ಮಿಷನ್ ಶಕ್ತಿ: ಭಾರತದ ಮೊಟ್ಟ ಮೊದಲ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿಯ ಕುರಿತು ತಿಳಿಯಲೇ ಬೇಕಾದ ಅಂಶಗಳು!

ಭಾರತದ ಮಹತ್ವಾಕಾಂಕ್ಷಿ ಮಿಷನ್ ಶಕ್ತಿ ಯೋಜನೆ ಹಾಗೂ ಮೊಟ್ಟ ಮೊದಲ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿ ಎ-ಸ್ಯಾಟ್ ಕುರಿತ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.

Published: 28th March 2019 12:00 PM  |   Last Updated: 28th March 2019 10:56 AM   |  A+A-


Mission Shakti: All you need to know About India's First Ever Anti Satellite missile

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಬಾಹ್ಯಾಕಾಶದಲ್ಲಿದ್ದ ಸಕ್ರಿಯ ಉಪಗ್ರಹವನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸಿ ಭಾರತ ಸೂಪರ್ ಪವರ್ ದೇಶ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೇ ನೀಡಿದ್ದು, ಭಾರತದ ಈ ಮಹತ್ವಾಕಾಂಕ್ಷಿ ಮಿಷನ್ ಶಕ್ತಿ ಯೋಜನೆ ಹಾಗೂ ಮೊಟ್ಟ ಮೊದಲ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿ ಎ-ಸ್ಯಾಟ್ ಕುರಿತ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.

ಬಾಹ್ಯಾಕಾಶದಲ್ಲಿರುವ ಸಜೀವ ಉಪಗ್ರಹವನ್ನು ಮಿಸೈಲ್ ಮೂಲಕ ಹೊಡೆದುರುಳಿಸುವ ಈ ತಂತ್ರಜ್ಞಾನ ತನ್ನದಾಗಿಸಿಕೊಳ್ಳುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ‘ಸೂಪರ್ ಪವರ್’ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂಥ ತಂತ್ರಜ್ಞಾನ ಹೊಂದಿರುವ ವಿಶ್ವದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಸಾಮರ್ಥ್ಯವನ್ನು ಹೊಂದಿದ್ದವು.

ಎ-ಸ್ಯಾಟ್ (ಉಪಗ್ರಹ ನಿರೋಧಕ) ಕ್ಷಿಪಣಿ ಮೂಲಕ ಭೂಮಿಯ ಕೆಳ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಲಾಗಿದೆ. ಕ್ಷಿಪಣಿ ಉಡಾವಣೆಗೊಂಡ 3 ನಿಮಿಷದಲ್ಲಿ ಈ ಕಾರ್ಯ ನೆರವೇರಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮತ್ತು ಇಸ್ರೋ ಜಂಟಿಯಾಗಿ ‘ಮಿಷನ್ ಶಕ್ತಿ’ ಹೆಸರಿನಲ್ಲಿ ಈ ಪ್ರಯೋಗ ನಡೆಸಿವೆ. ಆ ಮೂಲಕ ದೇಶದ ಮೇಲೆ ಗೂಢಚಾರಿಕೆ ನಡೆಸುವ ಅಥವಾ ಶತ್ರುದೇಶಗಳ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈಗ ಭಾರತ ಪಡೆದುಕೊಂಡಿದ್ದು, ರಕ್ಷಣಾ ಬಲವನ್ನೂ ಹೆಚ್ಚಿಸಿಕೊಂಡಂತಾಗಿದೆ.

