ಸಮುದ್ರದ ನೀರನ್ನು ಕುಡಿಯಲು ಯೋಗ್ಯ ಮಾಡಿದ ಭಾರತೀಯ ವಿಜ್ಞಾನಿಗಳು

ಒಂದೆಡೆ ದೇಶದ 13 ರಾಜ್ಯಗಳು ಕುಡಿಯಲು ನೀರಿಲ್ಲದೇ ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದರೆ, ಅತ್ತ ನಮ್ಮ ಭಾರತೀಯ ವಿಜ್ಞಾನಿಗಳು ಸಮುದ್ರದ ನೀರನ್ನೇ ಕುಡಿಯಲು ಯೋಗ್ಯವಾಗಿಸುವಂತಹ ಮಾರ್ಗವನ್ನು ಕಂಡುಕೊಂಡಿದ್ದಾರೆ..
ಬಾಬಾ ಅಣುಶಕ್ತಿ ಕೇಂದ್ರದ ನೀರು ಶುದ್ಧೀಕರಣ ಘಟಕ (ಸಂಗ್ರಹ ಚಿತ್ರ)
ಬಾಬಾ ಅಣುಶಕ್ತಿ ಕೇಂದ್ರದ ನೀರು ಶುದ್ಧೀಕರಣ ಘಟಕ (ಸಂಗ್ರಹ ಚಿತ್ರ)

ಮುಂಬೈ: ಒಂದೆಡೆ ದೇಶದ 13 ರಾಜ್ಯಗಳು ಕುಡಿಯಲು ನೀರಿಲ್ಲದೇ ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದರೆ, ಅತ್ತ ನಮ್ಮ ಭಾರತೀಯ ವಿಜ್ಞಾನಿಗಳು ಸಮುದ್ರದ ನೀರನ್ನೇ ಕುಡಿಯಲು ಯೋಗ್ಯವಾಗಿಸುವಂತಹ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಭಾರತೀಯ ವಿಜ್ಞಾನಿಗಳ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ತಮಿಳುನಾಡಿನ ಕಲ್ಪಕಂನಲ್ಲಿರುವ ಬಾಬಾ ಅಣು ಶಕ್ತಿ ಕೇಂದ್ರದ ವಿಜ್ಞಾನಿಗಳು ಸಮುದ್ರ ಉಪ್ಪು ನೀರನ್ನು ಶುದ್ಧೀಕರಿಸುವ ಪೈಲಟ್ ಪ್ಲಾಂಟ್ ನಿರ್ಮಿಸಿದ್ದು, ಈ ಪೈಲಟ್ ಪ್ಲಾಂಟ್ ಮೂಲಕ ಪ್ರತಿನಿತ್ಯ ಲಕ್ಷಾಂತರ ಲೀಟರ್ ಸಮುದ್ರದ ನೀರನ್ನು ಸಾಮಾನ್ಯ ಕುಡಿಯುವ ನೀರನ್ನಾಗಿ ಪರಿವರ್ತಿಸುತ್ತಿದ್ದಾರೆ. ವಿಜ್ಞಾನಿಗಳು ಅಣುಶಕ್ತಿ ಕೇಂದ್ರ ಹೋರಹೋಗುವ ನಿರುಪಯುಕ್ತ ಹಬೆಯನ್ನು ಬಳಕೆ ಮಾಡಿ ಈ ನೀರನ್ನು ಶುದ್ದೀ ಕರಿಸುತ್ತಿದ್ದು, ಪ್ರತಿ ನಿತ್ಯ ಸುಮಾರು 63 ಲಕ್ಷ ಲೀಟರ್ ನೀರನ್ನು ಶುದ್ದೀಕರಣ ಮಾಡಿ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದು ಮೊದಲ ಬಾರಿಗೆ ಯಶಸ್ವಿಯಾಗಿದ್ದೇ ತಡ ಇಂತಹದ್ದೇ ಮತ್ತಷ್ಟು ನೀರಿನ ಶುದ್ಧೀಕರಣ ಘಟಕಗಳನ್ನು ಪಂಜಾಬ್, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ಅಳವಡಿಸಲಾಗಿದೆ ಎಂದು ಮುಂಬೈನ ಬಾಬಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಕೆಎನ್ ವ್ಯಾಸ್ ಹೇಳಿದ್ದಾರೆ.

ಸಮುದ್ರದ ನೀರಷ್ಟೇ ಅಲ್ಲ ಆರ್ಸೆನಿಕ್ ಮಿಶ್ರಿತ ನೀರನ್ನು ಶುದ್ದೀಕರಿಸುವ ಪೈಲಟ್ ಪ್ಲಾಂಟ್
ಇನ್ನು ಭಾರತೀಯ ವಿಜ್ಞಾನಿಗಳು ಸಂಶೋಧಿಸಿರುವ ಈ ನೀರು ಶುದ್ಧೀಕರಣ ಘಟಕ ಕೇವಲ ಕಲುಷಿತ ನೀರಷ್ಟೇ ಅಲ್ಲ, ಅಣು ಶಕ್ತಿ ಕೇಂದ್ರದಿಂದ ಹೊರಬೀಳುವ ಯುರೇನಿಯಮ್ ಮತ್ತು ಆರ್ಸೆನಿಕ್ ನಿಂದ ಕಲುಷಿತವಾದ ಅಂತರ್ಜಲವನ್ನು ಕೂಡ ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಲಾಗುತ್ತದೆ. ಇದಕ್ಕೆ ತಗುಲುವ ಖರ್ಚು ಕೂಡ ಕಡಿಮೆ ಎಂದು ವ್ಯಾಸ್ ತಿಳಿಸಿದ್ದಾರೆ.

ಬರ ಪೀಡಿತ ಪ್ರದೇಶದಲ್ಲಿ ವಿಜ್ಞಾನಿಗಳ ಶುದ್ದೀಕರಣ ಯಂತ್ರ
ಇನ್ನು ಬಾಬಾ ಅಣು ಶಕ್ತಿ ಕೇಂದ್ರ ವಿಜ್ಞಾನಿಗಳು ಸಿದ್ಧಪಡಿಸಿರುವ ಈ ನೀರಿನ ಫಿಲ್ಟರ್ ಗಳನ್ನು ನ್ನು ಬರಪೀಡಿತ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ.

ಒಟ್ಟಾರೆ ಕುಡಿಯುವ ನೀರಿನ ಕೊರತೆಯಂತಹ ಗಂಭೀರ ಸಮಸ್ಯೆಗೆ ಭಾರತೀಯ ವಿಜ್ಞಾನಿಗಳು ಪರಿಹಾರ ಕಂಡುಹಿಡಿದಿದ್ದು, ವಿಜ್ಞಾನಿಗಳ ತೆರೆಮರೆ ಕಸರತ್ತು ಇದೀಗ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com