'ವಿಕ್ರಮ್ ಲ್ಯಾಂಡರ್ ಕ್ರಾಶ್ ಆಗಿಲ್ಲ, ಲ್ಯಾಂಡರ್-ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತ'

ಕೋಟ್ಯಂತರ ಭಾರತೀಯರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದ ಚಂದ್ರಯಾನ 2 ಯೋಜನೆಯ ವಿಕ್ರಮ್ ಲ್ಯಾಂಡರ್ ಅಪಘಾತಕ್ಕೀಡಾಗಿಲ್ಲ. ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರಯಾನ-2 ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತವಾಗಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಚ್ಚರಿ ಮೂಡಿಸಿದ ಇಸ್ರೋ ಮಾಜಿ ನಿರ್ದೇಶಕ ಸಸಿಕುಮಾರ್ ಹೇಳಿಕೆ, ದತ್ತಾಂಶ ವಿಶ್ಲೇಷಣೆ ಬಳಿಕ ಅಂತಿಮ ಫಲಿತಾಂಶಟ

ಬೆಂಗಳೂರು: ಕೋಟ್ಯಂತರ ಭಾರತೀಯರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದ ಚಂದ್ರಯಾನ 2 ಯೋಜನೆಯ ವಿಕ್ರಮ್ ಲ್ಯಾಂಡರ್ ಅಪಘಾತಕ್ಕೀಡಾಗಿಲ್ಲ. ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರಯಾನ-2 ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತವಾಗಿದೆ ಎಂದು ಹೇಳಲಾಗಿದೆ.

ಈ ಕುರಿತಂತೆ ಸ್ವತಃ ಇಸ್ರೋ ಮಾಜಿ ನಿರ್ದೇಶಕ ಡಿ ಸಸಿಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದು, 'ಚಂದ್ರಯಾನ-2 ಸಂಪೂರ್ಣವಾಗಿ ಗುರಿ ಮುಟ್ಟಿರದೇ ಇರಬಹುದು. ಆದರೆ ವಿಫಲವಾಗಿಲ್ಲ. ಚಂದ್ರನಿಂದ 2.1 ಕಿ.ಮೀ. ದೂರದಲ್ಲಿ ಇದ್ದಾಗ ವಿಕ್ರಂ ಲ್ಯಾಂಡರ್​ ನೆಟ್​ವರ್ಕ್​ ಸಂಪರ್ಕ ಕಡಿತಗೊಂಡಿದೆ. ಆದರೆ, ಇದರಿಂದ ನಿರಾಶೆಗೊಳ್ಳಬೇಕಿಲ್ಲ ಎಂದು ಇಸ್ರೋ ಮಾಜಿ ನಿರ್ದೇಶಕ ಡಿ. ಸಸಿಕುಮಾರ್​ ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸಸಿ ಕುಮಾರ್ ಅವರು, ನಾವು ಮೊದಲು ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿದೆಯೋ ಅಥವಾ ಕ್ರಾಶ್ ಲ್ಯಾಂಡಿಂಗ್ ಆಗಿದೆಯೋ ಎಂಬುದನ್ನು ತಿಳಿಯಬೇಕು. ನನ್ನ ಅಭಿಪ್ರಾಯದಂತೆ ಇದು ಕ್ರಾಶ್ ಲ್ಯಾಂಡಿಂಗ್ ಅಗಿರಲು ಸಾಧ್ಯವಿಲ್ಲ. ಏಕೆಂದರೆ ಚಂದ್ರಯಾನ-2 ಆರ್ಬಿಟರ್ ಮತ್ತು ವಿಕ್ರಮ್ ಲ್ಯಾಂಡರ್ ನಡುವಿನ ಸಂಪರ್ಕ ಇನ್ನೂ ಜೀವಂತವಾಗಿದೆ.  ಈ ಸಂಪರ್ಕ ಹಾಗೆಯೇ ಇರುವಂತೆ ನಾವು ನೋಡಿಕೊಳ್ಳಬೇಕು. ಈ ಕುರಿತಂತೆ ನಿಯಂತ್ರಣ ಕೊಠಡಿಯಿಂದ ವಿಶ್ಲೇಷಣೆ ಮಾಡಬೇಕು. ಬಳಿಕವಷ್ಟೇ ಈ ಕುರಿತ ಸ್ಪಷ್ಟ ಉತ್ತರ ದೊರೆಯಲಿದೆ ಎಂದು ಹೇಳಿದರು,

