ಬಾಹ್ಯಾಕಾಶ ತಲುಪಲಿರುವ ಇಸ್ರೋದ 2ನೇ 'ಗುಪ್ತಚರ ಕಣ್ಣು' ಆರ್ಐಸ್ಯಾಟ್-2ಬಿಆರ್1ನ ಕುರಿತು ನಿಮಗೆಷ್ಟು ಗೊತ್ತು..?

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ 2ನೇ 'ಗುಪ್ತಚರ ಕಣ್ಣನ್ನು' ಬಾಹ್ಯಾಕಾಶದಲ್ಲಿ ನೆಡಲು ಸಜ್ಜಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ 2ನೇ 'ಗುಪ್ತಚರ ಕಣ್ಣನ್ನು' ಬಾಹ್ಯಾಕಾಶದಲ್ಲಿ ನೆಡಲು ಸಜ್ಜಾಗಿದೆ.

ಹೌದು.. ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್ -2 ಬಿಆರ್ 1 (RISAT-2BR1) ನಭಕ್ಕೆ ಹಾರಲು ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.  ಪಿಎಸ್‌ಎಲ್‌ವಿ ಸಿ -48 ರಾಕೆಟ್‌ ನ್ನು ಮಧ್ಯಾಹ್ನ 3.25 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಲಾಂಚ್ ಪ್ಯಾಡ್‌ನಿಂದ ಉಡಾಯಿಸಲು ಇಸ್ರೋ ಸಜ್ಜಾಗಿದೆ. 

ಇನ್ನು ಇದು ಶ್ರೀಹರಿಕೋಟದಿಂದ ಕಳುಹಿಸುತ್ತಿರುವ 75 ನೇ ಉಡಾವಣೆಯಾಗಲಿದ್ದು,  ಈ ಬಾರಿ ಇಸ್ರೋ ಪಿಎಸ್‌ಎಲ್‌ವಿ ಮೂಲಕ ಏಕಕಾಲದಲ್ಲಿ 10 ಉಪಗ್ರಹಗಳನ್ನು ನಭಕ್ಕೆ ಕಳುಹಿಸಲಿದೆ. ಪಿಎಸ್‌ಎಲ್‌ವಿ ಯೊಂದಿಗೆ 9 ಉಪಗ್ರಹಗಳು ವಿದೇಶದಾಗಿದ್ದು, ಇದರಲ್ಲಿ ಅಮೆರಿಕದ 6, ಇಸ್ರೇಲ್‌ನಲ್ಲಿ 1, ಇಟಲಿಯ 1 ಮತ್ತು ಜಪಾನ್‌ ನ 1 ಉಪಗ್ರಹಗಳು ಸೇರಿವೆ. ಇವುಗಳಲ್ಲಿ ದೇಶದ ಎರಡನೇ 'ಗುಪ್ತಚರ ಕಣ್ಣು' ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್ -2 ಬಿಆರ್ 1 ಇರಲಿದೆ ಎಂಬುದು ವಿಶೇಷ.

ಇಷ್ಟಕ್ಕೂ ಏನಿದು RISAT-2BR1..? ಏನಿದರ ವಿಶೇಷ?
ಇಸ್ರೋ ಉಡಾಯಿಸುತ್ತಿರುವ RISAT-2BR1 ಉಪಗ್ರಹ ಬಾಹ್ಯಾಕಾಶದಲ್ಲಿ ಭಾರತದ 2ನೇ ಗುಪ್ತಚರ ಕಣ್ಣು ಎಂದೇ ಕರೆಯಲ್ಪಡುತ್ತಿದೆ. ಇದಕ್ಕೂ ಮೊದಲು ಮೇ 22 ರಂದು ಉಡಾವಣೆಯಾಗಿದ್ದ ರಿಸಾಟ್ -2 ಬಿ ಈಗಾಗಲೇ ದೇಶದ ಗುಪ್ತಚರ ದೃಷ್ಟಿಗೆ ಕೆಲಸ ಮಾಡುತ್ತಿದೆ. 

