ಇಸ್ರೋಗೆ ಜಿಎಸ್ಎಲ್ ವಿ ಎಂಕೆ2 ನೌಕೆಯ ಎಲ್-40 ಹಸ್ತಾಂತರಿಸಿದ ಹೆಚ್ಎಎಲ್

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ಜಿಎಸ್ಎಲ್ ವಿ ಎಂಕೆ2 ಉಪಗ್ರಹ ಉಡಾವಣೆ ನೌಕೆಯ ಎಲ್-40 ಹಂತವನ್ನು ಹಸ್ತಾಂತರಿಸಿದೆ.
ಎಲ್-40 ಹಸ್ತಾಂತರಿಸಿದ ಹೆಚ್ಎಎಲ್
ಎಲ್-40 ಹಸ್ತಾಂತರಿಸಿದ ಹೆಚ್ಎಎಲ್

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ಜಿಎಸ್ಎಲ್ ವಿ ಎಂಕೆ2 ಉಪಗ್ರಹ ಉಡಾವಣೆ ನೌಕೆಯ ಎಲ್-40 ಹಂತವನ್ನು ಹಸ್ತಾಂತರಿಸಿದೆ.

ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಇಸ್ರೋ ತನ್ನ ಜಿಯೋಸ್ಟೇಷನರಿ ಉಪಗ್ರಹ ಉಡಾವಣಾ ವಾಹನ-ಮಾರ್ಕ್ II (ಜಿಎಸ್ಎಲ್ ವಿ ಎಂಕೆ2) ಉಪಗ್ರಹ ಉಡಾವಣಾ ನೌಕೆಯನ್ನು ಉಡಾಯಿಸುತ್ತಿದ್ದು, ಇದಕ್ಕಾಗಿ ಎಚ್ ಎಎಲ್ ತಾನು ನಿರ್ಮಿಸಿರುವ ಎಲ್-40 ಬೃಹತ್ ಉಪಕರಣವನ್ನು ಇಸ್ರೋಗೆ ಹಸ್ತಾಂತರಿಸಿದೆ. ಎಚ್ ಎಎಲ್ ಇಸ್ರೋಗೆ ನೀಡಿದ 50ನೇ ಎಲ್-40 ಇದಾಗಿದ್ದು, ಎಚ್ ಎಎಲ್ ಮತ್ತು ಇಸ್ರೋ ಜಿಎಸ್ಎಲ್ ವಿ ಎಫ್ 10 ಮತ್ತು ಎಫ್ 12 ಉಡಾವಣಾ ನೌಕೆಗಳ ಎಲ್ 40 ಹಂತ ತಯಾರಿಸಿ ಕೊಡುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಅದರಂತೆ ಮಾರ್ಚ್ ತಿಂಗಳ ಹೊತ್ತಿಗೆ ಜಿಎಲ್ಎಲ್ ವಿ ಎಂಕೆ 2 ನೌಕೆಯ ಎಫ್ 10 ಹಂತವನ್ನು ಎಚ್ಎಎಲ್ ರವಾನೆ ಮಾಡಲಿದೆ.

ಎಚ್ಎಎಲ್ ಎಲ್-40 ಮಾತ್ರವಲ್ಲದೇ ರಿವರ್ಟೆಡ್ ರಚನೆಗಳು, ಪ್ರೊಪೆಲ್ಲಂಟ್ ಟ್ಯಾಂಕ್ ಗಳು (ಇಂಧನ ಟ್ಯಾಂಕ್)ಗಳನ್ನು ತಯಾರಿಸಿ ಇಸ್ರೋಗೆ ಹಸ್ತಾಂತರಿಸುತ್ತಿದೆ. ಇದಲ್ಲದೆ ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್‌ಎಲ್‌ವಿ), ಜಿಎಸ್‌ಎಲ್‌ವಿ ಎಂಕೆಐಐ ಮತ್ತು ಜಿಎಸ್‌ಎಲ್‌ವಿ ಎಂಕೆಐಐಐನ ಉಡಾವಣಾ ವಾಹನಗಳ ವಿವಿಧ ಉಪಗ್ರಹಗಳ ರಚನೆಗಳ ಸಂಪರ್ಕ ಉಪಕರಣಗಳನ್ನೂ ಕೂಡ ಎಚ್ಎಎಲ್ ನಿರ್ಮಿಸುತ್ತಿದೆ. 

ಕಳೆದ ಮೂರು ದಶಕಗಳಿಂದ ಎಚ್ಎಎಲ್ ಮತ್ತು ಇಸ್ರೋ ಪರಸ್ಪರ ಒಡಂಬಡಿಕೆ ಮೇಲೆ ಕೆಲಸ ಮಾಡುತ್ತಿದ್ದು, ಇಸ್ರೋಜದ ಬಹುತೇಕ ಎಲ್ಲ ಉಡ್ಡಯನ ಯೋಜನೆಗಳಲ್ಲಿ ಎಚ್ಎಎಲ್ ಪ್ರಮುಖ ಉಪಕರಣಗಳನ್ನು ತಯಾರಿಸಿಕೊಡುತ್ತಾ ಬಂದಿದೆ. ಪ್ರಮುಖವಾಗಿ ಇಸ್ರೋದ ಚಂದ್ರಯಾನ, ಚಂದ್ರಯಾನ 2, ಮಂಗಳಯಾನ ಯೋಜನೆಗಳಿಗೆ ಎಚ್ಎಎಲ್ ಪ್ರಮುಖ ಬಿಡಿಭಾಗಗಳನ್ನು ತಯಾರಿಸಿಕೊಟ್ಟಿದೆ. ಇಷ್ಟು ಮಾತ್ರವಲ್ಲದೇ ಭವಿಷ್ಯದ ಗಗನಯಾನ ಯೋಜನೆಯಲ್ಲೂ ಎಚ್ಎಎಲ್ ಪಾತ್ರ ಪ್ರಮುಖ ಎಂದು ಇಸ್ರೋದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಹಸ್ತಾಂತರ ಕಾರ್ಯಕ್ರಮದಲ್ಲಿ ಬೆಂಗಳೂರು ಎಚ್‌ಎಎಲ್ ಸಿಇಒ ಅಮಿತಾಭ್ ಭಟ್, ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕ ಡಾ.ವಿ.ನಾರಾಯಣನ್, ಉಪ ನಿರ್ದೇಶಕ (ಎಂಎಂಇ, ಎಲ್‌ಪಿಎಸ್‌ಸಿ) ಡಾ.ಎ.ಮಣಿಮಾರನ್, ಎಚ್‌ಎಎಲ್ ಏರೋಸ್ಪೇಸ್ ವಿಭಾಗದ ಜನರಲ್ ಮ್ಯಾನೇಜರ್ ಮಿಹಿರ್ ಮಿಶ್ರಾ ಮತ್ತು ಇತರರು ಇಸ್ರೋ ಮತ್ತು ಎಚ್‌ಎಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com