ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಇಸ್ರೋ ಸಜ್ಜು

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದ್ದು, ಗೂಗಲ್ ನಿರ್ಮಿತ ಉಪಗ್ರಹ ಸೇರಿ ಏಕಕಾಲಕ್ಕೆ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಉಡಾವಣೆಗೆ ಸಜ್ಜಾಗಿರುವ ಪಿಎಸ್ ಎಲ್ ವಿ-ಸಿ34 ವಾಹಕ (ಚಿತ್ರಕೃಪೆ-ಇಸ್ರೋ)
ಉಡಾವಣೆಗೆ ಸಜ್ಜಾಗಿರುವ ಪಿಎಸ್ ಎಲ್ ವಿ-ಸಿ34 ವಾಹಕ (ಚಿತ್ರಕೃಪೆ-ಇಸ್ರೋ)

ಶ್ರೀಹರಿಕೋಟಾ: ಮೊಟ್ಟ ಮೊದಲ ರೆಕ್ಕೆ ಸಹಿತ ಗಗನನೌಕೆಯನ್ನು ಪರೀಕ್ಷಿಸಿ ಇಡೀ ವಿಶ್ವವೇ ಅಚ್ಚರಿಯಿಂದ ನೋಡುವಂತೆ ಮಾಡಿದ್ದ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದ್ದು, ಗೂಗಲ್ ನಿರ್ಮಿತ ಉಪಗ್ರಹ ಸೇರಿ ಏಕಕಾಲಕ್ಕೆ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಏಕಕಾಲಕ್ಕೆ ಬರೊಬ್ಬರಿ 20 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕಿಗೆ  ಪಾತ್ರವಾಗಲಿದೆ. ಆ ಮೂಲಕ ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೇರಲಿದೆ. 2008ರಲ್ಲಿ ಒಂದೇ ರಾಕೆಟ್ ಮೂಲಕ 10  ಉಪಗ್ರಹಗಳ ಉಡಾವಣೆ ಮಾಡಿದ್ದ ಇಸ್ರೋ, ಜೂನ್ 22ರಂದು ಅಂದರೆ ನಾಳೆ ಆಂಧ್ರಪ್ರದೇಶ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 20 ಉಪಗ್ರಹಗಳ  ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.

ಈ ಹಿಂದೆ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿದ ದಾಖಲೆ ರಷ್ಯಾ ಹೆಸರಲ್ಲಿದ್ದು, ರಷ್ಯಾದ ಡ್ನೆಪರ್ ಸಿಲೋ ರಾಕೆಟ್ ಮೂಲಕ 2014ರ ಜೂನ್ 19  ರಂದು 33 ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು 2013ರ ನವೆಂಬರ್‌ನಲ್ಲಿ 32 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದರಲ್ಲಿ 5 ಕಿಲೋದಿಂದ  ಹಿಡಿದು 100 ಕಿಲೋಗ್ರಾಂವರೆಗೆ ತೂಕವಿರುವ ಉಪಗ್ರಹಗಳಿದ್ದವು.

ಪಿಎಸ್‌ಎಲ್‌ವಿ-ಸಿ34 ಮೂಲಕ ಉಡಾವಣೆ
ಭಾರತದ ಅತ್ಯಂತ ಯಶಸ್ವೀ ಉಡಾವಣಾ ನೌಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‌ಎಲ್‌ವಿ)-ಸಿ34 ಉಡಾವಣಾ ವಾಹಕದಿಂದ ಉಪಗ್ರಹಗಳ ಉಡಾವಣೆ ನಡೆಯಲಿದ್ದು,  ಕಾರ್ಟೋಸ್ಯಾಟ್-2ಸಿ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಎರಡು ಉಪಗ್ರಹಗಳು, 17 ವಿದೇಶಿ ಮತ್ತು ವಾಣಿಜ್ಯ ಉಪಗ್ರಹಗಳ ಉಡಾವಣೆ ಮಾಡಲಿದೆ.  ಇದರಲ್ಲಿ ಖ್ಯಾತ ಅಂತರ್ಜಾಲ ಶೋಧ ಸಂಸ್ಥೆ ಗೂಗಲ್ ನಿರ್ಮಿತ ಉಪಗ್ರಹ ಕೂಡ ಸೇರಿದಂತೆ ಇದರಲ್ಲಿ ಲಘು ಮತ್ತು ನ್ಯಾನೋ ಉಪಗ್ರಹಗಳೂ ಸೇರಿವೆ. ಉಪಗ್ರಹಗಳ ಒಟ್ಟು ತೂಕ 1,288 ಕೆಜಿ  ಆಗಿದ್ದು, ಉಡಾವಣೆ 26 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ.

ಮಾಹಿತಿ ಕ್ರಾಂತಿ ಸೃಷ್ಟಿಸಲಿರುವ ಕಾರ್ಟೋಸ್ಯಾಟ್-2ಸಿ
ಇಸ್ರೋ 2007ರಲ್ಲಿ ಉಡಾವಣೆ ಮಾಡಿರುವ ಕಾರ್ಟೋಸ್ಯಾಟ್-2ಎ ಗೆ ಹೋಲಿಸಿದರೆ ಕಾರ್ಟೋಸ್ಯಾಟ್ 2ಸಿ ಉಪಗ್ರಹ ಮಾಹಿತಿ ಕ್ರಾಂತಿಯನ್ನೇ ಸೃಷ್ಟಿಸಲಿದೆ. ಬಾಹ್ಯಾಕಾಶದಿಂದ ಭೂಮಿಯ  ಮೇಲೆ ನಿಗಾವಹಿಸಲಿರುವ ಈ ಉಪಗ್ರಹ ಗಡಿಭಾಗ ಹಾಗೂ ಕರಾವಳಿ ಪ್ರದೇಶ, ಹವಾಮಾನ, ಕೃಷಿ, ಭೂ ನಕ್ಷೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಲೆ  ಸೃಷ್ಟಿಸಲಿದ್ದು, ನೆರೆರಾಷ್ಟ್ರಗಳಿಂದ ಕ್ಷಿಪಣಿ ಉಡಾವಣೆ ಮಾಡಿದರೂ ಇದು ಮಾಹಿತಿ ನೀಡಲಿದೆ. ಇದನ್ನು ಅಹಮದಾಬಾದ್‌ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್(ಎಸ್‌ಎಸಿ)ನಲ್ಲಿ ನಿರ್ಮಿಸಲಾಗಿದ್ದು,  690 ಕಿಲೋ ತೂಕವಿದೆ.

ಇದು ಹೈ ರೆಸಲೂಷನ್‌ನ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 0.65 ರೆಸಲೂಷನ್‌ನ ಪ್ಯಾಂಕ್ರೋಮ್ಯಾಟಿಕ್  ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ -ಟೋ ಮಾತ್ರವಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಂಪ್ರೆಸ್ ಮಾಡಿ, ಶೇಖರಿಸಲು ಹಾಗೂ ರವಾನಿಸುವುದಕ್ಕೆ ಕೂಡ ಅವಕಾಶ  ಕಲ್ಪಿಸಲಾಗಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ಉಪಗ್ರಹಗಳಿಗೆ ಸರಿಸಮವಾಗಿರುವ ಕಣ್ಗಾವಲು ಉಪಗ್ರಹ ಉಡಾವಣೆ ಮಾಡಿದ ಕೀರ್ತಿ ಭಾರತದ್ದಾಗಲಿದೆ. ಚೀನಾ 2014ರಲ್ಲೇ 0.65  ರೆಸಲ್ಯೂಷನ್ ಕ್ಯಾಮೆರಾ ಹೊಂದಿರುವ ‘ಯೋಗಾನ್ 24’ ಉಪಗ್ರಹ ಉಡಾವಣೆ ಮಾಡಿತ್ತು. ಈಗಾಗಲೇ ಉಪಗ್ರಹವನ್ನು ಇಸ್ರೋ ಕೇಂದ್ರಕ್ಕೆ ಕಳುಹಿಸಲಾಗಿದ್ದು ಎಲ್ಲ ಪರೀಕ್ಷೆಗಳ ಬಳಿಕ  ಉಡಾವಣೆಗೆ ಸಿದ್ಧತೆ ನಡೆಸಲಾಗಿದೆ.