ಏನಿದು 'ಮಿಷನ್ ಶಕ್ತಿ' ಯೋಜನೆ?
ಬಾಹ್ಯಾಕಾಶದಲ್ಲಿರುವ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸುವ ಈ ಕ್ಷಿಪಣಿ ಯೋಜನೆಗೆ ಡಿಆರ್ ಡಿಒ ಮಿಷನ್ ಶಕ್ತಿ ಎಂದು ಹೆಸರಿಸಿದೆ. ಈ ಯೋಜನೆಗಾಗಿ ಭಾರತ ತನ್ನದೇ ನಿರುಪಯುಕ್ತ ಸಕ್ರಿಯ ಉಪಗ್ರಹವನ್ನು ಗುರಿಯಾಗಿಸಿಕೊಂಡಿತ್ತು. ಕಳೆದ ಜನವರಿ 24ರಂದು ಇಸ್ರೋ ಉಡಾಯಿಸಿದ್ದ ಮೈಕ್ರೋ ಉಪಗ್ರಹವನ್ನು ನಿನ್ನೆ ಎ-ಸ್ಯಾಟ್ ಬಾಹ್ಯಾಕಾಶದಲ್ಲೇ ಉಡಾಯಿಸಿದೆ. ಎ-ಸ್ಯಾಟ್ ಮಿಸೈಲ್ (ಎಲ್ ಇಒ) ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹವನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ದಾಳಿ ಮಾಡಿ ಉಡಾಯಿಸಿದೆ. ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹವನ್ನೇ ಈ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲು ಕಾರಣ ಕೂಡ ಇದ್ದು, ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹ ಹೊಡೆದುರುಳಿಸಿದಾಗ ಅದರ ಅವಶೇಷಗಳು ನೇರವಾಗಿ ಭೂಮಿ ವಾತಾವರಣ ತಲುಪುತ್ತದೆ. ಆಗ ಅದರ ಬಿಡಿಭಾಗಗಳು ಭೂಮಿಯ ಗುರುತ್ವಾಕರ್ಷಣ ಬಲ ಹಾಗೂ ಅತಿಯಾದ ವಾತಾವರಣದ ಶಾಖಕ್ಕೆ ಸಿಕ್ಕು ಅಲ್ಲಿಯೇ ಉರಿದು ಭಸ್ಮವಾಗುತ್ತದೆ. ಇದರಿಂದ ಕಕ್ಷೆಯಲ್ಲಿರುವ ಯಾವುದೇ ಇತರೆ ಉಪಗ್ರಹಗಳಿಗೆ ತೊಂದರೆಯಾಗುವುದಿಲ್ಲ.

7 ವರ್ಷಗಳ ಪರಿಶ್ರಮ
2007ರಲ್ಲಿ ಚೀನಾದಲ್ಲಿ ಸ್ಯಾಟೆಲೈಟ್ ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆ ಯಶಸ್ವಿಯಾದಾಗ ಆಗಿನ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್, ಭವಿಷ್ಯದಲ್ಲಿ ಅಂತರಿಕ್ಷವೇ ಸೇನಾ ಮೈದಾನವಾಗಲಿದೆ ಎಂದಿದ್ದರು. 2012ರಲ್ಲಿ ಡಿಆರ್​ ಡಿಒದ ಆಗಿನ ಮುಖ್ಯಸ್ಥ ವಿ.ಕೆ. ಸಾರಸ್ವತ್ ಇಂತಹ ಕ್ಷಿಪಣಿ ತಯಾರಿಕೆಗೆ ಭಾರತ ಸಿದ್ಧವಾಗಿದೆ ಎಂದಿದ್ದರು. ಈ ಹೇಳಿಕೆ ಬಗ್ಗೆ ಜಾಗತಿಕ ಮಾಧ್ಯಮಗಳು ವ್ಯಂಗ್ಯವಾಡಿದ್ದವು. ಸ್ಪೇಸ್ ಸೇಫ್ಟಿ ಮ್ಯಾಗಜಿನ್ ಸ್ಕಾಲರ್ ಮೈಕಲ್ ಜೆ. ಲಿಸ್ನರ್, ಭಾರತ ಕ್ಷಿಪಣಿ ಪರೀಕ್ಷೆ ನಡೆಸಿ ಜಗತ್ತಿಗೆ ತನ್ನ ಕ್ಷಮತೆ ತೋರಿಸದೆ ಹೋದಲ್ಲಿ ಅದು ಕಾಗದದ ಸಿಂಹವಾಗಲಿದೆ ಎಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಕಳೆದ 7 ವರ್ಷಗಳಿಂದ ಸತತ ಯತ್ನ ನಡೆಸಿ, ಇದೀಗ ವಿಶ್ವವೇ ಬೆರಗಾಗುವಂತೆ ಮಾಡಿದೆ.

