ಸ್ಯಾಮ್ ಸಂಗ್ ಟಿವಿ ಮೂಲಕ ಸಿಐಎ ಗೂಢಚಾರಿಕೆ; ವಿಕಿಲೀಕ್ಸ್ ಸ್ಫೋಟಕ ವರದಿ!

ಅಮೆರಿಕದ ಖ್ಯಾತ ತನಿಖಾ ಸಂಸ್ಥೆ ಸಿಐಎ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗಳ ಮೂಲಕ ಗೂಢಚಾರಿಕೆ ನಡೆಸುತ್ತಿದೆ ಎಂಬ ಸ್ಫೋಟಕ ವರದಿಯನ್ನು ಖ್ಯಾತ ತನಿಖಾ ವರದಿ ಜಾಲತಾಣ ವಿಕಿಲೀಕ್ಸ್ ಬಹಿರಂಗಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕದ ಖ್ಯಾತ ತನಿಖಾ ಸಂಸ್ಥೆ ಸಿಐಎ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗಳ ಮೂಲಕ ಗೂಢಚಾರಿಕೆ ನಡೆಸುತ್ತಿದೆ ಎಂಬ ಸ್ಫೋಟಕ ವರದಿಯನ್ನು ಖ್ಯಾತ ತನಿಖಾ ವರದಿ ಜಾಲತಾಣ ವಿಕಿಲೀಕ್ಸ್ ಬಹಿರಂಗಪಡಿಸಿದೆ.

ಮನೆಯಲ್ಲಿರುವ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗಳನ್ನೇ ಸಿಐಎ ತನ್ನ ಮೈಕ್ರೋಫೋನ್ ಆಗಿ ಬಳಿಸಿಕೊಳ್ಳುತ್ತಿದ್ದು, ಟಿವಿಯನ್ನು ಸ್ವಿಚ್ ಆಫ್ ಮಾಡಿದ್ದರೂ ಅದರಲ್ಲಿರುವ ಉಪಕರಣಗಳು ರಹಸ್ಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ.  ಅವುಗಳ ಮೂಲಕ ಸಿಐಎ ನಮ್ಮ ಮಾತುಗಳನ್ನು ಕದ್ದಾಲಿಕೆ ಮಾಡುತ್ತಿರುತ್ತದೆ. ಕೇವಲ ಇದು ಮಾತ್ರವಲ್ಲದೇ  ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ನಲ್ಲಿರುವ ಸುರಕ್ಷತಾ ಚಾಟಿಂಗ್ ವಿಧಾನ ಎನ್ಸ್ ಕ್ರಿಪ್ಶನ್ (ಅಕ್ಷರಗಳನ್ನು  ಸಂಕೇತಗಳನ್ನಾಗಿ ಮಾರ್ಪಡಿಸುವ) ನಂತಹ ಆ್ಯಪ್‌ ಗಳನ್ನೇ ಹ್ಯಾಕ್ ಮಾಡಿ ಅವುಗಳಲ್ಲಿನ ಮಾಹಿತಿಯನ್ನು ತಿಳಿದುಕೊಳ್ಳುತ್ತದೆ. ಅಷ್ಟೇ ಏಕೆ ನಿಮ್ಮ ಕಾರುಗಳನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ವಿಕಿಲೀಕ್ಸ್ ತನ್ನ  ವರದಿಯಲ್ಲಿ ಎಚ್ಚರಿಕೆ ನೀಡಿದೆ.

ವಿಕಿಲೀಕ್ಸ್ ಮಂಗಳವಾರ ಬಿಡುಗಡೆ ಮಾಡಿದ ಸಿಐಎಯ ದಾಖಲೆಗಳೇ ಇದಕ್ಕೆ ಸಾಕ್ಷಿಯಾಗಿದ್ದು, ಸಿಐಎಯಿಂದ ಸೋರಿಕೆಯಾಗಿದೆಯೆಂದು ಹೇಳಲಾಗುತ್ತಿರುವ ಸುಮಾರು 9,000 ದಾಖಲೆಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದ್ದು,  ಇದು ಸಿಐಎಗೆ ಸಂಬಂಧಿಸಿದ ಈವರೆಗಿನ ಅತೀ ದೊಡ್ಡ ಸೋರಿಕೆಯೆಂದು ಹೇಳಲಾಗುತ್ತಿದೆ. ಅಮೆರಿಕದ ಉನ್ನತ ಮಟ್ಟದ ತನಿಖಾ ಸಂಸ್ಥೆಯಾಗಿರುವ ಸಿಐಎಯ ಭಾರೀ ಪ್ರಮಾಣದ ದಾಖಲೆಗಳು, ಕನ್ನ ಹಾಕುವ ಅಥವಾ ಕದಿಯುವ  ಸಾಧನಗಳು ಮತ್ತು ಕನ್ನ ಹಾಕುವುದಕ್ಕಾಗಿ ಬಳಸುವ ಗುಪ್ತ ಸಂಕೇತಗಳು (ಕೋಡ್) ಸೈಬರ್ ಹ್ಯಾಕ್ ಸೆಕ್ಯುರಿಟಿ ಕಮ್ಯುನಿಟಿಯ ಒಳಗೆ ಸೋರಿಕೆಯಾಗಿದ್ದು, ಅದು ತನಗೆ ಲಭಿಸಿದೆ ಹಾಗೂ ಅದರ ಒಂದು ಭಾಗವನ್ನು ಬಿಡುಗಡೆ  ಮಾಡಿರುವುದಾಗಿ ವಿಕಿಲೀಕ್ಸ್ ಹೇಳಿಕೊಂಡಿದೆ.

ಇನ್ನು ವಿಕಿಲೀಕ್ಸ್ ಬಹಿರಂಗ ಪಡಿಸಿರುವ ದಾಖಲೆಗಳು ಸಿಐಎಯಿಂದ ಸೋರಿಕೆಯಾದ ದಾಖಲೆಗಳೇ ಅಥವಾ ಇಲ್ಲವೇ ಎಂಬ ವಿಚಾರದ ಕುರಿತು ಸ್ಪಷ್ಟನೆ ನೀಡಲು ಸಿಐಎ ಮತ್ತು ಶ್ವೇತಭವನದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಸಿಐಎಯಿಂದ 1 ಸಾವಿರಕ್ಕೂ ಅಧಿಕ ವೈರಸ್, ಟ್ರಾಜನ್, ಮಾಲ್ ವೇರ್ ಗಳ ಸೃಷ್ಟಿ!
ಇದೇ ವೇಳೆ ವಿಕಿಲೀಕ್ಸ್ ಬಹಿರಂಗ ಪಡಿಸಿರುವ ವರದಿಯಲ್ಲಿ ಸಿಐಎ ತನ್ನ ಗೂಡಚಾರಿಕೆಗಾಗಿ ಸುಮಾರು 1 ಸಾವಿರಕ್ಕೂ ಅಧಿಕ ವೈರಸ್, ಟ್ರಾಜನ್, ಮಾಲ್ ವೇರ್ ಗಳನ್ನು ಸೃಷ್ಟಿ ಮಾಡಿ ಅವುಗಳನ್ನು ವಿವಿಧೆಡೆ ಪಸರಿಸುವಂತೆ  ಮಾಡಿತ್ತು. ಸ್ಯಾಮ್ ಸಂಗ್ ನಂತಹ ಖಾಸಗಿ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಕಳುಹಿಸಿ ಅವುಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ವಿಕಿಲೀಕ್ಸ್ ವರದಿಯಲ್ಲಿ ಹೇಳಿದೆ. ಐಫೋನ್‌, ಆ್ಯಂಡ್ರಾಯ್ಡ್ ಮೊಬೈಲ್,  ಮೈಕ್ರೊಸಾಫ್ಟ್ ಸಾಫ್ಟ್‌ವೇರ್, ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಗಳಲ್ಲಿ ಇವುಗಳನ್ನು ಗುಪ್ತವಾಗಿ ಅಳವಡಿಸಿ, ಮೈಕ್ರೊಫೋನ್‌ಗಳನ್ನಾಗಿ ಸಿಐಎ ಪರಿವರ್ತಿಸುತ್ತಿದೆ. ಇದಲ್ಲದೆ ಸಿಐಎಯು ತನ್ನ ಕನ್ನ ಸಾಧನಗಳನ್ನು ಬಳಸಿ, ಕಾರುಗಳು ಮತ್ತು  ಟ್ರಕ್‌ ಗಳಲ್ಲಿರುವ ವಿದ್ಯುನ್ಮಾನ ನಿಯಂತ್ರಣ ವ್ಯವಸ್ಥೆಗಳ ಮೇಲೆಯೂ ನಿಯಂತ್ರಣ ಸಾಧಿಸಬಹುದಾಗಿದೆ ಎಂದು ವಿಕಿಲೀಕ್ಸ್ ತಿಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com