ಇಸ್ರೋ ದಾಖಲೆ: ಮೊದಲ ಪ್ರಯತ್ನದಲ್ಲೇ ಜಿಎಸ್‏ಎಲ್‏ವಿ ಮಾರ್ಕ್ 3 ಉಡಾವಣೆ ಯಶಸ್ವಿ

ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣಾ ವಾಹಕದ ಮೂಲಕ ಜಿಸ್ಯಾಟ್ 19 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿ ಇಸ್ರೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆ
ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಮೊದಲ ಪ್ರಯತ್ನದಲ್ಲಿ ರಾಕೆಟ್ ವಿಫಲವಾಗುತ್ತವೆ ಎಂಬ ಕಪ್ಪುಚುಕ್ಕೆಯನ್ನು ಇಸ್ರೋ ತೊಳೆದುಕೊಂಡಿದ್ದು, ಜಿಸ್ಯಾಟ್ 19 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣಾ ವಾಹಕ ಯಶಸ್ವಿಯಾಗಿ ಉಪಗ್ರಹವವನ್ನು ಕಕ್ಷೆಗೆ ಸೇರಿಸಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಇಂದು ಸಂಜೆ 5.28ಕ್ಕೆ ಉಡಾವಣೆಯಾಯಿತು. ಅಂತೆಯೇ ನಿಗದಿತ ಸಮಯದಲ್ಲಿ ನಿಗದಿತ ಕಕ್ಷೆ ಕರಾರುವಕ್ಕಾಗಿ  ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣಾ ನೌಕೆ ಇತಿಹಾಸ ಸೃಷ್ಟಿಸಿದ್ದು, ತನ್ನ ಮೊದಲ ಯತ್ನದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಜಿಸ್ಯಾಟ್–19 ಈವರೆಗಿನ ಭಾರತದ ಅತ್ಯಂತ ದೊಡ್ಡ ಉಪಗ್ರಹವಾಗಿದ್ದು, ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಲವು ತಂತ್ರಜ್ಞಾನ ಮತ್ತು ಉಪಕರಣಗಳನ್ನು ಒಳಗೊಂಡಿವೆ.

ಇಸ್ರೋ ಸಂಸ್ಥೆಯ ಇತಿಹಾಸವನ್ನು ಕೊಂಚ ಕೂಲಂಕುಷವಾಗಿ ಪರಿಶೀಲಿಸಿದರೆ ಇಂದಿನ ಉಡಾವಣೆ ಇಸ್ರೋ ಪಾಲಿಗೆ ಅತ್ಯಂತ ಪ್ರಮುಖವಾದದ್ದು ಮತ್ತು ಕಠಿಣವಾದದ್ದು ಎಂಬ ಅಂಶ ತಿಳಿಯುತ್ತದೆ. ಇಸ್ರೋ ಈ ವರೆಗೂ ಸಾಕಷ್ಟು ರಾಕೆಟ್ ಗಳನ್ನು ಉಡಾಯಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆಯಾದರೂ, ಇಸ್ರೋ ಸಂಸ್ಥೆಯ ಪಾಲಿಗೆ ಕಪ್ಪು ಚುಕ್ಕೆಯೊಂದು ಹಾಗೆಯೇ ಉಳಿದುಕೊಂಡಿದೆ.

ಅದೇನೆಂದರೆ ಇಸ್ರೋ ಈವರೆಗೂ ಉಡಾಯಿಸಿರುವ ಬಹುತೇಕ ರಾಕೆಟ್ ಗಳು ಮೊದಲ ಪ್ರಯತ್ನದಲ್ಲಿ ವಿಫಲವಾಗಿದೆ. ಇದೇ ಇಂದು ಇಸ್ರೋ ವಿಜ್ಞಾನಿಗಳ ದುಗಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇಸ್ರೋ 1979ರಲ್ಲಿ ಮೊದಲ  ಬಾರಿಗೆ ತನ್ನ ಮೊದಲ ಉಡಾವಣಾ ವಾಹಕ ಎಸ್ ಎಲ್ ವಿ-3 ಯನ್ನು ಉಡಾವಣೆ ಮಾಡಿತ್ತು. ಆದರೆ ಅಂದಿನ ಉಡಾವಣೆ ತಾಂತ್ರಿಕ ದೋಷದಿಂದ ವಿಫಲವಾಗಿತ್ತು. ಬಳಿಕ ವಾಹಕದ ತಾಂತ್ರಿಕ ದೋಷ ಸರಿಪಡಿಸಿ ಮತ್ತೆ ಅದನ್ನು  ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಬಳಿಕ 1993ರಲ್ಲಿ ಇಸ್ರೋ ತನ್ನ ಮೊದಲ ಪೊಲಾರ್ ಸ್ಯಾಟಲೈಟ್ ವೆಹಿಕಲ್ (ಪಿಎಸ್ ಎಲ್ ವಿ) ರಾಕೆಟ್ ಅನ್ನು ಉಡಾಯಿಸಿತ್ತು. ಇದೂ ಕೂಡ ತನ್ನ ಪ್ರಥಮ ಉಡಾವಣೆಯಲ್ಲಿ ವಿಫಲವಾಗಿ  ಸಮುದ್ರಕ್ಕೆ ಬಿದ್ದಿತ್ತು. ಆದರೆ ಬಳಿಕ ನಡೆದ ಸುಮಾರು 39 ಉಡಾವಣೆಗಳು ಯಶಸ್ವಿಯಾಗಿತ್ತು. ಇನ್ನು 2001ರಲ್ಲಿ ನಡೆದ ಜಿಎಸ್ ಎಲ್ ವಿ ರಾಕೆಟ್ ಮೊದಲ ಉಡಾವಣೆ ಕೂಡ ವಿಫಲವಾಗಿತ್ತು. ಬಳಿಕ ನಡೆದ 11 ಉಡಾವಣೆಗಳು  ಯಶಸ್ವಿಯಾಗಿದೆ.

ಇದೀಗ ಇಸ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಎಸ್ ಎಲ್ ವಿ ಮಾರ್ಕ್ 3 ನೌಕೆ ತನ್ನ ಮೊದಲ ಉಡಾವಣೆಯಲ್ಲೇ ಯಶಸ್ವಿಯಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com