ನಾಳೆ ಉಡಾವಣೆಯಾಗಲಿರುವ ಕಾರ್ಟೋಸ್ಯಾಟ್-2ಸಿ ಜತೆಗೆ ವಿದ್ಯಾರ್ಥಿಗಳು ನಿರ್ಮಿಸಿರುವ ಎರಡು ನ್ಯಾನೋ ಉಪಗ್ರಹಗಳು ಉಡಾವಣೆಯಾಗಲಿದ್ದು, ಇದರಲ್ಲಿ ಚೆನ್ನೈನ ಸತ್ಯಭಾಮ ವಿವಿಯ  ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿರುವ ಸತ್ಯಭಾಮಸ್ಯಾಟ್ 1.6 ಕಿಲೋ ತೂಕದ್ದಾಗಿದೆ. ಇದು ಗಾಳಿ ಮತ್ತು ಭೂಮಿಯ ಮಾಲಿನ್ಯ ಪ್ರಮಾಣ ಅಧ್ಯಯನ ನಡೆಸಲಿದೆ. ಇನ್ನು ಪುಣೆಯ  ಕಾಲೇಜ್ ಆಫ್‌ ಇಂಜಿನಿಯರಿಂಗ್ ನಿರ್ಮಿಸಿರುವ ‘ಸ್ವಯಂ’ ಕೂಡಾ ಇದೇ ವೇಳೆ ಉಡಾವಣೆಯಾಗಲಿದ್ದು, ಒಂದು ಕಿಲೋ ತೂಕ ಹೊಂದಿದೆ. ಇದು ಹವ್ಯಾಸಿ ರೇಡಿಯೋ ಸ್ಟೇಷನ್‌ಗಳಿಗೆ  ಮೆಸೇಜಿಂಗ್ ಸರ್ವೀಸ್ ಒದಗಿಸಲಿದೆ. ಇದೇ ಮೊದಲ ಬಾರಿ ದೇಶದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿರುವ ಉಪಗ್ರಹಗಳನ್ನು ಉಡಾಯಿಸಲಾಗುತ್ತಿದೆ.

ವಿದೇಶಿ ಉಪಗ್ರಹಗಳ ಸಾಥ್
ಸ್ವದೇಶಿ ನಿರ್ಮಿತ ಮೂರು ಉಪಗ್ರಹಗಳ ಹೊರತಾದಂತೆ ಇಸ್ರೋ ಅಮೆರಿಕ, ಕೆನಡಾ, ಜರ್ಮನಿ, ಇಂಡೋನೇಷ್ಯಾದ ಮೈಕ್ರೋ ಉಪಗ್ರಹಗಳ ಉಡಾವಣೆಯನ್ನೂ ಮಾಡಲಿದೆ.  ಇಂಡೋನೇಷ್ಯಾದ ಎಲ್‌ಎಪಿಎಎನ್ ಎ3 ಆಹಾರ ಸಂಪನ್ಮೂಲ ಮತ್ತು ಪರಿಸರ ಮೇಲ್ವಿಚಾರಣೆಗೆ ಸಂಬಂಧಿಸಿದ ಉಪಗ್ರಹವಾಗಿದೆ. ಜರ್ಮನಿಯ ಬಿಐಆರ್‌ಒಎಸ್ ಅನ್ನು ಅಧಿಕ ತಾಪಮಾನದ  ಘಟನೆಗಳನ್ನು ಉದಾಹರಣೆಗೆ ಕಾಡ್ಗಿಚ್ಚು ಮೊದಲಾದವುಗಳನ್ನು ಪತ್ತೆಹಚ್ಚಲು ಅಭಿವೃದ್ಧಿಪಡಿಸಲಾಗಿದೆ, ಕೆನಡಾದ ಎಂ3ಎಂಸ್ಯಾಟ್ ಸಮುದ್ರಮಾರ್ಗದ ವಹಿವಾಟಿಗೆ ಅನುಕೂಲವಾಗಿರಲಿದ್ದು,  ತೆರೆಗಳ ಅಪ್ಪಳಿಸುವಿಕೆ ಮುಂತಾದವುಗಳ ಬಗ್ಗೆ ಮಾಹಿತಿ ರವಾನಿಸಲಿದೆ. ಅಮೆರಿಕದ ಸ್ಕೈಸ್ಯಾಟ್ ಜೆನ್2-1 ಮತ್ತು ಜರ್ಮನಿಯ ಎಂವಿವಿಯನ್ನು ಉಡಾಯಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com