ಅಂತೆಯೇ ಪ್ರಸ್ತುತ ಸಂವಹನ ಕಡಿತವಾಗಿದ್ದು, ಈ ಕಡಿತದ ಕುರಿತು ವಿಶ್ಲೇಷಣಾ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಂಪರ್ಕ ಕಡಿತಗೊಂಡಿದ್ದು ಯಾವ ಕಾರಣಕ್ಕೆ ಎಂಬುದನ್ನು ನಾವು ಮೊದಲು ಕಂಡು ಹಿಡಿಯಬೇಕು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್​ ಆಗಿದೆಯೋ ಅಥವಾ ಕ್ರಾಶ್​ ಲ್ಯಾಂಡಿಂಗ್​ ಆಗಿದೆಯೋ ಎಂಬುದನ್ನು ಲ್ಯಾಂಡರ್​ ಕಳಿಸಿದ ದತ್ತಾಂಶಗಳ ಅಧ್ಯಯನದಿಂದ ನಾವು ತಿಳಿಯಬೇಕು. ನನ್ನ ಅಭಿಪ್ರಾಯದಂತೆ, ಇದು ಕ್ರಾಶ್​ ಲ್ಯಾಂಡಿಂಗ್​ ಆಗಿದ್ದಲ್ಲ. ಹಾಗಾಗಿ ನಾವು ಇನ್ನೂ ಯೋಜನೆ ಕುರಿತಂತೆ ಭರವಸೆ​ ಇಟ್ಟುಕೊಳ್ಳೋಣ. ದತ್ತಾಂಶಗಳ ವಿಶ್ಲೇಷಣೆ ಮುಗಿದಬಳಿಕವಷ್ಟೇ ಅಂತಿಮವಾಗಿ ಏನು ಎಂಬುದು ಗೊತ್ತಾಗುತ್ತದೆ. ಚಂದ್ರಯಾನ-2 ಸಂಪೂರ್ಣ ಯಶಸ್ವಿಯೂ ಆಗಿರಬಹುದು ಎಂದು ಸಸಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿನ್ನೆ ತಡರಾತ್ರಿ 1.30ರಿಂದ 2.30ರ ಒಳಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಇಳಿಯಬೇಕಿತ್ತು. ಹಾಗೇ ಲ್ಯಾಂಡರ್​ ಕೊಂಡೊಯ್ದಿದ್ದ ಪ್ರಜ್ಞಾನ್​ ರೋವರ್​ ಮುಂಜಾನೆ 5.30-6.30ರೊಳಗೆ ಲ್ಯಾಂಡರ್​ ನಿಂದ ಬೇರ್ಪಟ್ಟು ಚಂದ್ರನನ್ನು ಸ್ಪರ್ಶಿಸುತ್ತಿತ್ತು. ಆದರೆ, ಕೊನೇ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್​ ಸಂಪರ್ಕ ಕಳೆದುಕೊಂಡು ಸಣ್ಣ ನಿರಾಶೆಯನ್ನುಂಟು ಮಾಡಿದೆ.

ಆರಂಭದಲ್ಲಿ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವ ಮುನ್ಸೂಚನೆ ನೀಡಿತ್ತಾದರೂ, ಲ್ಯಾಂಡಿಂಗ್ ಗೆ ಇನ್ನೂ ಕೇವಲ 2.1 ಕಿಮೀ ಅಂತರವಿದ್ದಾಗ ಸಿಗ್ನಲ್ ಕಡಿತವಾಯಿತು. ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸುವ ಸತತ ಪರಿಶ್ರಮ ಪಟ್ಟರಾದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಸ್ರೋ ಅಧ್ಯಕ್ಷ ಕೆ ಶಿವನ್ ವಿಕ್ರಮ್ ಲ್ಯಾಂಡರ್ ನ ಸಂಪರ್ಕ ಕಡಿತವಾಗಿರುವ ಕುರಿತು ಘೋಷಣೆ ಮಾಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com