ತನ್ನಷ್ಟಕ್ಕೆ ತಾನೇ ಮುಚ್ಚಿಕೊಳ್ಳುತ್ತಿದೆ ಓಝೋನ್ ರಂಧ್ರ; 4 ದಶಕಗಳಲ್ಲಿ ಪ್ರಕ್ರಿಯೆ ಸಂಪೂರ್ಣ: ವಿಜ್ಞಾನಿಗಳ ಆಶಯ

ಜಾಗತಿಕ ತಾಪಮಾನ ಏರಿಕೆಯಂತಹ ಪರಿಸ್ಥಿತಿಯ ನಡುವೆಯೇ ವಿಜ್ಞಾನಿಗಳು ಶುಭ ಸುದ್ದಿಯೊಂದನ್ನು ನೀಡಿದ್ದು, ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್: ಜಾಗತಿಕ ತಾಪಮಾನ ಏರಿಕೆಯಂತಹ ಪರಿಸ್ಥಿತಿಯ ನಡುವೆಯೇ ವಿಜ್ಞಾನಿಗಳು ಶುಭ ಸುದ್ದಿಯೊಂದನ್ನು ನೀಡಿದ್ದು, ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಹೌದು.. ಮನಿ ಕಂಟ್ರೋಲ್ ವೆಬ್‌ಸೈಟ್ ವರದಿ ಈ ಕುರಿತು ವರದಿ ಪ್ರಕಟಿಸಿದ್ದು, ಪರಿಸರ ವಿಜ್ಞಾನಿಗಳ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಓಝೋನ್ ಪದರದಲ್ಲಿನ ರಂದ್ರ ಇದೀಗ ಕ್ರಮೇಣ ತಾನೇ ತಾನಾಗಿ ಮುಚ್ಚಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ. ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದ್ದು, ಮುಂದಿನ 43 ವರ್ಷಗಳಲ್ಲಿ ಈ ರಂಧ್ರವು ಸಂಪೂರ್ಣ ಮುಚ್ಚಿಕೊಳ್ಳಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ ಎಂದು ವರದಿ ಮಾಡಿದೆ.

ಏನಿದು ಓಝೋನ್ ಪದರ? ಭೂಮಿಯ ರಕ್ಷಣೆಯಲ್ಲಿ ಅದರ ಪಾತ್ರವೇನು?
ವರದಿಯಲ್ಲಿರುವಂತೆ ಮೂರು ಪರಮಾಣುಗಳ ಆಮ್ಲಜನಕದಿಂದ ರಚನೆಯಾಗಿರುವ ಈ ಓಝೋನ್ ಪದರವು ಸೂರ್ಯನಿಂದ ಹೊಮ್ಮುವ ಅಪಾಯಕಾರಿಯಾದ ಅತಿನೇರಳೆ ವಿಕಿರಣಗಳ ಬಹುಪಾಲನ್ನು ಹೀರಿಕೊಳ್ಳುತ್ತದೆ. ಒಂದು ವೇಳೆ ಓಜೋನ್‌ನ ಈ ಫಿಲ್ಟರ್ ಇರದೇ ಇದ್ದರೆ ಇಷ್ಟು ಹೊತ್ತಿಗೆ ಭೂಮಿಯ ಜೀವಿಗಳೆಲ್ಲಾ ನಾಶವಾಗಿರುತ್ತಿದ್ದವು. ಇಂತಹ ಭೂಮಿಗೆ ಕವಚದಂತಿರುವ ಓಝೋನ್ ಪದರದಲ್ಲಿ ರಂಧ್ರ ಏರ್ಪಟ್ಟಿತ್ತು. ಇದೀಗ, ಆ ರಂಧ್ರ ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತದೆ. ಓಝೋನ್ ರಂಧ್ರವು 2066ರ ವೇಳೆಗೆ ಸಂಪೂರ್ಣವಾಗಿ ಮುಚ್ಚಿಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ತಜ್ಞರ ತಂಡ ಹೇಳಿದೆ.

ವಾಯುಮಂಡಲದಲ್ಲಿ ಅವ್ಯಾಹತವಾಗಿ ಪಸರಿಸುತ್ತಿರುವ ಹೊಗೆಯಲ್ಲಿನ ನೈಟ್ರೊಜನ್ ಕಣಗಳು ವಿಷಕಾರಿ ಓಝೋನ್ ಅನಿಲವನ್ನು ಉತ್ಪಾದಿಸುತ್ತವೆ. ಓಝೋನ್ ಎತ್ತರದಲ್ಲಿ ಇದ್ದರೆ ಅದು ಭೂಮಿಗೆ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ. ಬದಲಿಗೆ ಅದು ನಮ್ಮದೇಹವನ್ನು ಹೊಕ್ಕರೆ ಶರೀರವೇ ನಂಜಿನ ಗೂಡಿನಂತಾಗುತ್ತದೆ. ಭೂಮಿಯ ಮೇಲೆ ಓಝೋನ್ ಪದರ ಆವರಿಸಿರುವುದರಿಂದ ಸೂರ್ಯನ ಉಗ್ರ ತಾಪ ನಮ್ಮನ್ನು ಬಾಧಿಸುತ್ತಿಲ್ಲ. ಓಝೋನ್‌ ಪದರದ ಹಾನಿಯಿಂದ ನೇರಳಾತೀತ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶ ಮಾಡಿ, ಮಾನವನ ದೇಹ ಹಾಗೂ ಜಲಚರ ಸೇರಿದಂತೆ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿ ಹಾಡಿದಂತೆ ಎಂದು ಈ ಹಿಂದೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದಿದ್ದರು.

ಓಜೋನ್ ಪದರ ಕ್ಷೀಣಿಸಲು ಕಾರಣವೇನು?
ಓಝೋನ್ ಪದರ ಕ್ಷೀಣಿಸಲು ಹವಾನಿಯಂತ್ರಣ ಸಾಧನಗಳು (ಎಸಿ), ಪ್ರಿಡ್ಜ್ ಮತ್ತು ಇತರೆ ಉತ್ಪನ್ನಗಳಿಂದ ಬಿಡುಗಡೆಯಾಗುವ ಅಪಾಯಕಾರಿ ರಾಸಾಯನಿಕಗಳು ಶೇ.99ರಷ್ಟು ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ‘ಜಾಗತಿಕವಾಗಿ ಸದ್ಯ ಜಾರಿಯಲ್ಲಿರುವ ವಾಯುಮಾಲಿನ್ಯ ತಡೆ ನೀತಿಗಳು ಹೀಗೆ ಮುಂದುವರೆದರೆ 2066ರ ಹೊತ್ತಿಗೆ ಅಂಟಾರ್ಕ್ಟಿಕಾದ ಓಝೋನ್ ಪದರವು 1980ರ ಸ್ಥಿತಿಗೆ(ಓಜೋನ್ ರಂಧ್ರದ ಕಂಡುಬಂದ ಸಮಯ) ಮರಳಲಿದೆ. 2045ರ ಹೊತ್ತಿಗೆ ಆರ್ಕ್ಟಿಕ್‌ನಲ್ಲಿ ಮತ್ತು 2040ರ ಹೊತ್ತಿಗೆ ಜಗತ್ತಿನ ಇತರೆಡೆ ಓಝೋನ್ ಪದರ ಸಾಮಾನ್ಯ ಸ್ಥಿತಿಗೆ ಮರಳಲಿದೆ’ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com