗಿ ಗುರು ಗ್ರಹದ ಕಕ್ಷೆ ಸೇರಿದೆ ಎಂದು ತಿಳಿದುಬಂದಿದೆ...
Published on

ವಾಷಿಂಗ್ಟನ್: ಗುರು ಗ್ರಹ ಕುರಿತ ಸಂಶೋಧನೆಗಾಗಿ ಐದು ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ "ಜುನೋ" ಗಗನ ನೌಕೆ ಮಂಗಳವಾರ ಯಶಸ್ವಿಯಾಗಿ  ಗುರು ಗ್ರಹದ ಕಕ್ಷೆ ಸೇರಿದೆ ಎಂದು ತಿಳಿದುಬಂದಿದೆ.

ನಾಸಾದ ಈ ವರೆಗಿನ ಅತ್ಯಂತ ಕಠಿಣ ಯೋಜನೆ ಎಂದೇ  ಬಣ್ಣಿಸಲಾಗುತ್ತಿದ್ದ ಜುನೋ ಗಗನ ನೌಕೆ ಯೋಜನೆ ಇಂದು ಗುರುಗ್ರಹದ ಕಕ್ಷೆ ಸೇರುವ ಮೂಲಕ ಯಶಸ್ವಿಯಾಗಿದ್ದು, ಜುನೋ ಗಗನ  ನೌಕೆ ಕಳೆದ ಐದು ವರ್ಷಗಳಲ್ಲಿ ಬರೊಬ್ಬರಿ 280 ಕೋಟಿ ಕಿ.ಮೀ. ಪ್ರಯಾಣ ಮಾಡಿದೆ. ಬಾಹ್ಯಾಕಾಶ ನೌಕೆಯೊಂದರ ಸುದೀರ್ಘ ಪ್ರಯಾಣ ಇದಾಗಿದ್ದು, ಸೌರಶಕ್ತಿ ಚಾಲಿತ ನೌಕೆ ಎಂಬ ಖ್ಯಾತಿ  ಪಡೆದಿದ್ದ ಜುನೋ ಗಗನ ನೌಕೆ ಇಂದು ಬೆಳಗ್ಗೆ 10.30ರ ವೇಳೆಗೆ ಯಶಸ್ವಿಯಾಗಿ ಗುರುಗ್ರಹದ ಕಕ್ಷೆ ಸೇರಿದೆ.

ಇಂದಿನಿಂದ ಸುಮಾರು ಒಂದು ವರ್ಷಗಳ ಕಾಲ ಜುನೋ ಗಗನೌಕೆ ಗುರುಗ್ರಹವನ್ನು ಪ್ರದಕ್ಷಿಣೆ ಹಾಕಿ, ಗುರುಗ್ರಹದ ಅಪರೂಪದ ಛಾಯಾಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಲಿದೆ. ಆ  ಮೂಲಕ ಗುರು ಗ್ರಹದ ವಾತಾವರಣೆ ಸಂಶೋಧನೆಗೆ ಇದು ಸಹಕಾರಿಯಾಗಲಿದೆ. ಗುರು ಗ್ರಹದ ವಾತಾವರಣ ಬಹುತೇಕ ಜಲಜನಕ ಮತ್ತು ಹೀಲಿಯಂ ಮುಂತಾದವುಗಳಿಂದಲೇ ಕೂಡಿದ್ದು,  ಮಂಗಳ ಗ್ರಹಕ್ಕೆ ಸಮೀಪದಲ್ಲಿರುವ ಈ ಗುರು ಗ್ರಹ ಸೌರ ಮಂಡಲದ ಐದನೇ ಗ್ರಹವಾಗಿದೆ. ಗುರುಗ್ರಹದ ಕಕ್ಷೆ ಸೇರಿರುವ "ಜುನೋ" ನೌಕೆ ಆ ಗ್ರಹದಲ್ಲಿ ನೀರಿನ ಅಂಶ ಸೇರಿದಂತೆ ಮೇಲ್ಮೈ  ವಾತಾವರಣ ಸೇರಿದಂತೆ ಹಲವು ಅಂಶಗಳ ಕುರಿತು ಪತ್ತೆ ಹಚ್ಚುವ ಪ್ರಯತ್ನ ಮಾಡಲಿದೆ.

ಸೌರ ಮಂಡಲ ರಚನೆ ಹಾಗೂ ಗುರುಗ್ರಹದ ರಚನೆ ಹೇಗಾಯ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಜುನೋ ನೌಕೆ ಕಳುಹಿಸುವ ಚಿತ್ರ ಹಾಗೂ ದತ್ತಾಂಶಗಳು ಸಹಕಾರಿಯಾಗಲಿವೆ. ಈ  ಯೋಜನೆಗಾಗಿ ನಾಸಾ ಬರೊಬ್ಬರಿ 110 ಕೋಟಿ ಡಾಲರ್ ವೆಚ್ಚ ಮಾಡಿದ್ದು, ಒಂದು ವರ್ಷಗಳ ನಿರಂತರ ಅಧ್ಯಯನದ ಬಳಿಕ ಈ ನೌಕೆಯು 2018ರ ವೇಳೆಗೆ ಗುರುಗ್ರಹದ ಚಂದ್ರನಿಗೆ ಡಿಕ್ಕಿ  ಹೊಡೆದು ನಾಶವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com