ರಷ್ಯಾ, ಅಮೆರಿಕ, ಚೀನಾ ಬಳಿಯಿದೆ ಈ ಕ್ಷಿಪಣಿ
ಭಾರತಕ್ಕಿಂತ ಮೊದಲು ರಷ್ಯಾ ಮತ್ತು ಅಮೆರಿಕ 1950ರ ದಶಕದಲ್ಲಿಯೇ ಉಪಗ್ರಹ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ತಯಾರಿಕೆಯಲ್ಲಿ ತೊಡಗಿದ್ದವು. ರಷ್ಯಾ 1960ರ ದಶಕದಲ್ಲಿ ಇದರ ಪರೀಕ್ಷಾರ್ಥ ಉಡಾವಣೆ ಆರಂಭಿಸಿ, 1968ರ ನವೆಂಬರ್ 1ರಂದು ಸಫಲವಾಯಿತು. ಅಮೆರಿಕ 1958ರ ಮೇ 26ರಿಂದ 1959ರ ಅಕ್ಟೋಬರ್ 13ರವರೆಗೆ 12 ಬಾರಿ ಪರೀಕ್ಷೆ ನಡೆಸಿತ್ತು. 70ರ ದಶಕದವರೆಗೂ ಪ್ರಯತ್ನ ನಡೆಯುತ್ತಲೇ ಬಂದಿತ್ತು. 1985 ಸೆಪ್ಟೆಂಬರ್ 13ರಂದು ಮೊದಲ ಬಾರಿ ಯಶಸ್ಸು ಕಂಡಿತ್ತು. ಭೂಮಿಯಿಂದ 555 ಕಿಮೀ ದೂರದಲ್ಲಿದ್ದ ಉಪಗ್ರಹ ಪಿ 78-1 ಅನ್ನು ಕ್ಷಿಪಣಿ ಹೊಡೆದುರುಳಿಸಿತ್ತು. ಚೀನಾ ಕೂಡ ಹಲವು ವರ್ಷಗಳ ಕಾಲ ಶ್ರಮವಹಿಸಿ 2007ರಲ್ಲಿ ಯಶಸ್ಸು ಕಂಡಿತ್ತು.

ಭಾರತಕ್ಕೆ ಏಕೆ ಅಗತ್ಯ?
ಇಸ್ರೋ ಈಗಾಗಲೇ ನೂರಾರು ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಭಾರತದ ರಕ್ಷಣೆ, ಸಂವಹನ ಸಹಿತ ಮಹತ್ವದ ಉಪಗ್ರಹಗಳು ಇದರಲ್ಲಿ ಸೇರಿವೆ. ಇವುಗಳನ್ನು ಶತ್ರುಗಳಿಂದ ರಕ್ಷಣೆ ಮಾಡಲು ವಿಶೇಷ ವ್ಯವಸ್ಥೆ ಅಗತ್ಯ. ಯಾವುದೇ ದೇಶ ಭಾರತದ ಮೇಲೆ ಉಪಗ್ರಹ ದಾಳಿ ನಡೆಸಿದರೆ, ಭಾರತ ಕೂಡ ಪ್ರತಿದಾಳಿ ನಡೆಸಲು ಸಮರ್ಥವಾಗಿದೆ ಎಂಬ ಸಂದೇಶ ಈಗ ರವಾನೆಯಾಗಿದೆ. ಹೀಗಾಗಿ ಭಾರತದ ಉಪಗ್ರಹವನ್ನು ನಾಶಪಡಿಸಲು ಶತ್ರು ರಾಷ್ಟ್ರಗಳು ಮುಂದಾಗುವ ಸಾಧ್ಯತೆ ಕಡಿಮೆ.

ಸಂಪೂರ್ಣ ಸ್ವದೇಶಿ ನಿರ್ಮಿತ ತಂತ್ರಜ್ಞಾನ
ಎ-ಸ್ಯಾಟ್ ಕ್ಷಿಪಣಿಯ ಮತ್ತೊಂದು ಹೆಮ್ಮೆಯ ಸಂಗತಿ ಎಂದರೆ ಈ ಕ್ಷಿಪಣಿಯು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ತಯಾರಾಗಿದೆ. ಹೀಗಾಗಿ ಇಂತಹ ಕ್ಷಿಪಣಿಗಳಿಗಾಗಿ ಭಾರತ ಇನ್ನು ಮುಂದೆ ವಿದೇಶ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ. ಅಲ್ಲದೆ ಇದೇ ಮಾದರಿಯ ವಿದೇಶಿ ಕ್ಷಿಪಣಿಗಳ ವೆಚ್ಚಕ್ಕೆ ಹೋಲಿಕೆ ಮಾಡಿದರೆ ಎ-ಸ್ಯಾಟ್ ಕ್ಷಿಪಣಿಯ ವೆಚ್ಚ ಕಡಿಮೆ ಎಂದು ಹೇಳಲಾಗಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp