ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣೆ: ಇಸ್ರೋ ವಿಜ್ಞಾನಿಗಳ ಮನದಲ್ಲಿ ದುಗುಡ!

ಇಡೀ ಜಗತ್ತೇ ಭಾರತ್ತದತ್ತ ಮುಖ ಮಾಡಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಉಡಾವಣೆಗೆ ಸಜ್ಜಾಗಿರುವಂತೆಯೇ ವಿಜ್ಞಾನಿಗಳ ಮನದಲ್ಲಿ ಮಾತ್ರ ದುಗುಡವೊಂದು ಮನೆ ಮಾಡಿದಂತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀಹರಿಕೋಟಾ: ಇಡೀ ಜಗತ್ತೇ ಭಾರತ್ತದತ್ತ ಮುಖ ಮಾಡಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಉಡಾವಣೆಗೆ ಸಜ್ಜಾಗಿರುವಂತೆಯೇ ವಿಜ್ಞಾನಿಗಳ ಮನದಲ್ಲಿ ಮಾತ್ರ ದುಗುಡವೊಂದು ಮನೆ ಮಾಡಿದಂತಿದೆ.

ಹೌದು...ಇಸ್ರೋದ ಬಹು ನಿರೀಕ್ಷಿತ ಬೃಹತ್ ಉಡಾವಣಾ ವಾಹಕ ಜಿಎಸ್ ಎಲ್ ವಿ ಮಾರ್ಕ್ 3 ಇಂದು ಉಡಾವಣೆಯಾಗುತ್ತಿದ್ದು, ತನ್ನೊಂದಿಗೆ ಜಿಸ್ಯಾಟ್ 19 ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ. ಆದರೆ ಇಸ್ರೋ ಸಂಸ್ಥೆಯ  ಇತಿಹಾಸವನ್ನು ಕೊಂಚ ಕೂಲಂಕುಷವಾಗಿ ಪರಿಶೀಲಿಸಿದರೆ ಇಂದಿನ ಉಡಾವಣೆ ಇಸ್ರೋ ಪಾಲಿಗೆ ಅತ್ಯಂತ ಪ್ರಮುಖವಾದದ್ದು ಮತ್ತು ಕಠಿಣವಾದದ್ದು ಎಂಬ ಅಂಶ ತಿಳಿಯುತ್ತದೆ. ಇಸ್ರೋ ಈ ವರೆಗೂ ಸಾಕಷ್ಟು ರಾಕೆಟ್ ಗಳನ್ನು  ಉಡಾಯಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆಯಾದರೂ, ಇಸ್ರೋ ಸಂಸ್ಥೆಯ ಪಾಲಿಗೆ ಕಪ್ಪು ಚುಕ್ಕೆಯೊಂದು ಹಾಗೆಯೇ ಉಳಿದುಕೊಂಡಿದೆ.

ಅದೇನೆಂದರೆ ಇಸ್ರೋ ಈವರೆಗೂ ಉಡಾಯಿಸಿರುವ ಬಹುತೇಕ ರಾಕೆಟ್ ಗಳು ಮೊದಲ ಪ್ರಯತ್ನದಲ್ಲಿ ವಿಫಲವಾಗಿದೆ. ಇದೇ ಇಂದು ಇಸ್ರೋ ವಿಜ್ಞಾನಿಗಳ ದುಗಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇಸ್ರೋ 1979ರಲ್ಲಿ ಮೊದಲ  ಬಾರಿಗೆ ತನ್ನ ಮೊದಲ ಉಡಾವಣಾ ವಾಹಕ ಎಸ್ ಎಲ್ ವಿ-3 ಯನ್ನು ಉಡಾವಣೆ ಮಾಡಿತ್ತು. ಆದರೆ ಅಂದಿನ ಉಡಾವಣೆ ತಾಂತ್ರಿಕ ದೋಷದಿಂದ ವಿಫಲವಾಗಿತ್ತು. ಬಳಿಕ ವಾಹಕದ ತಾಂತ್ರಿಕ ದೋಷ ಸರಿಪಡಿಸಿ ಮತ್ತೆ ಅದನ್ನು  ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಬಳಿಕ 1993ರಲ್ಲಿ ಇಸ್ರೋ ತನ್ನ ಮೊದಲ ಪೊಲಾರ್ ಸ್ಯಾಟಲೈಟ್ ವೆಹಿಕಲ್ (ಪಿಎಸ್ ಎಲ್ ವಿ) ರಾಕೆಟ್ ಅನ್ನು ಉಡಾಯಿಸಿತ್ತು. ಇದೂ ಕೂಡ ತನ್ನ ಪ್ರಥಮ ಉಡಾವಣೆಯಲ್ಲಿ ವಿಫಲವಾಗಿ  ಸಮುದ್ರಕ್ಕೆ ಬಿದ್ದಿತ್ತು. ಆದರೆ ಬಳಿಕ ನಡೆದ ಸುಮಾರು 39 ಉಡಾವಣೆಗಳು ಯಶಸ್ವಿಯಾಗಿತ್ತು. ಇನ್ನು 2001ರಲ್ಲಿ ನಡೆದ ಜಿಎಸ್ ಎಲ್ ವಿ ರಾಕೆಟ್ ಮೊದಲ ಉಡಾವಣೆ ಕೂಡ ವಿಫಲವಾಗಿತ್ತು. ಬಳಿಕ ನಡೆದ 11 ಉಡಾವಣೆಗಳು  ಯಶಸ್ವಿಯಾಗಿದೆ.

ಇಂದು ಉಡಾವಣೆಯಾಗುತ್ತಿರುವ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಗೂ ಕೂಡ ಇದು ಮೊದಲ ಉಡಾವಣೆಯಾಗಿದ್ದು, ಈ ಹಿಂದಿನ ಇತಿಹಾಸ ವಿಜ್ಞಾನಿಗಳ ದುಗುಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಸಕಾರಾತ್ಮಕ  ಅಂಶವೆಂದರೆ ಈ ಹಿಂದೆ ಇಸ್ರೋ ವಿಜ್ಞಾನಿಗಳು ರಾಕೆಟ್ ನ ಕ್ರಯೋಜನಿಕ್ ಎಂಜಿನ್ ಪರೀಕ್ಷೆ ನಡೆಸಿದ್ದರು. ಇದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಇದೇ ಕಾರಣಕ್ಕೆ ಇಂದು ನಡೆಯುವ ಜಿಎಸ್ ಎಲ್ ವಿಮಾರ್ಕ್ 3 ರಾಕೆಟ್  ಪರೀಕ್ಷೆ ಈ ಹಿಂದೆ ವೈಫಲ್ಯಗಳನ್ನು ಅಳಿಸಿ ಹಾಕುವುದಲ್ಲದೆ, ಇಸ್ರೋ ಸಂಸ್ಥೆಗೆ ಅಂಟಿಕೊಂಡಿದ್ದ ಕಪ್ಪುಚುಕ್ಕೆಯನ್ನು ತೊಡೆದು ಹಾಕುವ ವಿಶ್ವಾಸವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com