ಇಸ್ರೋ ಪ್ರಕಾರ, ಈ ಉಪಗ್ರಹವನ್ನು 37 ಡಿಗ್ರಿ ಇಳಿಜಾರಿನಲ್ಲಿ 576 ಕಿ.ಮೀ ಎತ್ತರವಿರುವ ಕಕ್ಷೆಯಲ್ಲಿ ಅಳವಡಿಸಲಾಗುವುದು. ಈ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಅಳವಡಿಸುವುದರೊಂದಿಗೆ, ದೇಶದ ಗಡಿಗಳಲ್ಲಿ ನುಸುಳುವ ಪ್ರಯತ್ನಗಳು ಅಸಾಧ್ಯವಾಗುತ್ತವೆ ಎಂದು ಹೇಳಲಾಗಿದೆ. 

ಮೈಕ್ರೋವೇವ್​ ಫ್ರೀಕ್ವೆನ್ಸಿಯ ಮೂಲಕ ಭೂಮಿಯ ಮೇಲಿನ ಚಿತ್ರಗಳನ್ನು ಸೆರೆಹಿಡಿಯಬಲ್ಲ ಈ ಉಪಗ್ರಹ, ಸೇನೆಗೆ ಅಗತ್ಯ ಬಿದ್ದಾಗೆಲ್ಲಾ, ದೇಶದ ಯಾವುದೇ ಗಡಿಯ ಫೋಟೋಗಳನ್ನು ಬೇಕಾದರೂ ತೆಗೆದುಕೊಡಲಿದೆ. ಅಷ್ಟೇ ಅಲ್ಲದೆ ಮೋಡಗಳನ್ನು ತೂರಿಕೊಂಡು, ಪ್ರತಿ ಹಗಲು ಹಾಗೂ ಪ್ರತಿ ರಾತ್ರಿಯು ಇಮೇಜ್​ ಗಳನ್ನು ಸೆರೆಹಿಡಿಯಲಿದೆ. ಅಲ್ಲದೆ ಬಿಸಿಲು, ಚಳಿ, ಮಳೆಯಂತಹ ಯಾವುದೇ ಸನ್ನಿವೇಶದಲ್ಲೂ ಬೇಕಾದ ಇಮೇಜ್​ ಗಳನ್ನು ಥಟ್ಟಂತ ತೆಗೆದುಕೊಡಬಲ್ಲ ಸಾಮರ್ಥ್ಯ ಈ ಉಪಗ್ರಹಕ್ಕಿದೆ. ಈ ಉಪಗ್ರಹ ಸುಮಾರು 628 ಕೆ.ಜಿ ತೂಕ ಹೊಂದಿದೆ ಎನ್ನಲಾಗಿದೆ.

ರಿಸಾಟ್ -2 ಬಿಆರ್ 1 ರಲ್ಲಿ ಸ್ಥಾಪಿಸಲಾದ ವಿಶೇಷ ಸಂವೇದಕದಿಂದಾಗಿ, ಗಡಿಯಾಚೆಗಿನ ಭಯೋತ್ಪಾದಕರ ಸಜ್ಜುಗೊಳಿಸುವಿಕೆಯನ್ನು ಸಹ ಮೊದಲೇ ವರದಿ ಮಾಡಬಹುದಾಗಿದೆ. 

ಒಟ್ಟಾರೆ ಬಾಹ್ಯಾಕಾಶದಿಂದಲೂ ಭಾರತದ ಗಡಿಗಳ ಮೇಲೆ ಕಣ್ಣಿರಿಸುವ ಭಾರತದ ಬಹು ವರ್ಷಗಳ ಕನಸು RISAT-2BR1 ಉಪಗ್ರಹದ ಮೂಲಕ ಸಾಕಾರವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com